ಬೆಂಗಳೂರು : ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳುತ್ತಿವೆ. ಎ. 4ರಂದು ಹೊಸದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಮುಹೂರ್ತ ನಿಗದಿಯಾಗಿದೆ. ಹೀಗಾಗಿ ರಾಜ್ಯದ ಆಡಳಿತಾರೂಢ ಪಕ್ಷದ ಶಾಸಕರಲ್ಲಿ ಆತಂಕ, ತಳಮಳ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದೆ.
ಇನ್ನೊಂದೆಡೆ ಬಾಕಿ ಉಳಿದ 100 ಕ್ಷೇತ್ರಗಳ ಟಿಕೆಟ್ ಹಂಚಿಕೆಗೆ ಗುರುವಾರ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ತಲೆಯಲ್ಲೂ ಏನೇನೋ ಲೆಕ್ಕಾಚಾರಗಳು ಓಡುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿನ ಟಿಕೆಟ್ ಹಂಚಿಕೆ ಚಟುವಟಿಕೆಗಳು ಟಿಕೆಟ್ ಆಕಾಂಕ್ಷಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿವೆ.
ಮೊದಲ ಹಂತದಲ್ಲಿ ಕಾಂಗ್ರೆಸ್ 124 ಹಾಗೂ ಜೆಡಿಎಸ್ 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೆ ಬಿಜೆಪಿಯಿಂದ ಇದುವರೆಗೂ ಒಂದೇ ಒಂದು ಕ್ಷೇತ್ರದ ಅಭ್ಯರ್ಥಿ ತೀರ್ಮಾನ ಆಗಿಲ್ಲ. ಈಗ ಎಲ್ಲರ ಚಿತ್ತ ಬಿಜೆಪಿ ಟಿಕೆಟ್ ಹಂಚಿಕೆಯತ್ತ ನೆಟ್ಟಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಹಲವು ಪ್ರಕ್ರಿಯೆಗಳು ನಡೆದಿವೆ. ಜತೆಗೆ ಶುಕ್ರವಾರ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಜಿಲ್ಲಾವಾರು ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. 39 ಸಂಘಟನಾತ್ಮಕ ಜಿಲ್ಲೆಗಳಿಗೆ ತಲಾ ಮೂವರು ಪ್ರಮುಖರನ್ನು ಒಳಗೊಂಡ ತಂಡ ನೇಮಿಸಿದ್ದು, ಈ ತಂಡಗಳು ಪ್ರತೀ ಕ್ಷೇತ್ರದಲ್ಲೂ ಅಭಿಪ್ರಾಯ ಸಂಗ್ರಹಿಸಲಿವೆ.
ಜತೆಗೆ ಎ. 1, 2ರಂದು ಬೆಂಗಳೂರಿನಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆಗಳನ್ನು ನಿಗದಿಪಡಿಸಲಾಗಿದೆ. ಆ ಸಭೆಯಲ್ಲಿ ಶುಕ್ರವಾರ ಸಂಗ್ರಹಿಸುವ ಅಭಿಪ್ರಾಯಗಳ ವರದಿಯನ್ನು ಸಮಗ್ರವಾಗಿ ಚರ್ಚಿಸಿದ ಬಳಿಕ ಹಾಲಿ ಶಾಸಕರು ಸೇರಿದಂತೆ ಟಿಕೆಟ್ ಆಕಾಂಕ್ಷಿಗಳ ಸಂಭವನೀಯ ಪಟ್ಟಿ ಸಿದ್ಧವಾಗಲಿದೆ. ಹೀಗಾಗಿ ಹಾಲಿ ಶಾಸಕರು, ಸಚಿವರಲ್ಲಿ ಟಿಕೆಟ್ ಸಿಗುವುದೋ ಇಲ್ಲವೋ ಎಂಬ ಆತಂಕ ಮನೆ ಮಾಡಿದೆ. ಜತೆಗೆ ಉಳಿದ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳಾಗಿರುವವರಲ್ಲಿಯೂ ಒಂದು ರೀತಿ ತಳಮಳ ಆರಂಭವಾಗಿದೆ. ಎ. 4ರಂದು ನಿಗದಿಯಾಗಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಬಹುತೇಕ 7ರಂದು ಮೊದಲ ಪಟ್ಟಿ ಹಾಗೂ 10ರ ವೇಳೆಗೆ ಅಂತಿಮ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
Related Articles
ಕೊನೇ ಘಳಿಗೆಯಲ್ಲಿ ಗೆದ್ದ ಅಖಂಡ, ರಾಮಪ್ಪ
ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಮೊದಲ 124 ಅಭ್ಯರ್ಥಿಗಳ ಪಟ್ಟಿಯಲ್ಲಿ ಇರದಿದ್ದ ಹಾಲಿ 6 ಮಂದಿ ಶಾಸಕರ ಪೈಕಿ ಪುಲಕೇಶಿನಗರದ ಅಖಂಡ ಶ್ರೀನಿವಾಸ ಮೂರ್ತಿ, ಹರಿಹರದ ರಾಮಪ್ಪ ಅವರು ಕೊನೆಗೂ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ತೀರ್ಥಹಳ್ಳಿಯಿಂದ ಹಾಗೂ ಸಂತೋಷ್ ಲಾಡ್ ಕಲಘಟಗಿ, ಮಾಜಿ ಮೇಯರ್ ಸಂಪತ್‌ರಾಜ್ ಸಿ.ವಿ. ರಾಮನ್ ನಗರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಗುರುವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಇವರ ಸ್ಪರ್ಧೆಗೆ ಹಸಿರು ನಿಶಾನೆ ದೊರೆತಿದೆ. ಕೇಂದ್ರ ಚುನಾವಣ ಸಮಿತಿಯ ಅಂತಿಮ ಮುದ್ರೆಯಷ್ಟೇ ಬಾಕಿ ಇದೆ.
ಎ. 5ರಂದು ರಾಹುಲ್ ಗಾಂಧಿಯವರ ಕೋಲಾರ ಭೇಟಿ ಬಳಿಕ, 6 ಅಥವಾ 7ರಂದು 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಉಳಿದ ಕ್ಷೇತ್ರಗಳಲ್ಲಿ ಅಧಿಸೂಚನೆ ಹೊರಡಿಸುವ ದಿನಾಂಕದ ಆಚೀಚೆ ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಸಚಿವ ಅಶೋಕ್ ವಿರುದ್ಧ ಸಿಂಧ್ಯಾ
ಈ ಮಧ್ಯೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರನ್ನು ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಪದ್ಮನಾಭನಗರದಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕಳೆದ ಮೂರು ಚುನಾವಣೆಗಳಲ್ಲಿಯೂ ಹೊಸ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕಾಂಗ್ರೆಸ್ ಯಶಸ್ವಿಯಾಗಿಲ್ಲ. ಈಗ 4ನೇ ಬಾರಿಗೆ ಮತ್ತೂಮ್ಮೆ ಹೊಸ ಪ್ರಯೋಗಕ್ಕೆ ಸಿಂಧ್ಯಾ ಮೂಲಕ ಮುಂದಾಗಿದೆ. 2008ರಲ್ಲಿ ಡಾ| ಬಿ. ಗುರಪ್ಪ ನಾಯ್ಡು, 2013ರಲ್ಲಿ ಎಲ್.ಟಿ.ಎಸ್. ಚೇತನಗೌಡ ಹಾಗೂ 2018ರಲ್ಲಿ ಎಂ. ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿತ್ತು. ಈ ಮೂರು ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಸೋತಿತ್ತು. ಈಗ ಹೊಸ ಲೆಕ್ಕಾಚಾರದಲ್ಲಿ ಸಿಂಧ್ಯಾ ಅವರನ್ನು ಕರೆತಂದಿದೆ. ಕೆಲವು ದಿನಗಳ ಹಿಂದೆ ಸಿಂಧ್ಯಾ ಅವರ ಪುತ್ರಿಯನ್ನು ಈ ಕ್ಷೇತ್ರದ ಸಂಚಾಲಕಿಯಾಗಿ ನೇಮಿಸಿ ಕಾಂಗ್ರೆಸ್ ಆದೇಶ ಹೊರಡಿಸಿತ್ತು.
ಒಟ್ಟಿಗೇ ಸೇರ್ಪಡೆ
ಇನ್ನೊಂದೆಡೆ ಕಾಂಗ್ರೆಸ್ ಸೇರಲು ಮುಂದಾಗಿರುವ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಜೆಡಿಎಸ್‌ನ ಶಿವಲಿಂಗೇಗೌಡ ಅವರನ್ನು ಒಟ್ಟಿಗೆ ಸೇರಿಸಿಕೊಳ್ಳಲು ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ.
ಶಿವಲಿಂಗೇಗೌಡ ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ಗೋಪಾಲಕೃಷ್ಣ ಅವರು ರಾಜ್ಯ ಉಸ್ತು ವಾರಿ ರಣದೀಪ್ ಸಿಂಗ್ ಸುಜೇìವಾಲಾ ಹಾಗೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆ ಚರ್ಚಿಸಿದ್ದು, ಟಿಕೆಟ್ ಖಾತರಿಯಾಗಿದೆ. ಈ ಮೂಲಕ ಜೆಡಿಎಸ್ ಮತ್ತು ಬಿಜೆಪಿಯಿಂದ ಶಾಸಕರೂ ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ ಎಂಬ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ.
ಈ ಮಧ್ಯೆ ಸಚಿವ ಬೈರತಿ ಬಸವರಾಜ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತಾದರೂ ಇದೆಲ್ಲಾ ಸುಳ್ಳು. ಆ ಪಕ್ಷದಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.