Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.16ರಿಂದ ವಿದ್ಯುತ್‌ ನೌಕರರ ಮುಷ್ಕರ

08:27 PM Mar 13, 2023 | Team Udayavani |

ಬೆಂಗಳೂರು: ನೌಕರರು ಮತ್ತು ಅಧಿಕಾರಿ ವರ್ಗದ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಮತ್ತು ಎಲ್ಲ ವಿದ್ಯುತ್‌ ಸರಬರಾಜು ಕಂಪನಿ (ಎಸ್ಕಾಂ)ಗಳ ಉದ್ಯೋಗಿಗಳು ಮಾರ್ಚ್‌ 16ರಂದು ಕೆಲಸಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ವಿದ್ಯುತ್‌ ಪೂರೈಕೆ ಮತ್ತಿತರ ಸಂಬಂಧಪಟ್ಟ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

Advertisement

ಈಗಾಗಲೇ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಧಿಕಾರಿಗಳ ಸಂಸ್ಥೆ ಸಲ್ಲಿಸಿದ ವರದಿಯಲ್ಲೇ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿತ್ತು. ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದನ್ನು ಶೇ.22ರಷ್ಟು ಪರಿಷ್ಕರಿಸಲು ಒಪ್ಪಿಗೆ ಸೂಚಿಸಲಾಗಿದೆ. ಈ ಪ್ರಸ್ತಾವನೆ ಸಲ್ಲಿಕೆಯಾಗಿ ಐದಾರು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಸರ್ಕಾರದ ಈ ಧೋರಣೆ ಖಂಡಿಸಿ 16ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್‌.ಎಚ್‌. ಲಕ್ಷ್ಮೀಪತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಪ್ಪಂದದ ಪ್ರಕಾರ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಅದರಂತೆ ವೇತನ ಹೆಚ್ಚಳ ಮಾಡಬೇಕಿದ್ದು, ಶೇ.22ರಷ್ಟು ಮಾಡಲು ಈ ಮೊದಲೇ ಒಪ್ಪಿಗೆ ಸೂಚಿಸಲಾಗಿತ್ತು. ಹಲವು ಬಾರಿ ಈ ಸಂಬಂಧ ಸರ್ಕಾರದ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಈ ಮಧ್ಯೆ ಆರ್ಥಿಕ ಇಲಾಖೆ ಮತ್ತೆ ಅಪಸ್ವರ ಎತ್ತಿದೆ. ಸರ್ಕಾರದ ನಡೆ ಕೂಡ ಇದಕ್ಕೆ ಪೂರಕವಾಗಿದ್ದಂತಿದೆ. ಹಾಗಾಗಿ, ಅನಿವಾರ್ಯವಾಗಿ ಮುಷ್ಕರದ ಹಾದಿ ತುಳಿಯಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಸುಮಾರು 60 ಸಾವಿರ ಉದ್ಯೋಗಿಗಳಿದ್ದಾರೆ. ಅವರೆಲ್ಲರೂ ಕರ್ತವ್ಯಕ್ಕೆ ಗೈರುಹಾಜರಾಗಿ ಹೋರಾಟಕ್ಕೆ ಕೈಜೋಡಿಸಲಿದ್ದಾರೆ. ವೇತನ ಪರಿಷ್ಕರಣೆ, ಪಿಂಚಣಿ ಮತ್ತು ಭತ್ಯೆಗಳ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಹೋರಾಟ ನಡೆಯುತ್ತಿದ್ದು, 45 ಸಾವಿರ ನಿವೃತ್ತ ನೌಕರರು ಕೂಡ ಇದ್ದು, ಅವರು ಕೂಡ ಕೈಜೋಡಿಸುತ್ತಿದ್ದಾರೆ. ವಿದ್ಯುತ್‌ ಪೂರೈಕೆ, ದುರಸ್ತಿ ಕಾರ್ಯಗಳು, ಯೋಜನೆಗಳ ಪ್ರಗತಿ ಹೀಗೆ ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳಲಿವೆ. ಒಂದು ವೇಳೆ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಅದಕ್ಕೆ ನೇರ ಹೊಣೆ ಸರ್ಕಾರವೇ ಆಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಇಬಿ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಶಿವಣ್ಣ, ಪದಾಧಿಕಾರಿಗಳಾದ ಕೆ.ದಾಸ್‌ ಪ್ರಕಾಶ್‌, ಕೆ. ರಾಮಚಂದ್ರರೆಡ್ಡಿ, ಜೆ. ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಎಸ್ಕಾಂಗಳು ನಷ್ಟ ಅನುಭವಿಸಲು ನೌಕರರು ಹೊಣೆ ಅಲ್ಲ. ಸರ್ಕಾರ ನೀಡುವ ಸಬ್ಸಿಡಿಗಳು, ಆಗಾಗ್ಗೆ ಬದಲಾಯಿಸುವ ಮೂಲಸೌಕರ್ಯ ವ್ಯವಸ್ಥೆ ಮತ್ತಿತರ ಕಾರಣಗಳಾಗಿವೆ. ಆದ್ದರಿಂದ ನಷ್ಟದ ನೆಪವೊಡ್ಡಿ ಸೌಲಭ್ಯ ವಂಚಿತರನ್ನಾಗಿ ಮಾಡುವುದು ಸರಿ ಅಲ್ಲ ಎಂದೂ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಇಬಿ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಶಿವಣ್ಣ, ಪದಾಧಿಕಾರಿಗಳಾದ ಕೆ.ದಾಸ್‌ ಪ್ರಕಾಶ್‌, ಕೆ. ರಾಮಚಂದ್ರರೆಡ್ಡಿ, ಜೆ. ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next