Advertisement

Karnataka: ಸರ್ಕಾರಕ್ಕೆ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ತಲೆನೋವು!

09:55 PM Oct 15, 2024 | Team Udayavani |

ಬೆಂಗಳೂರು: ಬರುವ ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕಾಂಗ್ರೆಸ್‌ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳ ದಿನಾಂಕಗಳು ಪರಸ್ಪರ ಒಂದಕ್ಕೊಂದು ಅಡ್ಡಿಯಾಗುವ ಸಾಧ್ಯತೆ ಇದ್ದು, ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಈಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Advertisement

ರಾಜ್ಯದಲ್ಲಿ ಪ್ರಸ್ತುತ ಅಕ್ಟೋಬರ್‌-ನವೆಂಬರ್‌ ತಿಂಗಳಿಡೀ ಉಪಚುನಾವಣೆಯ ಕಾವು ಏರಲಿದ್ದು, ಡಿಸೆಂಬರ್‌ 20 ರಿಂದ 22 ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯುವುದಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ಎಲ್ಲವನ್ನೂ ಪರಿಗಣಿಸಿ ಚಳಿಗಾಲದ ಅಧಿವೇಶನ ನಿಗದಿಪಡಿಸುವಂತೆ ಕೋರಿದ್ದಾರೆ.

ಮಂಡ್ಯ ಸಾಹಿತ್ಯ ಸಮ್ಮೇಳನದ ತಯಾರಿ ಹಾಗೂ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಇರಲೇಬೇಕಾಗುತ್ತದೆ. ಅದೇ ಸಂದರ್ಭದಲ್ಲಿ ಅಧಿವೇಶನವೂ ಇದ್ದರೆ ಕಷ್ಟವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಅ.18ಕ್ಕೆ ಸ್ಪೀಕರ್‌, ಸಭಾಪತಿ ಬೆಳಗಾವಿ ಭೇಟಿ :
ಚಳಿಗಾಲದ ಅಧಿವೇಶನ ನೆಪದಲ್ಲಿ ಬೆಳಗಾವಿಗೆ ಆಗಮಿಸುವ ಜನಪ್ರತಿನಿಧಿಗಳು ಡಿ.26 ಮತ್ತು 27ರ ಕಾಂಗ್ರೆಸ್‌ ಅಧಿವೇಶನದಲ್ಲೂ ಪಾಲ್ಗೊಳ್ಳಲು ಅನುಕೂಲ ಆಗುತ್ತದೆ ಎನ್ನುವ ಲೆಕ್ಕಾಚಾರವಿದೆ.

Advertisement

ಒಂದು ವೇಳೆ ಡಿ.2 ಅಥವಾ ಡಿ.9 ರ ಸೋಮವಾರದಿಂದ ಚಳಿಗಾಲದ ಅಧಿವೇಶನ ನಡೆಸಿದರೆ, ಮತ್ತೆ ಡಿ.26 ಹಾಗೂ 27ರ ಕಾಂಗ್ರೆಸ್‌ ಅಧಿವೇಶನಕ್ಕಾಗಿ ಬೆಳಗಾವಿವರೆಗೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಜನಪ್ರತಿನಿಧಿಗಳು ಬಿಟ್ಟರೆ ಉಳಿದವರು ಬರದಿರಬಹುದು ಎಂಬ ಅಂದಾಜೂ ಇದೆ. ಡಿ.16 ರಿಂದ 27ರವರೆಗೆ ಚಳಿಗಾಲದ ಅಧಿವೇಶನ ನಡೆಸುವ ಚಿಂತನೆಗಳೂ ನಡೆದಿವೆ.

ಈ ಎಲ್ಲ ಹಿನ್ನೆಲೆಯಲ್ಲಿ ಅ.18ರಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಚಳಿಗಾಲ ಅಧಿವೇಶನದ ತಯಾರಿ ಬಗ್ಗೆ ಸಭೆ ನಡೆಸಿ ಮಾರ್ಗದರ್ಶನ ಮಾಡಲಿದ್ದಾರೆ.

ಡಿ.20 ರಿಂದ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ :
ಡಿ.20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದೆ. ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಅವರು ಈ ಹಿಂದೆಯೇ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಸಾಕಷ್ಟು ಸಮಾಲೋಚನೆ ನಡೆಸಿ ಈ ದಿನಾಂಕಗಳನ್ನು ನಿಗದಿಪಡಿಸಿದ್ದಾರೆ.

ಸಮ್ಮೇಳನಕ್ಕೆ ಚಾಲನೆ ನೀಡುವ ಮೊದಲ ದಿನವಾದ ಡಿ.20 ಶುಕ್ರವಾರವಾಗಿದ್ದು, ಅದೇ ದಿನ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಜನಪ್ರತಿನಿಧಿಗಳೂ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಉಳಿದ ಎರಡು ದಿನಗಳು ಶನಿವಾರ, ಭಾನುವಾರವಾದ್ದರಿಂದ ಚಳಿಗಾಲದ ಅಧಿವೇಶನ ಮುಗಿದಿರುತ್ತದೆ.

ಡಿ.26, 27ಕ್ಕೆ ಕಾಂಗ್ರೆಸ್‌ ಅಧಿವೇಶನ :
1924 ರ ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್‌ ಅಧಿವೇಶನ ಉದ್ದೇಶಿಸಿ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದರು. ಈ ಕಾರ್ಯಕ್ರಮ ನಡೆದು 100 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡಿ.26 ಮತ್ತು 27 ರಂದು ಬೆಳಗಾವಿಯಲ್ಲೇ ಕಾಂಗ್ರೆಸ್‌ ಅಧಿವೇಶನ ನಡೆಸಲು ನಿರ್ಧರಿಸಿದೆ. ಇದೇ ಸಂದರ್ಭದಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಸೂಕ್ತ ಎಂಬ ಸಲಹೆಗಳೂ ಇವೆ. ಕಳೆದ ಜುಲೈನಲ್ಲಿ ಮುಂಗಾರು ಅಧಿವೇಶನ ನಡೆದಿದ್ದು, ಡಿಸೆಂಬರ್‌ಗೆ 6 ತಿಂಗಳಾಗಿದೆ. 6 ತಿಂಗಳಿಗೊಮ್ಮೆಯಾದರೂ ಅಧಿವೇಶನ ಸಮಾವೇಶಗೊಳ್ಳಬೇಕು ಎಂಬ ನಿಯಮವಿರುವುದರಿಂದ ಸರ್ಕಾರ ಗೊಂದಲಕ್ಕೀಡಾಗಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೊಂದಿಗೆ ಸಮಾಲೋಚನೆ ಮಾಡಿಯೇ ನಿಗದಿಪಡಿಸಲಾಗಿದೆ. ಸಮ್ಮೇಳನವು ಶುಕ್ರವಾರ, ಶನಿವಾರ, ಭಾನುವಾರ ನಡೆಯಲಿದ್ದು, ಮೊದಲ ದಿನದ ಕಾರ್ಯಕ್ರಮಕ್ಕೆ ಸ್ಪೀಕರ್‌ ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಸಿದ್ದರಾಮಯ್ಯ ಸಹಿತ ಎಲ್ಲರಿಗೂ ಆಹ್ವಾನ ಕೊಡಲಾಗುತ್ತದೆ.
-ನಾಡೋಜ ಮಹೇಶ್‌ ಜೋಶಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next