ಹೊಸಕೋಟೆ: ಸರ್ಕಾರಿ ಜಮೀನು ಹಾಗೂ ಅರಣ್ಯದ ಅಂಚಿನ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯದ ಅಂಚಿನ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು 94ಸಿ ಹಾಗೂ 94 ಸಿಸಿ ಅಡಿ ಅರ್ಜಿ ನೀಡಿದರೆ ಅವರಿಗೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು. ಬರುವ ತಿಂಗಳಿನಿಂದ ಪಡಿತರ ವಿತರಣೆ ಪ್ರಮಾಣವನ್ನು ಪುನಃ 10 ಕೆಜಿಗೆ ಹೆಚ್ಚಿಸಲಾಗುವುದು.
ಹೊಸಕೋಟೆ ನಗರದವರೆಗೆ ಮೆಟ್ರೋ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಿಸುವ ಕಾರ್ಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
Related Articles
ಬಡ ನಿವೇಶನ ರಹಿತರ ಹಕ್ಕುಗಳನ್ನು ಕಾಯಲು ಸರ್ಕಾರ ಬದ್ಧವಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಿದ್ದ ಪಡಿತರ ಸ್ಥಗಿತವಾಗಿರುವುದರಿಂದ ಪಡಿತರ ವಿತರಣೆ ಪ್ರಮಾಣ ಇಳಿಕೆಯಾಗಿದೆ. ಪುನಃ ಈ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿ ತಿಂಗಳು ಸುಮಾರು 10 ಸಾವಿರ ಕೋಟಿ ರೂ.ಪಿಂಚಣಿಗಳ ವಿತರಣೆಯಾಗುತ್ತಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ತಕ್ಷಣ ಭೂ ಪರಿವರ್ತನೆ ಮಾಡಿಕೊಡಲು ಸುಧಾರಣೆ ಕಾಯ್ದೆ ತರಲಾಗಿದೆ. ಯುವಕರು, ವಿದ್ಯಾವಂತರು, ಐಟಿಬಿಟಿಗಳಲ್ಲಿ ತೊಡಗಿಸಿಕೊಂಡವರು ರಾಜ್ಯದ ಯಾವುದೇ ಭಾಗದಲ್ಲಿಯಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಕೃಷಿಯಲ್ಲಿ ಆಧುನಿಕತೆ ತರುವ ಉದ್ದೇಶದಿಂದ ಹಿಂದೆ ಇದ್ದ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದರು.
ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಎನ್.ನಾಗರಾಜ(ಎಂಟಿಬಿ) ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಸೌಕರ್ಯಗಳನ್ನು ಪಡೆಯಲು ಜನಸಾಮಾನ್ಯರು ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವದನ್ನು ಕಡಿಮೆಗೊಳಿಸುವ ಉದ್ದೇಶದಿಂದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಬಡವರಿಗೆ, ರೈತರಿಗೆ ಅನುಕೂಲವಾಗಿದೆ.
ಹೊಸಕೋಟೆ ತಾಲೂಕಿನಲ್ಲಿ ಅಧಿಕವಾಗಿರುವ ಅನೇಕ ಬಡವರಿಗೆ ಸಮರ್ಪಕ ಸೂರು ಇಲ್ಲ ಅಂತಹವರಿಗೆ ನಿವೇಶನ ಒದಗಿಸಬೇಕು ಎಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದಾಗ, ತಾಲೂಕಿನಲ್ಲಿ ಲಭ್ಯವಿರುವ ಗೋಮಾಳ, ಸರ್ಕಾರದ ಭೂಮಿ ಗುರುತಿಸಿ ಸುಮಾರು 10 ಸಾವಿರ ಜನ ನಿವೇಶನ ರಹಿತರಿಗೆ ಹಂಚಲು ಕ್ರಮವಹಿಸಿದ್ದಾರೆ.ಇದಕ್ಕಾಗಿ ತಾಲೂಕಿನ ಸುಮಾರಿ 290 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಗುರುತಿಸಿ,ಹಸ್ತಾಂತರ ಮಾಡುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜನಸಾಮಾನ್ಯರ ಕಲ್ಯಾಣದ ಕನಸಿನೊಂದಿಗೆ ಸರ್ಕಾರ ಜನಪರ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ, ಸಾರ್ವಜನಿಕರ ತೆರಿಗೆಯಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಇಂದು ತೆರಿಗೆ ಪಾವತಿದಾರರ ಬಳಿಗೆ ಬಂದು ಸೌಲಭ್ಯಗಳನ್ನು ನೀಡುತ್ತಿರುವದು ಅಭಿನಂದನೀಯ ಕಾರ್ಯ ಎಂದರು.