Advertisement

“ಪೇ ಸಿಎಂ’ಅಧಿಕೃತಗೊಳಿಸಲು ಮುಂದಾದ ರಾಜ್ಯ ಸರ್ಕಾರ

08:29 PM Sep 22, 2022 | Team Udayavani |

ವಿಧಾನ ಪರಿಷತ್ತು: ಕೇವಲ ಒಂದು ದಿನದ ಹಿಂದೆ ತೀವ್ರ ಸದ್ದು ಮಾಡಿದ್ದ “ಪೇ ಸಿಎಂ’ ಅನ್ನು ಈಗ ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ!

Advertisement

ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ “ಪೇ ಸಿಎಂ’ ಡಿಜಿಟಲ್‌ “ಪೇ ಟು ಚೀಫ್ ಮಿನಿಸ್ಟರ್‌ ರಿಲೀಫ್ ಫ‌ಂಡ್‌ (ಸಿಎಂಆರ್‌ಎಫ್) ಎಂಬ ಡಿಜಿಟಲ್‌ ಆ್ಯಪ್‌ ಅಭಿವೃದ್ಧಿಪಡಿಸಿ, ಆ ಮೂಲಕ ಅಧಿಕೃತಗೊಳಿಸಲು ಮುಂದಾಗಿದೆ. ಇದರೊಂದಿಗೆ ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

“ಪೇ ಸಿಎಂ’ ಹೆಸರಿನಡಿ ಡಿಜಿಟಲ್‌ ಆ್ಯಪ್‌ ಅಭಿವೃದ್ಧಿಪಡಿಸಿ, ಆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ನೆರವು ನೀಡಲು ಅನುವಾಗುವಂತೆ  ಸ್ವತಃ ಆಡಳಿತ ಪಕ್ಷದ ಸದಸ್ಯ ಎಂ.ಕೆ. ಪ್ರಾಣೇಶ್‌ ಸಭಾಪತಿಗಳಿಗೆ ಗುರುವಾರ ಮನವಿ ಮಾಡಿದ್ದಾರೆ. ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನಗರದ ಹಲವೆಡೆ “ಪೇ ಸಿಎಂ’ ಎಂಬ ಅಭಿಯಾನದಡಿ ಪೋಸ್ಟರ್‌ ಅಂಟಿಸಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿರುವುದು ತೀವ್ರ ಖಂಡನೀಯ. ಆದರೆ, 21ನೇ ಶತಮಾನವು ಡಿಜಿಟಲ್‌ ಯುಗವಾಗಿ ಬದಲಾಗಿದ್ದು, ಪ್ರಸ್ತುತ ಡಿಜಿಟಲ್‌ ತಂತ್ರಜ್ಞಾನವು ತನ್ನ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತ ಸಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್‌ ಮಾಡುವ ಮೂಲಕ “ಪೇಸಿಎಂ’ ಅನ್ನು ಪೇ ಟು ಚೀಫ್ ಮಿನಿಸ್ಟರ್‌ ರಿಲೀಫ್ ಫ‌ಂಡ್‌ (ಸಿಎಂಆರ್‌ಎಫ್) ಎಂಬ ಹೆಸರಿನಲ್ಲಿ ಕಿಯೋನಿಕ್ಸ್‌ನಂತಹ ಸಂಸ್ಥೆ ವತಿಯಿಂದ ಒಂದು ಡಿಜಿಟಲ್‌ ಪಾವತಿ ವ್ಯವಸ್ಥೆಯ ಆ್ಯಪ್‌ ಸಿದ್ಧಪಡಿಸಿ, ಆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿ, ಸಂಕಷ್ಟದಲ್ಲಿರುವ ಬಡ ಕುಟುಂಬಗಳ ನೆರವಿಗೆ ಧಾವಿಸಲು ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ ಎಂದು ಪ್ರಾಣೇಶ್‌ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಐಟಿ-ಬಿಟಿ ಕಂಪೆನಿಗಳಿಂದ ಕಾರ್ಪೋರೇಟ್‌-ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌), ದಾನಿಗಳಿಂದ ದೇಣಿಗೆ ಸಂದಾಯ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next