ಬೆಂಗಳೂರು: ಮಾ.8ರಂದು ಬೆಂಗಳೂರಿನಲ್ಲಿ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಆಯೋಜಿಸಿರುವ ಮನ್ಸೂರ್ ಆಲಿ ಖಾನ್ ಪಟೌಡಿ ಉಪನ್ಯಾಸ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಕೆಎಸ್‌ಸಿಎ (ರಾಜ್ಯ ಕ್ರಿಕೆಟ್ ಸಂಸ್ಥೆ) ಬಹಿಷ್ಕರಿಸಲು ನಿರ್ಧರಿಸಿದೆ.
ಸ್ವತಃ ಕೆಎಸ್‌ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ ಉದಯವಾಣಿಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಇದರೊಂದಿಗೆ ಬಿಸಿಸಿಐ ಆಡಳಿತಾಧಿಕಾರಿಗಳು ಹಾಗೂ ಕೆಎಸ್‌ಸಿಎ ನಡುವಿನ ತಿಕ್ಕಾಟ ಇದೀಗ ಬಹಿರಂಗಗೊಂಡಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲ ರಾಜ್ಯದ ಪದಾಧಿಕಾರಿಗಳು ಕೂಡ ಕಾರ್ಯಕ್ರಮಕ್ಕೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ.
ಏತಕ್ಕಾಗಿ ಬಹಿಷ್ಕಾರ?: ಮಾ.3ರಂದು ಬಿಸಿಸಿಐ ಮುಖ್ಯ ಕಾರ್ಯದರ್ಶಿ ರಾಹುಲ್ ಜೊಹ್ರಿ ಕೆಎಸ್‌ಸಿಎಗೆ ಇ ಮೇಲ್ ಮಾಡಿದ್ದರು. ಬೆಂಗಳೂರಿನಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮಕ್ಕಾಗಿ ಅಧಿಕೃತ ಆಹ್ವಾನ ಪತ್ರ ನೀಡಿದ್ದರು. ಇದರಲ್ಲಿ ಲೋಧಾ ಶಿಫಾರಸಿನ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯವಾಗುವ ಅರ್ಹ ಅಭ್ಯರ್ಥಿಗಳು ಮಾತ್ರ ಪಾಲ್ಗೊಳ್ಳಬಹುದು. ಅನರ್ಹರಿಗೆ ಕಾರ್ಯಕ್ರಮಕ್ಕೆ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯಕ್ರಮಕ್ಕೆ ಕೆಎಸ್‌ಸಿಎನಿಂದ ಯಾವ ಪದಾಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಮಾತನಾಡಿದ ವಿನಯ್ ಹೇಳಿದ್ದು ಹೀಗೆ, ಲೋಧಾ ಶಿಫಾರಸಿನ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಅನರ್ಹರಾದವರು ಬರಬಾರದು ಎನ್ನುವ ನಿರ್ಧಾರದಲ್ಲಿ ಅರ್ಥವೇ ಇಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ಹಿರಿಯರಿಗೆ ಅವಮಾನ ಮಾಡಿದಂತೆ. ಹೀಗಾಗಿ ಪಾಲ್ಗೊಳ್ಳದಿರುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.