ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಕೆಯಾಗಿದ್ದು, ಹೊಸ ಪ್ರಕರಣಗಳು 200 ಆಸುಪಾಸಿಗೆ ಇಳಿಕೆಯಾಗಿವೆ. ಅಲ್ಲದೆ, ಸತತ 10ನೇ ದಿನ 500ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.
ಶನಿವಾರ 264 ಮಂದಿಗೆ ಸೋಂಕು ದೃಢಪಟ್ಟಿದ್ದು, 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ 421 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಪರೀಕ್ಷೆಗಳು 60 ಸಾವಿರಕ್ಕೆ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ.0.4ರಷ್ಟು, ಮರಣ ದರ ಶೇ.2.3 ರಷ್ಟಿದೆ. ಅತಿ ಹೆಚ್ಚು ಬೆಂಗಳೂರು 121 ಪ್ರಕರಣ ವರದಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ 50ಕ್ಕಿಂತ ಕಡಿಮೆ ಇವೆ. 14 ಜಿಲ್ಲೆಗಳಲ್ಲಿ ಬೆರಳೆಣಿಕೆ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ ಹಾಗೂ ವಿಜಯಪುರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಇನ್ನು 6 ಸಾವಿನ ಪೈಕಿ ಬೆಂಗಳೂರು ನಗರದಲ್ಲಿ 3, ಗದಗ, ಉಡುಪಿ ಹಾಗೂ ಮೈಸೂರಿನಲ್ಲಿ ತಲಾ ಒಂದು ಸಾವು ವರದಿಯಾಗಿದೆ.
ಈ ಹಿಂದೆ ಫೆಬ್ರವರಿಯಲ್ಲಿ 200 ಆಸುಪಾನಿನಲ್ಲಿ ಪ್ರಕರಣಗಳು ಪತ್ತೆಯಾಗಿದ್ದವು. ಮತ್ತೆ ಎಂಟು ತಿಂಗಳ ಬಳಿಕ ಇಳಿಕೆಯಾಗಿವೆ. ಇತ್ತ ಸೋಂಕು ಪರೀಕ್ಷೆಗಳು 1.5 ಲಕ್ಷದಿಂದ 60 ಸಾವಿರಕ್ಕೆ ಇಳಿಕೆಯಾಗಿರುವುದೇ ಹೊಸ ಪ್ರಕರಣಗಳು ಇಷ್ಟೋಂದು ಪ್ರಮಾಣದಲ್ಲಿ ತಗ್ಗಲು ಕಾರಣ ಎನ್ನಲಾಗುತ್ತಿದೆ. ಆದರೆ, ಸೋಂಕು ಪರೀಕ್ಷೆಗಳಲ್ಲಿ ಸೋಂಕು ದೃಢಪಡುವ ಪ್ರಮಾಣ (ಪಾಸಿಟಿವಿಟಿ ರೇಟ್) ಶೇ.0.4 ರಷ್ಟಿದ್ದು, ಸಮಾಧಾನಕರ ಸಂಗತಿ.
10ನೇ ದಿನ 500ಕ್ಕಿಂತ ಕಮ್ಮಿ :
ಅಕ್ಟೋಬರ್‌ನಲ್ಲಿ ಮೂರನೇ ಅಲೆ ಆರಂಭ ಎಂಬ ಕೆಲ ತಜ್ಞರು ಅಂದಾಜಿಸಿದ್ದರು. ಆದರೆ, ಅ.7 ರಿಂದ 16ವರೆಗೂ ಸತತ ಏಳು ದಿನ ಕೊರೊನಾ ಹೊಸ ಪ್ರಕರಣಗಳು 500ಕ್ಕಿಂತ ಕಡಿಮೆ ವರದಿಯಾಗಿವೆ. ಕಳೆದ ಒಂದು ತಿಂಗಳಲ್ಲಿ ಒಂದು ಸಾವಿರ ಗಡಿದಾಟಿಲ್ಲ. ಇನ್ನು ಹಬ್ಬಗಳಿಂದ ಸೋಂಕು ಪರೀಕ್ಷೆ ಕಡಿಮೆಯಾಗಿದ್ದು, ವಾರ್ಷಾಂತ್ಯದ ವರೆಗೂ ಪರೀಕ್ಷೆ ಇಳಿಕೆಯಾಗದಂತೆ ಸರ್ಕಾರ ಕ್ರಮವಹಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.