ಮಣಿಪಾಲ: ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವದ ದಿನವಾದ ಇಂದು ಕರ್ನಾಟಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಚಲನಚಿತ್ರ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
1992ರಲ್ಲಿ ಆರಂಭವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದುವರೆಗೆ ಒಟ್ಟು ಮಂದಿಗೆ ಮಾತ್ರ ನೀಡಲಾಗಿದೆ. ಅದರಲ್ಲೂ 2009ರ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ನಡೆಯುತ್ತಿದೆ.
1992ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ಈ ಪ್ರಶಸ್ತಿ ಸಂಪ್ರದಾಯ ಆರಂಭಿಸಿದ್ದರು. ರಾಷ್ಟ್ರಕವಿ ಕುವೆಂಪು ಮತ್ತು ವರನಟ ಡಾ.ರಾಜ್ ಕುಮಾರ್ ಅವರಿಗೆ 1992ರಲ್ಲಿ ಕರ್ನಾಟಕ ರತ್ನ ಗೌರವ ನೀಡಲಾಗಿತ್ತು. ಇದೀಗ 30 ವರ್ಷಗಳ ಬಳಿಕ ರಾಜ್ ಕುಮಾರ್ ಕಿರಿಯ ಪುತ್ರ ಅಪ್ಪುವಿಗೆ ನೀಡಲಾಗುತ್ತಿದೆ. ಆದರೆ ಮರಣೋತ್ತರ ಪುರಸ್ಕಾರ ಎನ್ನುವುದು ಮಾತ್ರ ಬೇಸರದ ಸಂಗತಿ. ಇದೇ ಮೊದಲ ಬಾರಿಗೆ ಕರ್ನಾಟಕ ರತ್ನ ಪುರಸ್ಕಾರವನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ.
ಕರ್ನಾಟಕ ರತ್ನ ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಪ್ರಶಸ್ತಿ 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಶಾಲನ್ನು ಒಳಗೊಂಡಿರುತ್ತದೆ.
2021ರ ಅಕ್ಟೋಬರ್ 29ರಂದು ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಸರ್ಕಾರಿ ಗೌರವಗಳೊಂದಿಗೆ ಅಪ್ಪು ಅಂತಿಮ ವಿಧಿ ವಿಧಾನಗಳು ನಡೆದಿದ್ದವು. ಪುನೀತ್ ಗೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಲಕ್ಷಾಂತರ ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ಶಿಫಾರಸು ಅನ್ವಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವಂತಿಲ್ಲ. ಆದ್ದರಿಂದ ರಾಜ್ಯೋತ್ಸವ ಪ್ರಶಸ್ತಿಗೆ ಪುನೀತ್ ರಾಜ್‌ಕುಮಾರ್ ಆಯ್ಕೆಯಾಗಿರಲಿಲ್ಲ.
ಕರ್ನಾಟಕ ರತ್ನ ಗೌರವ ಪಡೆದವರು
1 ಕುವೆಂಪು (1992) ಸಾಹಿತ್ಯ
2 ಡಾ.ರಾಜ್ ಕುಮಾರ್ (1992) ಸಿನೆಮಾ
3 ಎಸ್.ನಿಜಲಿಂಗಪ್ಪ (1999) ರಾಜಕೀಯ
4 ಸಿ.ಎನ್.ಆರ್.ರಾವ್ (2000) ವಿಜ್ಞಾನ
5 ದೇವಿ ಪ್ರಸಾದ್ ಶೆಟ್ಟಿ (2001) ವೈದ್ಯಕೀಯ
6 ಭೀಮಸೇನ್ ಜೋಷಿ (2005) ಸಂಗೀತ
7 ಶ್ರೀ ಶಿವಕುಮಾರ ಸ್ವಾಮಿಗಳು (2007) ಸಾಮಾಜಿಕ ಸೇವೆ
8 ಡಾ.ಡಿ.ಜವರೇಗೌಡ (2008) ಶಿಕ್ಷಣ ಮತ್ತು ಸಾಹಿತ್ಯ
9 ಡಾ.ವೀರೇಂದ್ರ ಹೆಗ್ಗಡೆ (2009) ಸಾಮಾಜಿಕ ಸೇವೆ
10 ಪುನೀತ್ ರಾಜ್‌ಕುಮಾರ್ (2021) ಸಿನೆಮಾ, ಸಾಮಾಜಿಕ ಸೇವೆ