Advertisement

ಹಾರುವ ಓತಿಯ ಬೆನ್ನು ಕಚ್ಚಿದ ವಿಜ್ಞಾನಿಯ ಕಥೆ ಕರ್ವಾಲೋ

07:07 PM Jun 13, 2021 | Team Udayavani |

ನಮ್ಮ ಸುತ್ತ ಮುತ್ತಲಿನ ಪರಿಸರ ಎಷ್ಟೊಂದು ಅದ್ಭುತ ಜೀವ ವೈವಿಧ್ಯತೆಗಳನ್ನು ತನ್ನ ಭೂ ಗರ್ಭದೊಳಗೆ ಅಡಗಿಸಿಕೊಂಡಿದೆ ಅಲ್ಲವೇ? ನಮ್ಮ ಕಲ್ಪನೆಗೂ ನಿಲುಕದ ಸಸ್ಯ ಹಾಗೂ ಪ್ರಾಣಿ ಸಂಪತ್ತು ಪಕೃತಿಯ ಒಡಲಾಳದಲ್ಲಿ ರಾರಾಜಿಸುತ್ತಿದೆ. ಇಂಥಹ ಅಗೋಚರ ಜೀವ ಜಗತ್ತಿನ ಮಹತ್ವವನ್ನು ತಿಳಿಯಬೇಕಾದರೆ ನೀವು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಓದಲೇಬೇಕು.

Advertisement

ಇದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಅವರು ಹೇಗೆ ಯಶಸ್ವಿಯಾದರೂ ಎಂಬುದೇ ಈ ಕಾದಂಬರಿಯ ಕಥಾವಸ್ತು. ಇಲ್ಲಿ ತೇಜಸ್ವಿಯವರು ಕಥೆಯ ನಿರೂಪಕ ಹಾಗೂ ಪಾತ್ರದಾರನೂ ಆಗಿ ಎರಡೂ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಹೇಶ್ವರಯ್ಯ ಇನ್ನಿಲ್ಲ

‘ಕರ್ವಾಲೋ’ ಕಾದಂಬರಿಯು ಮೂಡುಗೆರೆಯ ಕಗ್ಗಾಡಿನ ಹಳ್ಳಿಯಲ್ಲಿ ನಡೆಯುವ ಘಟನೆ. ಮೂಡುಗೆರೆಯ ಜೇನು ಸೊಸೈಟಿಯಲ್ಲಿ ಲೇಖಕರಿಗೆ ಆಕಸ್ಮಿಕವಾಗಿ ಪರಿಚಯವಾದ ಮಂದಣ್ಣ ಹಳ್ಳಿ ಗಮಾರನಂತೆ ಕಂಡರೂ ಅವನ ಮುಖಾಂತರ ಪರಿಚಯ ಆಗುವ ವಿಜ್ಞಾನಿ ಕರ್ವಾಲೋ ಲೇಖಕರಿಗೆ ಮಂದಣ್ಣ ಎಂಥ ಅದ್ಭುತ ಪ್ರಕೃತಿತಜ್ಞ ಎಂದು ತಿಳಿಸುವ ಮೂಲಕ ನಿರೂಪಕರನ್ನು ನಿಬ್ಬೆರಗಾಗಿಸುತ್ತಾರೆ. ಹಾಗೂ ಮಂದಣ್ಣನಿಗೆ ಪ್ರಕೃತಿಯಲ್ಲಿರುವ ಜೀವ ಜಂತುಗಳ ಬಗ್ಗೆ ಇರುವ ಅಪಾರ ಜ್ಞಾನವೇ ಕರ್ವಾಲೋ ಅಂತಹ ವಿಜ್ಞಾನಿಯ ಶಿಷ್ಯನಾಗಲೂ ಸಾಧ್ಯವಾಯಿತು ಎಂದು ಲೇಖಕರು ಅರ್ಥ ಮಾಡಿಕೊಂಡಾಗ ಅವರ ಮನದಲ್ಲಿ ಇದ್ದ ಜಿಜ್ಞಾಸೆ ದೂರವಾಯಿತು.

ಕಥೆಯನ್ನು ಓದುತ್ತಾ ಹೋದ ಹಾಗೆ ನಾವು ಯಾವುದೊ ಕಾಡಿನಲ್ಲಿ ಸಾಗುತ್ತಿದ್ದೇವೆ ಅನಿಸುತ್ತದೆ. ಕಾಲಗರ್ಭದೊಳಗೆ ಅಡಗಿರುವ ಇನ್ನೊಂದು ಜಗತ್ತಿನ ಕುರಿತು ಸಂಶೋಧನೆ ಮಾಡಲು ಹೊರಟ ವಿಜ್ಞಾನಿಯ ಗಂಭೀರ ಕಥೆಯಾದರೂ ಲೇಖಕರು ತಮ್ಮ ಮಾಂತ್ರಿಕ ಸ್ಪರ್ಶದಿಂದ ಓದುಗನಿಗೆ ಇತರೆ ಪಾತ್ರಗಳ ಮೂಲಕ ಹಾಸ್ಯವನ್ನು ಉಣಬಡಿಸಿದ್ದಾರೆ.

Advertisement

ಮದುವೆಯಾಗಲು ಹಪಹಪಿಸುತ್ತಿರುವ ಮಂದಣ್ಣ, ಕರ್ವಾಲೋ ಅವರ ಶಿಷ್ಯನಾಗಿ ಅವರಿಗೆ ಫೋಟೋಗ್ರಫಿ ಕೆಲಸ ಮಾಡಿಕೊಡುತ್ತಿದ್ದ ಪ್ರಭಾಕರ, ಮರ ಹತ್ತುವುದರಲ್ಲಿ ನಿಸ್ಸಿಮನಾದ ಎಂಗ್ಟ, ಬಿರಿಯಾನಿ ಮಾಡುವುದರಲ್ಲಿ ಸೈ ಎನಿಸಿಕೊಂಡ ಕರಿಯಪ್ಪ, ತನ್ನ ಹುಡುಗಾಟಿಕೆ ಬುದ್ಧಿಯಿಂದ ಎಡವಟ್ಟು ಮಾಡಿಕೊಳ್ಳುವ ಲೇಖಕರ ಮನೆಕೆಲಸದವ ಪ್ಯಾರ ಈ ಎಲ್ಲಾ ಪಾತ್ರಗಳು ಸೀರಿಯಸ್ ವಿಷಯಗಳಿಂದ ವಿರಾಮ ನೀಡುತ್ತದೆ. ಕಥೆ ಓದುತ್ತಾ ಕೊನೆಗೆ ಬೇಟೆಯಲ್ಲಿ ನಿಪುಣನಾದ ಲೇಖಕರ ನಾಯಿ ‘ಕಿವಿ’ಯೂ ನಮ್ಮ ಆತ್ಮೀಯ ಗೆಳೆಯನಾಗುತ್ತನೆ.

ಈ ಕಥೆ ಮಲೆನಾಡಿನ ಜೀವನ, ಜೇನುಸಾಕಣಿಕೆ, ಕಳ್ಳಭಟ್ಟಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ತತ್ವ ವಿಚಾರಗಳ ಅನ್ವೇಷಣೆ ಮುಂತಾದ ವಿಚಾರಗಳ ಮೂಲಕ ಓದುಗನ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಮಂದಣ್ಣ ಹಾಗೂ ಕರ್ವಾಲೋ  ನಡುವಿನ ಸಂಬಂಧ ಎಷ್ಟರ ಮಟ್ಟಿಗೆ ಇರುತ್ತೆ ಅಂದರೆ ಕಳ್ಳ ಭಟ್ಟಿಯಲ್ಲಿ ಸಿಕ್ಕಿಹಾಕಿಕೊಂಡ ಮಂದಣ್ಣನ ಬಿಡಿಸಲು ಸಾಕ್ಷಿ ಹೇಳಲು ಕೋರ್ಟ್ಗೆ ಸ್ವತಃ ಕರ್ವಾಲೋ ಅವರೇ ಬರುತ್ತಾರೆ. ಇದು ಜನರ ಇರಿಸುಮುರಿಸಿಗೆ ಕಾರಣವಾದರೂ ಅವರ ಬಗ್ಗೆ ಅಪಹಾಸ್ಯದ ಮಾತುಗಳು ಜನರು ಆಡಿದರೂ ಕರ್ವಾಲೊ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.  ಕೊನೆಗೆ ವಿಜ್ಞಾನಿ ಕರ್ವಾಲೋ ಇವರೆಲ್ಲರ ದೆಸೆಯಿಂದ ಹಾರುವ ಓತಿಯನ್ನು ಕಂಡುಹಿಡಿಯುವಲ್ಲಿ ಯಶಸ್ವೀಯಾಗಿ ಒಬ್ಬ ಕಾಲಜ್ಞಾನಿಯಾಗಿ ರೂಪುಗೊಳ್ಳುತ್ತಾರೆ.

ಕರ್ವಾಲೋ ಕಾದಂಬರಿ 1980ರಿಂದ 2010ರವರೆಗೆ ಒಟ್ಟು ಇಪ್ಪತ್ತೇಳು ಬಾರಿ ಮರು ಮುದ್ರಣಗೊಂಡಿದೆ. ಜೀವ ಜಗತ್ತಿನ ಮಹತ್ವ ಸಾರುವ ಈ ಕೃತಿ ಇಂಗ್ಲೀಷ್, ಹಿಂದಿ, ಮರಾಠಿ, ಮಲಯಾಳಂ, ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿ ಯಶಸ್ವೀಯಾಗಿರುವ ಇಂಥಹ ಅದ್ಭುತ ಕೃತಿಗೆ ಈಗ ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲದ್ದಿದ್ದರೂ ಒಮ್ಮೆಯೂ ಓದದ ಜನರು ಈ ಕೃತಿಯ ಮೇಲೆ ಒಂದು ಕ್ಷಣ ಕಣ್ಣಾಡಿಸಿದರೆ ನಮಗೆ ನಿಜಕ್ಕೂ ನಮ್ಮ ಪ್ರಕೃತಿಯಲ್ಲಿರುವ ಅದ್ಭುತ ಸಂಗತಿಗಳ ಅರಿವಾಗುವುದು, ನಾವು ಪ್ರತೀ ದಿನ ಈ ಜೀವಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತಗಳ ಮುಖಾಮುಖಿಯಾದರೂ ಅವುಗಳ ಮಹತ್ವವನ್ನು ಅರಿಯುವುದರಲ್ಲಿ ವಿಫಲರಾಗುತ್ತೆವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿನಾಶದಿಂದಾಗಿ ಇಂತಹ ಸ್ಪೇಷಿಸ್ ಮರೆಯಾಗುತ್ತಿದೆ. ಈ ಸ್ಪೇಷಿಸ್ ಮಹತ್ವವನ್ನು ತೇಜಸ್ವಿಯವರು ಸರಳ ಭಾಷೆಯಲ್ಲಿ ಈ ಕಾದಂಬರಿ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ.

-ಪೂಜಶ್ರೀ ತೋಕೂರು

ಇದನ್ನೂ ಓದಿ : ಡೀಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ನೇಮಿಸಲು ಸಹಿ ಸಂಗ್ರಹ ಅಭಿಯಾನ

Advertisement

Udayavani is now on Telegram. Click here to join our channel and stay updated with the latest news.

Next