ಗುಡ್ಡಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಕನ್ನಡ ಸಂಭ್ರಮ ಮನೆ ಮಾಡಿದೆ. ಇಂದು ಕರ್ನಾಟಕ ಸುವರ್ಣ ಸಂಭ್ರಮ 50ರ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲೆಲ್ಲೂ ಕನ್ನಡದ ಘಮಲು ಪಸರಿಸಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್, ಮಹಾರಾಷ್ಟ್ರದ ಕನ್ನಡಪರ ಶೈಕ್ಷಣಿಕ, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ, ಮಹಾರಾಷ್ಟ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡದ ನಲಿ ಕಲಿ ಸಾಮಗ್ರಿ ವಿತರಣೆ, ಹೊರನಾಡ ಕನ್ನಡಿಗರ ಸಮಾವೇಶ ನಡೆಯುತ್ತಿದೆ. ಇಲ್ಲಿನ ಕರ್ನಾಟಕ ಭವನದ ಎದುರು ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ದಾನಮ್ಮದೇವಿ ದೇವಸ್ಥಾನದಿಂದ ಕರ್ನಾಟಕ ಭವನದ ಮುಂಭಾಗದ ವೇದಿಕೆಯವರೆಗೆ ಬೃಹತ್ ಮೆರವಣಿಗೆ ಜರುಗಿತು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಹಾಗೂ ವಿವಿಧ ಗಣ್ಯರು ಭವ್ಯ ರಥದಲ್ಲಿ ಮೆರವಣಿಗೆ ಮೂಲಕ ಸಾಗಿದರು.
ಈ ವೇಳೆ, ಕನ್ನಡ ನಾಡಿನ ನಾನಾ ಭಾಗಗಳಿಂದ ಬಂದಿರುವ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಜಗ್ಗಲಿಗೆ ಮೇಳ, ಚಿಕ್ಕ ಹಲಗೆ ಮೇಳ, ದೊಡ್ಡಾಟ, ಡೊಳ್ಳು, ವೀರಗಾಸೆ, ಗೊಂಬೆ ಕುಣಿತ ತಂಡಗಳು ಸಡಗರ ಹಾಗೂ ಸಂಭ್ರಮದೊಂದಿಗೆ ಮೆರವಣಿಗೆಗೆ ಮೆರುಗು ನೀಡಿದವು. ಮಹಾರಾಷ್ಟ್ರದ ಕನ್ನಡ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು, ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕನ್ನಡದ ಬಾವುಟ, ಕನ್ನಡದ ಶಾಲು ಧರಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ.