Advertisement

ಧಾರವಾಡ: ವಿಶ್ವದಲ್ಲಿಯೇ ಮ್ಯಾಗ್ನಾಕಾರ್ಟಾಗಿಂತಲೂ ಪೂರ್ವದಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆ ಕಟ್ಟಿಕೊಟ್ಟದ್ದು ಭಾರತೀಯರೇ ಆಗಿದ್ದಾರೆ. ಅದರಲ್ಲೂ ಕನ್ನಡಿಗ ಅಣ್ಣ ಬಸವಣ್ಣನವರ “ಅನುಭವ ಮಂಟಪ’ವೇ ಪ್ರಜಾಪ್ರಭುತ್ವದ ಮೂಲ ಬುನಾದಿಯಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ದೃಢಪಡಿಸಿ ಕೇಂದ್ರ ಸಂಸ್ಕೃತಿ ಇಲಾಖೆಗೆ ಧಾರವಾಡದ ಕರ್ನಾ ಟಕ ವಿಶ್ವವಿದ್ಯಾನಿಲಯ ರವಾನಿಸಿದೆ.

Advertisement

ಕೇಂದ್ರ ಸರಕಾರ ದಿಲ್ಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ “ಸೆಂಟ್ರಲ್‌ ವಿಸ್ತಾ’ದಲ್ಲಿ ಪ್ರಜಾಪ್ರಭುತ್ವದ ಮೂಲ ನೆಲೆ ಗಳನ್ನು ಪ್ರತಿಷ್ಠಾಪಿಸಲು ಮತ್ತು ದೇಸಿ ತನದ ಗಟ್ಟಿ ನೆಲೆಗಳನ್ನು ಕಟ್ಟಿಕೊಡಲು ಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿರುವ ಅಗತ್ಯ ದಾಖಲೆಗಳು ಮತ್ತು ಆಧಾರಗಳನ್ನು ಪೂರೈಸುವಂತೆ ಕರ್ನಾಟಕ ವಿವಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನ ಸಂಸ್ಥೆ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಆಡಳಿತ ನಿರ್ದೇಶಕರು ಕಳೆದ ಜುಲೈ ತಿಂಗಳಲ್ಲಿ ಪತ್ರ ಬರೆದು ಮಾಹಿತಿ ಕೇಳಿದ್ದರು.

ಈಗ ಕವಿವಿ ಹಿರಿಯ ಸಂಶೋಧಕ ಡಾ| ವೀರಣ್ಣ ರಾಜೂರ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ನಿವೃತ್ತ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಜಿ.ಸಿ. ತಲ್ಲೂರ, ಡಾ|ರಾಜೇಂದ್ರ ನಾಯಕ, ಡಾ| ನಿಜಲಿಂಗಪ್ಪ ಮಟ್ಟಿಹಾಳ, ಡಾ| ಸಿ.ಎಂ. ಕುಂದಗೋಳ ಹಾಗೂ ಕವಿವಿ ಕುಲಸಚಿವರು ಮತ್ತು ಕುಲಪತಿಗಳ ತಂಡ ವಚನ ಸಾಹಿತ್ಯ, ಅನುಭವ ಮಂಟಪದ ಪರಿಕಲ್ಪನೆ, ಬಸ ವಣ್ಣನ ಸಮ ಸಮಾಜ, ಜಾತ್ಯತೀತ ಪ್ರಭುತ್ವ, ಲಿಂಗ ಸಮಾನತೆ ಸಹಿತ ಪ್ರಜಾ ಪ್ರಭುತ್ವದ ಮೂಲ ಸೆಲೆಗಳಿಗೆ ಪೂರಕ ವಾಗಿರುವ ಸಮಗ್ರ ಸಾಹಿತ್ಯ ಮತ್ತು ದಾಖಲೆಗಳನ್ನು ಕೇಂದ್ರ ಸಂಸ್ಕೃತಿ ಇಲಾಖೆಗೆ ರವಾನಿಸಿದೆ.

ಪ್ರಧಾನಿ ಮೋದಿ ವ್ಯಾಖ್ಯಾನ
ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಸಂಸತ್ತು, ಪ್ರಜಾಪ್ರಭುತ್ವ ವ್ಯವಸ್ಥೆ ವಿಚಾರ ಬಂದಾಗಲೆಲ್ಲ ಬಸವಣ್ಣ ಮತ್ತು ಅವರು ಸ್ಥಾಪಿಸಿದ “ಅನುಭವ ಮಂಟಪ’ವೇ ವಿಶ್ವದ ಮೊದಲ ಸಂಸತ್ತು ಎಂದು ವ್ಯಾಖ್ಯಾನಿಸುತ್ತಲೇ ಬಂದಿದ್ದಾರೆ. ವಿಧಾನ ಪರಿಷತ್‌ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಅಧಿಕೃತವಾಗಿ “ಸೆಂಟ್ರಲ್‌ ವಿಸ್ತಾ’ಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಮನವಿ ಸಲ್ಲಿಸಿದ್ದಾರೆ. ಈಗ “ಸೆಂಟ್ರಲ್‌ ವಿಸ್ತಾ’ದಲ್ಲಿ “ಅನುಭವ ಮಂಟಪ’ ಮಾದರಿ ಸ್ಥಾಪಿಸಲು ಸ್ವತಃ ಪ್ರಧಾನಿ ಮೋದಿ ಅವರೇ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

ಬಸವಣ್ಣ ಸಹಿತ ಪ್ರಜಾಪ್ರಭುತ್ವ ತತ್ವ ಪ್ರತಿಪಾದಿಸುವ ಹದಿನೈದು ವಚನಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ. ಈವರೆಗಿನ ನುರಿತ ತಜ್ಞರು ಮತ್ತು ಸಂಶೋಧಕರು ನೀಡಿದ ದಾಖಲೆಗಳ ಅನ್ವಯ ಅನುಭವ ಮಂಟಪವೇ ಮೊದಲ ಸಂಸತ್ತು. ಈ ಕುರಿತ ಸಮಗ್ರ ವಿವರಗಳನ್ನು ವರದಿಯಲ್ಲಿ ಉಲ್ಲೇಖೀಸಿದ್ದೇವೆ.
-ಡಾ| ವೀರಣ್ಣ ರಾಜೂರ, ಹಿರಿಯ ಸಂಶೋಧಕರು.

Advertisement

ಅನುಭವ ಮಂಟಪವೇ ಪ್ರಜಾಪ್ರಭುತ್ವದ ಮೂಲ ಬುನಾದಿ ಎಂಬುದಕ್ಕೆ ಸಾಕ್ಷಿಯಾಗಿರುವ ತಾಳೆಗರಿ ದಾಖಲೆಗಳು, ಪೂರಕವಾದ ಶರಣರ ವಚನಗಳು ಸೇರಿ ಅಗತ್ಯ ದಾಖಲೆಗಳನ್ನು ನಮ್ಮ ಸಂಶೋಧಕರ ತಂಡ ಅಚ್ಚುಕಟ್ಟಾಗಿ ಸಂಗ್ರಹಿಸಿದೆ. ಕಳೆದ ಸೆ.30ರಂದೇ ಕೇಂದ್ರ ಸರಕಾರಕ್ಕೆ ವಿಶ್ವದ ಮೊದಲ ಸಂಸತ್‌ ಮತ್ತು ಪ್ರಜಾಪ್ರಭುತ್ವ ಮಾದರಿ “ಅನುಭವ ಮಂಟಪ’ದ ದಾಖಲೆ ಸಲ್ಲಿಸಿದ್ದೇವೆ.
-ಡಾ| ಕೆ.ಬಿ. ಗುಡಸಿ, ಕುಲಪತಿಗಳು, ಕವಿವಿ-ಧಾರವಾಡ.

-ಡಾ| ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next