ಕಾರವಾರ : ದಂಡ ಹಾಕಿದ ಮೊತ್ತ ಕಡಿಮೆ ಮಾಡಲು ಮೊಬೈಲ್ ಬೇಡಿಕೆ ಇಟ್ಟ ಶಿರಸಿ ಉಪ ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಕೆ. ಸಿ. ಮೋಹನಗೆ ಒಂದು ವರ್ಷ ಕಾರಾಗೃಹ ವಾಸ , ಐದು ಸಾವಿರ ರೂ. ದಂಡ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಡಿ. ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.
ಯಲ್ಲಾಪುರದ ವಿಶ್ವನಾಥ ನಾರಾಯಣ ದೇಸಾಯಿ, ಅಂಗಡಿಯ ಮೇಲೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ಮೋಹನ್ ದಾಳಿ ಮಾಡಿದ್ದರು. ಅಂಗಡಿಯಲ್ಲಿ ಮೊಬೈಲ್ ಸೆಟ್ಟಗಳನ್ನು, ಅದರ ಬಿಲ್ಲನ್ನು ಹಾಜರ ಪಡಿಸದೇ ಇದ್ದ ಹಾಗೂ ಉತ್ಪಾದಕರ ಹೆಸರು ವಿಳಾಸ ಹಾಗೂ ದಿನಾಂಕಗಳನ್ನು ನಮೂದಿಸದೆ ಇರುವ ಕಾರಣ ವಿಶ್ವನಾಥ ದೇಸಾಯಿ ಅಂಗಡಿಯ ಆ ಮೊಬೈಗಳನ್ನು ಜಪ್ತಿ ಮಾಡಿದ್ದರು. ಹಾಗೂ 20-25 ಸಾವಿರ ದಂಡವನ್ನು ಭರಿಸಬೇಕು ಅಂತಾ ಹೇಳಿದ್ದರು. ನಂತರ ದಂಡದ ಹಣವನ್ನು ಕಡಿಮೆ ಮಾಡಲು ಲಂಚದ ರೂಪದಲ್ಲಿ ಒಂದು ಸ್ಯಾಮ್‌ಸೆಂಗ್ ಮೊಬೈಲ್ ಸೆಟ್ಟಿಗೆ ಬೇಡಿಕೆ ಇಟ್ಟಿದ್ದರು. ಹಾಗೂ 3000 ರೂ. ದಂಡವನ್ನು ತುಂಬುವಂತೆ ಹೇಳಿ ಲಂಚದ ರೂಪದಲ್ಲಿ ಮೊಬೈಲ್ ಗಾಗಿ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮೋಹನ್ ಎಂಬ ಅಧಿಕಾರಿಯ ವಿರುದ್ಧ ಕಾರವಾರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ ದೇಸಾಯಿ ಪ್ರಕರಣ ದಾಖಲಿಸಿದ್ದರು . ನಂತರ ಟ್ರ‍್ಯಾಪ್ ಕಾರ್ಯಾಚರಣೆಯ ಕಾಲದಲ್ಲಿ ಆಪಾದಿತ ಅಧಿಕಾರಿ ಮೋಹನ್ ಲಂಚದ ರೂಪದಲ್ಲಿ ಸ್ಯಾಂಮ್ ಸಂಗ್ ಗ್ಯಾಲಕ್ಸಿ ಯಂಗ್ ವೈ ಡಿಯೋಸ್ ಮೊಬೈಲ್ ಹ್ಯಾಂಡ್ ಸೆಟ್ ಪಡೆವಾಗ ಸಿಕ್ಕಿಬಿದ್ದಿದ್ದರು.
ನ್ಯಾಯಾಲಯವು ಸ್ಪೆಶಲ್ ಕೇಸ್ ವಿಚಾರಣೆಯನ್ನು ನಡೆಸಿತ್ತು . ಹಾಗೂ ಬುಧುವಾರ ಆಪಾದಿತನ ವಿರುದ್ಧ ಭ್ರಷ್ಟ್ಟಾಚಾರ ಪ್ರತಿಬಂಧಕ ಕಾಯ್ದೆ-1988 ಕಲಂ:07, 13(1) (ಡಿ) ಸಹಿತ 13 (2) ನೇದ್ದರಂತೆ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾಗೃಹ ವಾಸ ವಿಧಿಸಿದೆ. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರಾವಾಸ ಶಿಕ್ಷೆಗೆ ಗುರಿಪಡಿಸಲು ನ್ಯಾಯಾಧೀಶರು ಆದೇಶಿಸಿರುತ್ತಾರೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮೀಕಾಂತ ಎಸ್. ಪ್ರಭು ವಾದಿಸಿದ್ದರು ಎಂದು ಕಾರವಾರದ ಕರ್ನಾಟಕ ಲೋಕಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.