ವಿಧಾನಸೌಧ: ವರ್ಷಗಳ ಹಿಂದೆ ಅಗಲಿದ ನಟ ಡಾ.ಪುನೀತ್ ರಾಜಕುಮಾರ್ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ರತ್ನ’ ಪ್ರದಾನ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ವಿಧಾನಸಭೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟರಾದ ರಜಿನಿಕಾಂತ್, ಜೂ.ಎನ್ ಟಿಆರ್ ಅವರು ಪ್ರಮುಖ ಭಾಗವಹಿಸಿದ್ದು, ಮಳೆ ಬಂದ ಕಾರಣ ಕಾರ್ಯಕ್ರಮ ಯೋಜನೆಯಂತೆ ನಡೆಯದಿದ್ದರೂ, ಪೂರ್ಣವಾಗಿ ನಡೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಧಾ ಮೂರ್ತಿ ಸೇರಿದಂತೆ ಗಣ್ಯರು ಅಪ್ಪು ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೂಪರ್ ಸ್ಟಾರ್ ರಜಿನಿಕಾಂತ್, ಮಾರ್ಕಂಡೇಯ, ಪ್ರಹ್ಲಾದನಂತೆ ಕಲಿಯುಗಕ್ಕೆ ಅಪ್ಪು. ಆತ ದೇವರ ಮಗು. ಅಪ್ಪು ಆತ್ಮ ನಮ್ಮ ಸುತ್ತಲೂ ಇದೆ. ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುವಾಗಲೂ ಮಳೆ ಬಂದಿತ್ತು. ಈಗಲೂ ಮಳೆ ಬಂದಿದೆ ಎಂದರು.
Related Articles
1979ರಲ್ಲಿ ರಾಜ್ ಕುಮಾರ್ ಮಡಿಲಿನಲ್ಲಿ ಪುನೀತ್ ಅವರನ್ನು ನಾನು ಮೊದಲು ನೋಡಿದ್ದೆ. ಅಪ್ಪು ಮರೆಯಾದಾಗ ನಾನು ಆಸ್ಪತ್ರೆಯಲ್ಲಿದ್ದೆ. ಮೂರು ದಿನದ ಬಳಿಕ ನನಗೆ ವಿಷಯ ಗೊತ್ತಾಯಿತು. ನನಗೆ ನಂಬಲಾಗಲಿಲ್ಲ. ರಾಜಕುಮಾರ್, ಎಂಜಿಆರ್, ಎನ್ ಟಿಆರ್, ಶಿವಾಜಿ ಗಣೇಶನ್ ಅವರುಗಳು 50-60 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಪುನೀತ್ ಕೇವಲ 21 ವರ್ಷಗಳಲ್ಲಿ 35 ಸಿನಿಮಾಗಳಲ್ಲೇ ಮಾಡಿ ಅಮರನಾಗಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತೆಲುಗು ನಟ ತಾರಕರಾಮ್, “ನಾನು ನನ್ನ ಸಾಧನೆಯಿಂದಾಗಿ ಇಲ್ಲಿ ಬಂದಿಲ್ಲ. ನಾನು ಹೆಮ್ಮೆಯ ಗೆಳೆಯನಾಗಿ ಇಲ್ಲಿಗೆ ಬಂದಿದ್ದೇನೆ. ಪರಂಪರೆ ಹಿರಿಯರಿಂದ ಬರುತ್ತದೆ, ವ್ಯಕ್ತಿತ್ವ ಸ್ವಂತ ಸಂಪಾದನೆ. ಕೇವಲ ವ್ಯಕ್ತಿತ್ವದಿಂದ, ನಗುವಿನಿಂದ ರಾಜ್ಯ ಗೆದ್ದ ಯಾವುದಾದರೂ ರಾಜನಿದ್ದರೆ ಅದು ಪುನೀತ್ ಮಾತ್ರ. ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾನು ಬೇರೆಲ್ಲೂ ಕಂಡಿಲ್ಲ, ‘ಕರ್ನಾಟಕ ರತ್ನ’ದ ಅರ್ಥವೇ ಪುನೀತ್ ರಾಜಕುಮಾರ್ “ ಎಂದರು.