ಕಾರವಾರ: ಇಲ್ಲಿನ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡದ ಬಳಿ ಬೋಟ್ ಮುಳುಗಿದ ದುರ್ಘಟನೆಯಲ್ಲಿ ಮಡಿದವರ ಸಂಖ್ಯೆ 14ಕ್ಕೇರಿದೆ. ನಾಪತ್ತೆಯಾಗಿರುವ ಮತ್ತಿಬ್ಬರು ಮಕ್ಕಳಿಗಾಗಿ ಶೋಧ ಮುಂದುವರಿದಿದೆ.
ಸೋಮವಾರ ಎಂಟು ಜನರ ಶವ ದೊರಕಿದ್ದವು. ಮಂಗಳವಾರ ಮತ್ತೆ ಆರು ಮಂದಿಯ ಕಳೇಬರಗಳು ಪತ್ತೆಯಾಗಿವೆ. ಒಟ್ಟು 19 ಮಂದಿಯನ್ನು ರಕ್ಷಿಸಲಾಗಿದೆ. ದುರಂತಕ್ಕೆ ಕಾರಣ ತಿಳಿಯಲು ಮೂರು ದೃಷ್ಟಿಕೋನದ ತನಿಖೆಗೆ ಆದೇಶಿಸಲಾಗಿದ್ದು, ಬೋಟ್ ಮಾಲಿಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ನೌಕಾಪಡೆಯ ಹೆಲಿ ಕಾಪ್ಟರ್ ಹಾಗೂ ಡೋರ್ನಿಯರ್ ಏರ್‌ಕ್ರಾಫ್ಟ್ ಗಳು ಮಂಗಳವಾರ ಬೆಳಗಿನಿಂದ ಹತ್ತಾರು ಸುತ್ತು ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಗುಂಟ ಶವಗಳಿಗಾಗಿ ಹುಡುಕಾಟ ನಡೆಸಿದವು. ದೇವಗಡ ದ್ವೀಪ ಮತ್ತು ಕೂರ್ಮಗಡ ದ್ವೀಪದ ಮಧ್ಯೆ ಲೈಟ್‌ಹೌಸ್ ದ್ವೀಪದ ಬಳಿ ಬೆಳಗ್ಗೆ ಕಿರಣ್ (5) ಎಂಬುವರ ಶವ ಕಾಣಿಸಿತು. ತಕ್ಷಣ ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕ ಪಡೆ ಅತ್ಯಾಧುನಿಕ ಬೋಟ್‌ಗಳಿಗೆ ಮಾಹಿತಿ ನೀಡಿ ಶವಗಳನ್ನು ಪಡೆಯಲು ಸೂಚಿಸಿತು. ಮಧ್ಯಾಹ್ನ 12:30ರ ವೇಳೆಗೆ ಅಳ್ವೇವಾಡ ದಂಡೆ ಬಳಿ ಪರುಶುರಾಮ ಬಾಳಲಕೊಪ್ಪ ಅವರ ಶವ ಪತ್ತೆಯಾಗಿದೆ. ನೌಕಾದಳದ ತಿಲಾಂಚಲ ನೌಕೆಯು ಸಂಜೀವಿನಿ (14)ಯವರ ಶವವನ್ನು ಹುಡುಕಿದೆ. ಸಂಜೆ ನಾಲ್ಕರ ಹೊತ್ತಿಗೆ ಸೌಜನ್ಯ (12) ಎಂಬ ಬಾಲಕಿ ಶವ ಕೂರ್ಮಗಡ ಬಳಿ ದೊರೆತಿದೆ. ಕಾರವಾರದ ಶ್ರೇಯಸ್ ಪಾವಸ್ಕರ್(28) ಅವರ ಮೃತದೇಹ ದೇವಭಾಗ ಬೀಚ್ ಬಳಿ ಪತ್ತೆಯಾಗಿದೆ. ಸಂಜೆ ಪೊಂಡಾದ ಗೀತಾ ಹುಲಸ್ವಾರ ಅವರ ಶವ ‘ಸಾಗರ ದರ್ಶಿನಿ’ ಬಳಿ ಸಿಕ್ಕಿತು. ಪರುಶುರಾಮ ಅವರ ಮಗ ಸಂದೀಪ ಹಾಗೂ ಸೋಮಪ್ಪ ಅವರ ಮಗ ಕೀರ್ತಿ ಎಂಬ ಮಕ್ಕಳಿಗಾಗಿ ಹುಡುಕಾಟ ಮುಂದುವರಿದಿದೆ.
ಒಂದೇ ಕುಟುಂಬದ 9 ಮಂದಿ ಸಾವು: ಈ ದುರಂತದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹೊಸೂರಿನ ಒಂದೇ ಕುಟುಂಬದ 9 ಜನ ಸಮುದ್ರ ಪಾಲಾಗಿದ್ದಾರೆ. ಬಾಲಕನೊಬ್ಬ ಪಾರಾಗಿದ್ದಾನೆ. ಹೊಸೂರಿನ ಪರುಶುರಾಮ ಸೇರಿದಂತೆ ಅವರ ಮೂವರ ಮಕ್ಕಳು ಮತ್ತು ಪತ್ನಿ ಭಾರತಿ ಹಾಗೂ ಅವರ ಸಹೋದರನ ಮೂವರು ಮಕ್ಕಳು, ಸಹೋದರನ ಪತ್ನಿ ಮಂಜವ್ವ ಮೃತಪಟ್ಟಿದ್ದಾರೆ. ಬದುಕುಳಿದವರಲ್ಲಿ ರಾಧಾಕೃಷ್ಣ ಹುಲಸ್ವಾರ ಎಂಬುವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನೇಹಾ ನಿಲೇಶ್ ಪೆಡ್ನೇಕರ್ ಎಂಬುವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸಾದ ಕೊಡಲು ಬಂದವರು ಜಲ ಸಮಾಧಿಯಾದರು!
‘ದೇವರು ಎಲ್ಲರನ್ನೂ ಕರೆಸಿಕೊಂಡ. ಕನಕಪ್ಪ ಕಾರವಾರದಲ್ಲಿ 15 ವರ್ಷದಿಂದ ಇದ್ದಾನೆ. ಅವನಿಗೆ ಅಯ್ಯಪ್ಪನ ಪ್ರಸಾದ ನೀಡಿ, ಜಾತ್ರೆ ನೋಡಲು ಬಂದಿದ್ದರು. ಆದರೆ ಈಗ ಯಾರೂ ಇಲ್ಲ..’ ಎಂದು ಭಾರತಿ ಅವರ ಚಿಕ್ಕಮ್ಮ ಶೇಖವ್ವ ಪರುಶುರಾಮ ಮಾತು ಮುಂದುವರಿಸಲಾಗದೆ ಬಿಕ್ಕಳಿಸಿದರು. ‘ಉದಯವಾಣಿ’ ಜತೆ ಮಾತನಾಡಿ, ‘ಭಾರತಿ ಅವರದ್ದು ಚೆಂದದ ಸಂಸಾರ. ಹೊಲ, ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಸಣ್ಣ ಮನೆ ಸಹ ಕಟ್ಟಿಕೊಂಡಿದ್ದರು. ನಾಲ್ವರು ಮುತ್ತಿನಂತಹ ಮಕ್ಕಳಿದ್ದವು ಆದರೆ ಈಗ ದೇವರು ಅನ್ಯಾಯ ಮಾಡಿಬಿಟ್ಟ ಎಂದು ಬಿಕ್ಕಳಿಸಿದರು. ಪಕ್ಕದಲ್ಲೇ ಇದ್ದ ಗಣೇಶ್, ‘ಅಪ್ಪಾಜಿ ಬೇಕು’ ಎಂದು ಅಳುತ್ತಿದ್ದ. ಕಂಬನಿ ಮಿಡಿದ ಕಾರವಾರ ಜನ: ದುರಂತದ ಸುದ್ದಿ ತಿಳಿದು ಕಾರವಾರದ ಜನ ಕಂಬನಿ ಮಿಡಿದರು. ಮೃತರಲ್ಲಿ ಕಾರವಾರದ ಇಬ್ಬರು, ಕಾರವಾರ ಮೂಲದ ಪೊಂಡಾ ನಿವಾಸಿಯೊಬ್ಬ, ಕೊಪ್ಪಳ ಹಾಗೂ ಹಾವೇರಿಯ ಹೊಸೂರಿನವರು ಇದ್ದ ಕಾರಣ ಅವರ ಸಂಬಂಧಿಕರು ಕಾರವಾರ ಮೆಡಿಕಲ್ ಕಾಲೇಜು ಆವರಣಕ್ಕೆ ಆಗಮಿಸಿದ್ದರು. ಮೃತರ ಸಂಬಂಧಿಕರ ಆಂಕ್ರದನ ಮುಗಿಲು ಮುಟ್ಟಿತ್ತು.