Advertisement

Karnataka; ಬಿಸಿಲ ಬೇಗೆ ನಡುವೆ ರಾಜ್ಯಕ್ಕೆ ಕಾಲರಾ ಆತಂಕ

11:54 PM Apr 07, 2024 | Team Udayavani |

ಬೆಂಗಳೂರು: ಬಿಸಿಲಿನಿಂದ ಬೇಯುತ್ತಿರುವ ಕರ್ನಾಟಕಕ್ಕೆ ಈಗ ಕಾಲರಾ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಳೆದ 3 ತಿಂಗಳಿನಲ್ಲಿ 14 ಕಾಲರಾ ದೃಢಪಟ್ಟಿದ್ದು, ಎಪ್ರಿಲ್‌ ಅಂತ್ಯಕ್ಕೆ ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

Advertisement

ಹೌದು, ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಮಿತಿ ಮೀರಿ ಎಲ್ಲೆಡೆ ನೀರಿಗೆ ಹಾಹಾಕಾರ ಬಂದೊದಗಿದೆ. ಕಲುಷಿತ ನೀರು, ಆಹಾರ ಸೇವನೆ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ರಾಜ್ಯಾದ್ಯಂತ ನೂರಾರು ಜನರಲ್ಲಿ ಕಾಲರಾ ರೋಗ ಲಕ್ಷಣ ಪತ್ತೆಯಾಗುತ್ತಿದೆ. ಇದರ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ನಿಗಾ ಇರಿಸಿ ಕಾಲರಾ ಅಂಕಿಅಂಶವನ್ನು ಕಲೆ ಹಾಕುತ್ತಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದಾಗ ಈ ಬಾರಿ ಎಪ್ರಿಲ್‌ ಅಂತ್ಯಕ್ಕೆ ಅತ್ಯಧಿಕ ಕಾಲರಾ ಪ್ರಕರಣ ವರದಿಯಾಗುವ ಭೀತಿ ಎದುರಾಗಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಕಾಲರಾದ ಬಗ್ಗೆ ಆತಂಕ ಬೇಡ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಕಾಲರಾ ಬರುವುದು ಹೇಗೆ?
ಕಾಲರಾ ಕರುಳಿನ ಸೋಂಕಾಗಿದ್ದು, ಇದು “ವಿಬ್ರಿಯೊ ಕಾಲರಾ’ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಈ ಬ್ಯಾಕ್ಟೀರಿಯಾ ದೇಹ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ಅಥವಾ ನಾಲ್ಕೈದು ದಿನಗಳ ಒಳಗಾಗಿ ಕಾಲರಾ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತವೆ. ಕಲುಷಿತ ಆಹಾರ ಅಥವಾ ನೀರು ಸೇವಿಸಿದಾಗ ಕಾಲರಾ ಬ್ಯಾಕ್ಟೀರಿಯಾ ಮೊದಲ ಹಂತದಲ್ಲಿ ವ್ಯಕ್ತಿಯ ಶ್ವಾಸನಾಳಗಳಲ್ಲಿ ಸೇರಿಕೊಂಡು ವಾಕರಿಕೆ ಉಂಟು ಮಾಡುತ್ತದೆ. ಅನಂತರ ಕರುಳಿನಲ್ಲಿ ವಿಷ ಬಿಡುಗಡೆ ಮಾಡುತ್ತದೆ. ಪರಿಣಾಮ ವ್ಯಕ್ತಿಯ ದೇಹದಲ್ಲಿ ವಾಂತಿ, ಭೇದಿ, ನಿರ್ಜಲೀಕರಣ, ಅತಿಸಾರ ಉಂಟಾಗುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ನಿರ್ದೇಶಕ ಡಾ| ಕೆ.ಸಿ.ಗುರುದೇವ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

14 ಕಾಲರಾ ಪ್ರಕರಣ ದೃಢ
ಫೆಬ್ರವರಿಯಲ್ಲಿ ರಾಮನಗರದಲ್ಲಿ 1, ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ 5, ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ 8 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು 14 ಕಾಲರಾ ಪ್ರಕರಣ ದೃಢಪಟ್ಟಿದೆ.

ಏನೆಲ್ಲ ಮುನ್ನೆಚ್ಚರಿಕೆ ಅಗತ್ಯ ?
-ಕುದಿಸಿ ಆರಿಸಿದ ನೀರು ಕುಡಿಯಿರಿ.
– ಸುತ್ತಲಿ‌ನ ಪರಿಸರ ಸ್ವತ್ಛವಿರಲಿ.
-ಕಲುಷಿತ ನೀರು, ಆಹಾರ ಸೇವನೆಯಿಂದ ದೂರವಿರಿ.
-ರಸ್ತೆ ಬದಿ ಮಾರಾಟ ಮಾಡುವ ಆಹಾರ, ಪಾನೀಯ ಸೇವನೆ ಬೇಡ.
-ಮಾನವ ತ್ಯಾಜ್ಯ ಒಳಗೊಂಡಿರುವ ನೀರಿನಲ್ಲಿ ಬೆಳೆದ ತರಕಾರಿ ಸೇವಿಸಬೇಡಿ.
-ಬೇಯಿಸದ ಹಸಿ ಆಹಾರ, ಶೆಲ್‌ಫಿಶ್‌ ಸೇವನೆ ಬೇಡ.
-ಡೇರಿ ಆಹಾರ ಕಡಿಮೆ ಸೇವಿಸಿ.
-ತರಕಾರಿ, ಹಣ್ಣು, ಹಣ್ಣಿನ ರಸ, ರಾಗಿ ಗಂಜಿಯಂಥ ದ್ರವಾಹಾರ ಹೆಚ್ಚಿರಲಿ.

Advertisement

ಕಾಲರಾದ ಲಕ್ಷಣಗಳೇನು ?
-ಯಾವುದೇ ಆಹಾರ ಸೇವನೆ ಮಾಡಿದರೂ ವಾಂತಿಯಾಗುವುದು.
-ಅತಿಯಾದ ನೀರಿನಿಂದ ಕೂಡಿದ ಭೇದಿ, ಬಾಯಿ, ಕಣ್ಣುಗಳು ಒಣಗು ವುದು.
-ಮಾಂಸ ಖಂಡಗಳ ಸಣ್ಣ ಸೆಳೆತ.
-ವಿಪರೀತ ಸುಸ್ತು, ಓಡಾಡಿದರೆ ಆಯಾಸ, ಅತಿಯಾದ ನಿದ್ದೆ , ತಲೆನೋವು.
-ಹೃದಯ ಬಡಿತ ಸಾಮಾನ್ಯಕ್ಕಿಂತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು. -ಮೂತ್ರ ವಿಸರ್ಜನೆ ಇಲ್ಲದಿರುವುದು, ವಿಪರೀತ ಬಾಯಾರಿಕೆ
-ದೇಹ ತೂಕವು ಕಡಿಮೆಯಾಗುತ್ತಾ ಹೋಗುವುದು, ಕಡಿಮೆ ರಕ್ತದೊತ್ತಡ.

Advertisement

Udayavani is now on Telegram. Click here to join our channel and stay updated with the latest news.

Next