Advertisement

ಹಿಂದಿ ಹೆಸರುಗಳಿಗೆ ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆ

03:55 PM Jun 15, 2022 | Team Udayavani |

ಕಾರವಾರ: ನಗರ ವ್ಯಾಪ್ತಿಯಲ್ಲಿ ವಾರ್ಡ್‌ಗಳ ರಸ್ತೆ ನಾಮಫಲಕಗಳಲ್ಲಿ ಕನ್ನಡದ ಜೊತೆಗೆ ಕೊಂಕಣಿ- ಮರಾಠಿ ಭಾಷೆಗೆ ತರ್ಜುಮೆ ಮಾಡಿ ಹಿಂದಿಯಲ್ಲಿ ರಸ್ತೆ ನಾಮಫಲಕ ಬರೆಯಿಸಿದ ನಗರ ಸಭೆ ಸುಖಾ ಸುಮ್ಮನೆ ಇಲ್ಲದ ವಿವಾದ ಒಂದನ್ನು ಮೈಮೇಲೆ ಎಳೆದು ಕೊಂಡಿದೆ. ಹಿಂದಿ ಅಕ್ಷರಗಳಿರುವ ಕೊಂಕಣಿ, ಮರಾಠಿ ಭಾಷೆಯ ರಸ್ತೆ ನಾಮಫಲಕಗಳ ಬದಲಾ ವಣೆಗೆ ವಾರದ ಗಡುವು ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಸ್ತೆಯಲ್ಲಿನ ಹಿಂದಿ ಭಾಷೆಯ ಅಕ್ಷರಗಳಿಗೆ ಮಂಗಳವಾರ ಮಸಿ ಬಳಿದರು.

Advertisement

ಸೋಮವಾರ ಕನ್ನಡಪರ ಸಂಘಟನೆಗಳು ರಸ್ತೆಯ ಮಾರ್ಗಸೂಚಿ ಫಲಕಗಳಲ್ಲಿನ ಹಿಂದಿ ಅಕ್ಷರ ತೆಗೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದವು. ಕೊಂಕಣಿ ಹಾಗೂ ಮರಾಠಿ ಭಾಷೆಯಲ್ಲಿ ರಸ್ತೆ ಹೆಸರುಗಳನ್ನು ದೇವನಾಗರಿ ಲಿಪಿ ಹಿಂದಿಯಲ್ಲಿ ಬರೆದಿರುವುದನ್ನು ತೆರವುಗೊಳಿಸಲು ಆಗ್ರಹಿಸಿತ್ತು. ಈ ಸಂಬಂಧ ನಗರಸಭೆಯ ಪೌರಾಯುಕ್ತರು ಮತ್ತು ಅಧ್ಯಕ್ಷರ ಉದ್ಧಟತನ ಖಂಡಿಸಿತ್ತು. ನಗರಸಭೆಗೆ ರಸ್ತೆ ಹೆಸರು ಫಲಕ ಬದಲಿಸಲು ನೀಡಿದ ಗಡುವು ಮುಗಿದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರಯ ನಾಮಫಲಕಗಳಲ್ಲಿನ ಹಿಂದಿ ಅಕ್ಷರಗಳಿಗೆ ಮಸಿ ಬಳಿಯುವ ಮೂಲಕ ನಗರಸಭೆ ಹಾಗೂ ಪೌರಾಯುಕ್ತರ ವಿರುದ್ಧ ಘೋಷಣೆಗಳನ್ನ ಕೂಗಿದರು.

ಮೊದಲು ಕನ್ನಡದಲ್ಲಿತ್ತು ರಸ್ತೆ ನಾಮಫಲಕ: ಕಾರವಾರ ನಗರದ ವಿವಿಧ ವಾರ್ಡ್‌ಗಳ ರಸ್ತೆ ನಾಮಫಲಕಗಳು ಈ ಮುಂಚೆ ಕನ್ನಡದಲ್ಲಿದ್ದವು. ಕೆಲವು ಕಡೆ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿದ್ದವು. ಆದರೆ ಕಾರವಾರ ನಗರಸಭೆಯ ಪೌರಾಯುಕ್ತ ಆರ್‌.ಪಿ. ನಾಯಕ ಕಾರವಾರದಲ್ಲಿ ಕೊಂಕಣಿಗರಿರುವ ಕಾರಣ ಅವರಿಗೆ ಅರ್ಥವಾಗಲೆಂದು ಕೆಲ ವಾರ್ಡ್ ಗಳ ಹೆಸರುಗಳನ್ನು ಕೊಂಕಣಿ- ಮರಾಠಿ ಅರ್ಥ ಬರುವಂತೆ ಕನ್ನಡದ ಜೊತೆಗೆ ಹಿಂದಿಯಲ್ಲಿ ಬೋರ್ಡ್‌ಗಳನ್ನು ಬರೆಯಿಸಿದ್ದರು.

ಈ ಸಂಬಂಧ ಕರವೇ ಕಾರವಾರ ಕಾರ್ಯಕರ್ತರಿಂದ ಮಾಹಿತಿ ಪಡೆದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪೌರಾಯುಕ್ತ ಆರ್‌.ಪಿ.ನಾಯಕಗೆ ಕರೆ ಮಾಡಿ ಇದನ್ನು ತೆರವುಗೊಳಿಸಲು ಒತ್ತಾಯಿಸಿದ್ದರು.

ನಗರಸಭೆ ಭಾಷಾ ವಿವಾದ ಹುಟ್ಟು ಹಾಕಿದ ಬಗ್ಗೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು, ಜನಶಕ್ತಿ ವೇದಿಕೆ, ಕರುನಾಡು ರಕ್ಷಣಾ ವೇದಿಕೆಯಂಥ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರಸಭೆಯ ಈ ನಡೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ನೀಡಿದ್ದರು. ಅಲ್ಲದೇ ಹಿಂದಿ, ಕೊಂಕಣಿ, ಮರಾಠಿ ಬೋರ್ಡ್‌ಗಳನ್ನು ತೆರವು ಮಾಡಲು ಗಡುವು ನೀಡಿದ್ದರು. ಆದರೆ ಎಚ್ಚರಿಕೆ ನೀಡಿ ಐದಾರು ದಿನ ಕಳೆದರೂ ಬೋರ್ಡ್‌ಗಳನ್ನು ತೆರವು ಮಾಡದ ಕಾರಣ ಮಂಗಳವಾರ ಏಕಾಎಕಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ವಿವಿಧ ವಾರ್ಡ್‌ಗಳಿಗೆ ತೆರಳಿ ಹಿಂದಿ ಹೆಸರುಗಳಿಗೆ ಮಸಿ ಬಳಿದಿದ್ದಾರೆ.

Advertisement

ಕರವೇ (ಪ್ರವೀಣ್‌ ಶೆಟ್ಟಿ ಬಣ) ಮಸಿ ಬಳಿದಿರುವ ನಾಮಫಲಕಗಳನ್ನ ನಗರಸಭೆ ತೆರವು ಮಾಡಲಿದೆಯೇ ಅಥವಾ ಭಾಷಾ ವಿವಾದ ಬೆಂಕಿಯನ್ನು ಹಾಗೆ ಬಿಡಲಿದೆಯೋ ಎಂಬುದನ್ನು ಕನ್ನಡ ಸಂಘಟನೆಗಳು ಕಾದು ನೋಡುತ್ತಿವೆ. ಅಲ್ಲದೆ ಈತನಕ ಜನಪ್ರತಿನಿಧಿಗಳು ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಕನ್ನಡದ ವಿರುದ್ಧ ಹೋದರೆ ಬರುವ ಚುನಾವಣೆಯಲ್ಲಿ ಅದು ಮುಳುವಾಗುವ ಸ್ಪಷ್ಟಸೂಚನೆಗಳು ಜನಪ್ರತಿನಿಧಿಗಳಿಗೆ ತಿಳಿದ ಕಾರಣ ನಾಮಫಲಕ ವಿವಾದಕ್ಕೆ ಅಧಿಕಾರಿಯನ್ನು ಹೊಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next