Advertisement

ಇನ್ನಾದರೂ ಆಗಲಿ ಸ್ಮಾರ್ಟ್‌! ಆರಂಭವಾಗಿ ಏಳು ವರ್ಷ ಕಳೆದರೂ ಮುಗಿಯದ ಕಾಮಗಾರಿ

12:09 AM Jul 11, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಆರಂಭಿಸಿದ ಸ್ಮಾರ್ಟ್‌ ಸಿಟಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ.2015ರಲ್ಲಿ ಆರಂಭವಾಗಿದ್ದ ಈ ಯೋಜನೆಯಲ್ಲಿ ರಾಜ್ಯದ ಏಳು ನಗರಗಳು ಆಯ್ಕೆಯಾಗಿದ್ದು, ಎಲ್ಲ ಕಡೆ ಗಳಲ್ಲೂ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರಕಾರದ ಗಡುವಿನಂತೆ 2023ರ ಜೂನ್‌ ಅಂತ್ಯಕ್ಕೆ ಈ ಏಳು ನಗರಗಳ ಕಾಮಗಾರಿ ಮುಗಿಯಲೇಬೇಕು. ಕಾಮಗಾರಿಯಿಂದಾಗಿ ನಾನಾ ಸಮಸ್ಯೆ ಗಳನ್ನು ಎದುರಿಸುತ್ತಿರುವ ಜನತೆಯೂ ಇದನ್ನೇ ಅಪೇಕ್ಷಿಸುತ್ತಿದ್ದಾರೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ರಾಜ್ಯದ ಮಂಗಳೂರು, ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರ ವಾಡ, ಶಿವಮೊಗ್ಗ ಮತ್ತು ತುಮಕೂರು ಆಯ್ಕೆಯಾಗಿವೆ.

ಸ್ಮಾರ್ಟ್‌ ಸಿಟಿ ಅನುದಾನ ಮತ್ತು ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಈ ಏಳು ನಗರಗಳಲ್ಲಿ ಈವರೆಗೆ 582ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿದ್ದು, 7,605 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಂತೆ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ತ್ವರಿತಗತಿ ಯಲ್ಲಿ ಅನುಷ್ಠಾನಗೊಳಿಸಲು ಎಲ್ಲ 7 ನಗರಗಳಿಗೆ ತಿಂಗಳವಾರು ಗುರಿಗಳನ್ನು ನಿಗದಿಪಡಿಸಲಾಗಿದೆ. ನಿಗದಿತ ಕಾರ್ಯ ಕ್ರಮದಂತೆ ಕಾಮಗಾರಿ ಪೂರ್ಣ ಗೊಳಿಸಲು ಸೂಚನೆ ನೀಡಲಾಗಿದೆ. ಒಟ್ಟು ವೆಚ್ಚ 7,695 ಕೋಟಿ ರೂ. ಮೀರಲಿದೆ.

ವರ್ಷದಲ್ಲಿ ಮುಗಿಸಲು ಸಾಧ್ಯವೇ?
ವಿಚಿತ್ರವೆಂದರೆ ಕೆಲವು ನಗರಗಳಲ್ಲಿ ಕೆಲವು ಕಾಮಗಾರಿಗಳಿಗೆ ಟೆಂಡರ್‌ ಕೂಡ ಕರೆದಿಲ್ಲ.ಇನ್ನು ಕೆಲವಕ್ಕೆ ಡಿಪಿಆರ್‌ ಆಗಿಲ್ಲ. ಇದು ವರೆಗೆ ಒಟ್ಟು 308 ಕಾಮಗಾರಿಗಳು ಮುಗಿದಿವೆ. 251 ಕಾಮಗಾರಿಗಳು ಪ್ರಗತಿಯಲ್ಲಿವೆ. ಟೆಂಡರ್‌ ಹಂತದಲ್ಲಿ 21 ಇದ್ದು, ಡಿಪಿಆರ್‌ ಆಗಬೇಕಿರುವುದು 2 ಕಾಮಗಾರಿಗಳು. ಹೀಗಾಗಿ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವೇ ಎಂಬ ಪ್ರಶ್ನೆ ಸಹಜ.

ನಿರಂತರ ಮೇಲ್ವಿಚಾರಣೆ
ಸಮಸ್ಯೆ-ಸವಾಲುಗಳ ಹೊರತಾಗಿಯೂ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿಯಮಿತವಾಗಿ ಪ್ರಗತಿ ಪರಿಶೀಲನ ಸಭೆಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಸಮಸ್ಯೆ ಮತ್ತು ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

Advertisement

ನೋಡಲ್‌ ಏಜೆನ್ಸಿ ನೇಮಕ
ರಾಜ್ಯದಲ್ಲಿ ಸ್ಮಾರ್ಟ್‌ ಸಿಟಿ ಅನುಷ್ಠಾನಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು ರಾಜ್ಯ ಮಟ್ಟದ ನೋಡಲ್‌ ಏಜೆನ್ಸಿಯಾಗಿದೆ. ಅದು ಯೋಜನೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ನಿಯಮಿತವಾಗಿ ನಗರಗಳಿಗೆ ಗುರಿಗಳನ್ನು ನೀಡಿ ಕಾಲಕಾಲಕ್ಕೆ ಪ್ರಗತಿ ಸಭೆಗಳನ್ನು ನಡೆಸುತ್ತದೆ. ಅಲ್ಲದೆ ನಗರಗಳು ಸಿದ್ಧಪಡಿಸಿರುವ ಕಾಮಗಾರಿಗಳ ಡಿಪಿಆರ್‌ ವರದಿಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಕ್ರಮ ಕೈಗೊಳ್ಳು ತ್ತದೆ. ಇದಕ್ಕೆ ತಾಂತ್ರಿಕ ಸಮಿತಿಗಳನ್ನು ರಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮ ನ್ವಯ ಸಾಧಿಸಿ ನಗರಗಳಿಗೆ ಅನುದಾನ ಬಿಡುಗಡೆ ಮಾಡಲು ನೋಡಲ್‌ ಏಜೆನ್ಸಿ ಪ್ರಮುಖ ಪಾತ್ರ ವಹಿಸುತ್ತದೆ.

ಗುಣಮಟ್ಟದ ಮೇಲೆ ಕಣ್ಣು
ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ಯೋಜನಾ ಸಮಾಲೋಚಕರನ್ನು ಎಲ್ಲ 7 ನಗರಗಳಲ್ಲಿ ನೇಮಿಸಲಾಗಿದೆ. ಸ್ಮಾರ್ಟ್‌ ಸಿಟಿ ತಾಂತ್ರಿಕ ಅಧಿ ಕಾರಿಗಳ ಮತ್ತು ಯೋಜನಾ ಸಮಾಲೋಚಕ ರಿಂದ ಕಾಮಗಾರಿಯ ಗುಣಮಟ್ಟದ ದೃಢೀಕರಣದ ಅನಂತರವೇ ಕಾಮಗಾರಿಗಳಿಗೆ ಬಿಲ್‌ ಪಾವತಿ ಮಾಡಲಾಗುತ್ತದೆ. ಅಲ್ಲದೆ ಕಳಪೆ ಕಾಮಗಾರಿಯ ದೂರು ಬಂದಲ್ಲಿ ಆ ಕಾಮಗಾರಿ ಬಗ್ಗೆ ಬಾಹ್ಯ ಪರಿಶೀಲನ ಸಂಸ್ಥೆಗಳಿಂದ, ತಾಂತ್ರಿಕ ಕಾಲೇಜುಗಳಿಂದ ಪರಿಶೀಲನೆ ನಡೆಸಲಾಗುತ್ತದೆ.

ಯಾವ ನಗರದಲ್ಲಿ ಎಷ್ಟು ಕಾಮಗಾರಿ ಪ್ರಗತಿ?
– ತುಮಕೂರು-ಶೇ. 80
– ಬೆಳಗಾವಿ- ಅರ್ಧದಷ್ಟು ಕೆಲಸ ಮಾತ್ರ ಮುಕ್ತಾಯ
– ಶಿವಮೊಗ್ಗ- ಕೆಲಸ ಆರಂಭ ಮಾತ್ರ, ಮುಕ್ತಾಯಗೊಂಡಿಲ್ಲ
– ಹುಬ್ಬಳ್ಳಿ- ಧಾರ ವಾಡ- ಶೇ.70ರಷ್ಟು ಕೆಲಸ ಪೂರ್ಣ
– ಮಂಗಳೂರು- ನಗರದ ಹಲವು ಭಾಗಗಳಲ್ಲಿ ಕಾಮಗಾರಿ
– ದಾವಣಗೆರೆ- ಆಮೆಗತಿಯಲ್ಲಿದ್ದ ಕಾಮಗಾರಿಗೆ ವೇಗ. ಸದ್ಯ ಶೇ. 70 ಕಾಮಗಾರಿ ಪೂರ್ಣ
– ಬೆಂಗಳೂರು 14 ಯೋಜನೆಗಳಿಗೆ ಚಾಲನೆ

- ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next