Advertisement

Kachchatheevu ಒಪ್ಪಂದಕ್ಕೆ ಕೈ ಜೋಡಿಸಿದ್ದ ಕರುಣಾನಿಧಿ: ಮಾಹಿತಿ ಬಹಿರಂಗ

12:54 AM Apr 02, 2024 | Vishnudas Patil |

ಹೊಸದಿಲ್ಲಿ: ಕಚ್ಚಥೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟು ಕೊಡುವಲ್ಲಿ ಕಾಂಗ್ರೆಸ್‌ ಸರಕಾರದ ಜತೆಗೆ ಡಿಎಂಕೆ ಮುಖ್ಯಸ್ಥ, ತಮಿಳುನಾಡಿನ ಅಂದಿನ ಸಿಎಂ ಕರುಣಾನಿಧಿ ಕೂಡ ಕೈ ಜೋಡಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

Advertisement

ಕಚ್ಚಥೀವು ಕುರಿತು ಕರುಣಾನಿಧಿಯನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಸಂಸತ್ತಿನಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಖ್ಯಾತ ಸಂಸದೀಯ ಪಟು ಎರಾ ಸೆಳಿಯನ್‌ಗೂ ಈ ವಿಚಾರ ಗೊತ್ತಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಚ್ಚಥೀವು ಶ್ರೀಲಂಕಾಕ್ಕೆ ಹಸ್ತಾಂತರ ಮಾಡಿದ್ದ ಬಗ್ಗೆ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಆರ್‌ಟಿಐ ಮೂಲಕ ಪಡೆದುಕೊಂಡ ಮತ್ತಷ್ಟು ವಿವರಗಳು ಚರ್ಚೆಗೆ ಕಾರಣವಾಗಿವೆ. 1974 ಜುಲೈ 23ರಂದು ಅಂದಿನ ವಿದೇ ಶಾಂಗ ಸಚಿವರಾಗಿದ್ದ ಸ್ವರಣ್‌ ಸಿಂಗ್‌ ಸಂಸತ್ತಿನಲ್ಲಿ ಭಾರತ- ಲಂಕಾ ನಡುವಿನ ಒಪ್ಪಂದದ ಕುರಿತು ಹೇಳಿಕೆ ನೀಡುತ್ತಿದ್ದರು. ಈ ವೇಳೆ ಸಂಸದ ಎರಾ ಸೆಳಿಯನ್‌ ಇಂದಿರಾ ಸರಕಾರದ ವಿರುದ್ಧ ಸಂಸತ್ತಿನಲ್ಲೇ ಗುಡುಗಿ, ಸರಕಾರವು ದ್ವೀಪ ಒಪ್ಪಂದದ ಬಗ್ಗೆ ಕರುಣಾನಿಧಿ ನೇತೃತ್ವದ ಸರಕಾರವನ್ನು ಕತ್ತಲೆಯಲ್ಲಿ ಇಟ್ಟಿದೆ.

ಈ ಒಪ್ಪಂದ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ನಮ್ಮ ಪ್ರದೇಶ ವನ್ನು ಬೇರೆ ರಾಷ್ಟ್ರಕ್ಕೆ ಶರಣಾಗತಿ ಮಾಡಿಸಿದಂತಾಗಿದೆ ಎಂದು ಹೇಳಿ ಸದನದಿಂದ ಹೊರ ನಡೆದಿದ್ದರು. ಆದರೆ, ವಾಸ್ತವದಲ್ಲಿ ಸಿಎಂ ಆಗಿದ್ದ ಕರುಣಾನಿಧಿಗೆ ಒಪ್ಪಂದದ ಬಗ್ಗೆ ತಿಳಿದಿತ್ತು. ಆರ್‌ಟಿಐ ಮಾಹಿತಿ ಪ್ರಕಾರ 1974ರ ಜೂ.19ರಂದೇ ಅಂದಿನ ವಿದೇಶಾಂಗ ಕಾರ್ಯದರ್ಶಿ ಕೆವಲ್‌ ಸಿಂಗ್‌ ಅವರು ಕರುಣಾನಿಧಿ ಅವರನ್ನು ಮದ್ರಾಸ್‌ನಲ್ಲಿದ್ದ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದರು. ಈ ವೇಳೆ ಅವರಿಗೆ ಒಪ್ಪಂದದ ಬಗ್ಗೆಯೂ ತಿಳಿಸಲಾಗಿದ್ದು, ಕರುಣಾನಿಧಿ ಕೂಡ ಅದಕ್ಕೆ ಒಪ್ಪಿಗೆ ನೀಡಿದ್ದರು ಎಂದು ತಿಳಿಸಲಾಗಿದೆ.

ಪಿಎಂ ಉತ್ತರಿಸುತ್ತೀರಾ?
1 ರೂ. ತೆರಿಗೆ ನೀಡಿದರೂ ನಮಗೆ ಪ್ರತಿಯಾಗಿ 29 ಪೈಸೆ ಮಾತ್ರ ನೀಡುವುದಕ್ಕೆ ಕಾರಣವೇನು? ಪ್ರಾಕೃತಿಕ ವಿಕೋಪ ದಿಂದ ರಾಜ್ಯ ನಲುಗಿದರೂ ಒಂದು ಪೈಸೆ ಪರಿಹಾರ ನೀಡದಿರಲು ಕಾರಣವೇನು ? 10 ವರ್ಷದಲ್ಲಿ ರಾಜ್ಯದ ಹಿತಾಸಕ್ತಿಗಾಗಿ ಯಾವುದೇ ಒಂದು ಒಂದು ವಿಶೇಷ ಯೋಜನೆ ಕೇಂದ್ರ ಘೋಷಿಸಿದೆಯೇ ? ವಿಷಯಾಂತರ ಮಾಡದೇ ಪ್ರಧಾನಿ ಅವರು ಇದಕ್ಕೆ ಉತ್ತರಿಸಲಿ.
ಎಂ.ಕೆ.ಸ್ಟಾಲಿನ್‌, ತಮಿಳುನಾಡು ಸಿಎಂ

Advertisement

ಪ್ರಧಾನಿ ವಾಗ್ಧಾಳಿ
ಬರೀ ಭಾಷಣ ಮಾಡುವುದನ್ನು ಬಿಟ್ಟು ರಾಜ್ಯದ ಹಿತಾಸಕ್ತಿಗಾಗಿ ಡಿಎಂಕೆ ಸರಕಾರ ಏನನ್ನೂ ಮಾಡಿಯೇ ಇಲ್ಲ. ಕಚ್ಚಥೀವು ವಿಚಾರವಾಗಿ ಬರುತ್ತಿರುವ ಹೇಳಿಕೆಗಳು ಡಿಎಂಕೆ ಪಕ್ಷದ ಇಬ್ಬಂದಿತನವನ್ನು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಡಿಎಂಕೆ ವಿರುದ್ಧ ಚಾಟಿ ಬೀಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು ಡಿಎಂಕೆ ಮತ್ತು ಕಾಂಗ್ರೆಸ್‌ ಎರಡೂ ಕುಟುಂಬ ಪಕ್ಷಗಳೇ ಆಗಿದ್ದು, ಅವರಿಗೆ ಅವರ ಮಗ ಮತ್ತು ಮಗಳ ಏಳಿಗೆ ಮಾತ್ರವೇ ಮುಖ್ಯ. ಆದರೆ ಕಚ್ಚಥೀವು ಕುರಿತಂತೆ ಈ ಪಕ್ಷಗಳ ನಿರ್ಧಾರದಿಂದಾಗಿ ಮೀನುಗಾರರು ಮತ್ತು ಮೀನುಗಾರ ಮಹಿಳೆಯರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಬಿಕ್ಕಟ್ಟಿಗೆ ಕೈ, ಡಿಎಂಕೆ ಬೇಜವಾಬ್ದಾರಿ ಕಾರಣ: ಜೈಶಂಕರ್‌
ಕಚ್ಚಥೀವು ವಿಚಾರ ಇದ್ದಕ್ಕಿದ್ದಂತೆ ಶುರುವಾದ ಪ್ರಕರಣವಲ್ಲ, ಸಂಸತ್ತಿನಲ್ಲಿಯೂ ಈ ವಿಚಾರ ಅನೇಕ ಬಾರಿ ಪ್ರಸ್ತಾವವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಜತೆಗೆ ನಾನೇ ಕನಿಷ್ಠ 21 ಬಾರಿ ಈ ವಿಚಾರ ಕುರಿತು ಚರ್ಚಿಸಿದ್ದೇನೆ. ಈ ಬಿಕ್ಕಟ್ಟು ಶಮನವಾಗದೇ ಇರುವುದಕ್ಕೆ ಕಾಂಗ್ರೆಸ್‌ ಮತ್ತು ಡಿಎಂಕೆ ನಿರ್ಲಕ್ಷ್ಯವೇ ಕಾರಣ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. 10 ವರ್ಷದಿಂದ ಬರದ ಪ್ರಕರಣ ಚುನಾವಣೆ ವೇಳೆ ಬಂತೇಕೆ ಎಂದು ಡಿಎಂಕೆ ವಕ್ತಾರರ ಟೀಕೆಯ ಬೆನ್ನಲ್ಲೇ ಜೈಶಂಕರ್‌ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ 20 ವರ್ಷದಲ್ಲಿ 6,184 ಭಾರತೀಯ ಮೀನುಗಾರರನ್ನು ಲಂಕಾ ಸೆರೆ ಹಿಡಿದಿದೆ. 1,175 ಮೀನುಗಾರಿಕಾ ಹಡಗುಗಳನ್ನು ವಶಪಡಿಸಿಕೊಂಡಿದೆ. ಆದರೆ ಡಿಎಂಕೆ ಮತ್ತು ಕಾಂಗ್ರೆಸ್‌ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next