Advertisement

ರಾಜ್ಯದ ಅಭಿವೃದ್ಧಿಗೆ ಒಗ್ಗಟ್ಟು ತೋರಿ

03:42 PM Nov 02, 2020 | Suhan S |

ಕಲಬುರಗಿ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒಗ್ಗಟ್ಟಿನ ಪ್ರದರ್ಶನ ತೋರಿಸಬೇಕಿದೆ ಎಂದು ಜಿಲ್ಲಾ ಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಹೇಳಿದರು.

Advertisement

ನಗರದ ನೆಹರು ಗಂಜ್‌ ಪ್ರದೇಶದ ನಗರೇಶ್ವರ ಪ್ರೌಢ ಶಾಲೆಯಲ್ಲಿ ರವಿವಾರ ನಡೆದ 65ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸಲು ಅಂದು ಲಕ್ಷಾಂತರ ಕನ್ನಡಿಗರು ಒಗ್ಗಟ್ಟು ಪ್ರದರ್ಶಿಸಿದ್ದರು. ಅದೇ ರೀತಿ ನಾವು ಒಗ್ಗಟ್ಟು ತೋರಿ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ, ಸ್ವಾವಲಂಬಿ ಕರ್ನಾಟಕವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದರು.

ಕನ್ನಡಿಗರು ಸಹೃದಯಿಗಳು, ಧಾರ್ಮಿಕ ಸಹಿಷ್ಣುತೆವುಳ್ಳ ಪ್ರಜ್ಞಾವಂತರು. ನಮ್ಮಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಲವು, ಆದರೆ ಭಾವನೆ ಮಾತ್ರ ಒಂದೇ. ನಾವೆಲ್ಲರೂ ಕನ್ನಡಿಗರು ಎಂದರು.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಬೌದ್ಧ, ಜೈನ, ಸಿಖ್‌ ಸೇರಿದಂತೆ ಎಲ್ಲ ಧರ್ಮಿಯರು, ಧರ್ಮ ಸಹಿಷ್ಣತೆ, ಸಮನ್ವಯತೆ,ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅಪೂರ್ವ ಚಳವಳಿಯೊಂದು ರೂಪಗೊಂಡು12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಕಲ್ಯಾಣ ಕರ್ನಾಟಕ ಇದಾಗಿದೆ ಎಂದುಹೇಳಿದರು.

Advertisement

ಧ್ವಜಾರೋಹಣಕ್ಕೂ ಮುನ್ನ ಜಿಲ್ಲಾಧಿಕಾರಿಗಳು ನಾಡದೇವತೆ ಭುವನೇಶ್ವರಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಸಂಗೀತ ಶಿಕ್ಷಕರು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಪೊಲೀಸ್‌ ಪರೇಡ್‌ ಕಮಾಂಡರ್‌ ಹಣಮಂತ ಹಾಗೂ ತಂಡದವರು ಬ್ಯಾಂಡ್‌ ಮೂಲಕ ರಾಷ್ಟ್ರಗೀತೆ ನುಡಿಸಿದರು. ಗಣ್ಯರಿಗೆ ಹೂವಿನಹಾರ ಮತ್ತು ಇನ್ನಿತರ ಸನ್ಮಾನ ಸಾಮಗ್ರಿಗಳಿಗೆವೆಚ್ಚ ಮಾಡದೆ ಉಳಿಸಿದ ಎರಡು ಸಾವಿರ ರೂ. ಮೊತ್ತದ ಚೆಕ್‌ನ್ನು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು.

ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಸಕದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಖನೀಜ್‌ ಫಾತೀಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಜಿ.ಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಪ್ರಾದೇಶಿಕ ಆಯುಕ್ತ ಡಾ| ಎನ್‌.ವಿ. ಪ್ರಸಾದ,ಎಸ್‌ಪಿ ಡಾ| ಸಿಮಿ ಮರಿಯಮ್‌ ಜಾರ್ಜ್‌, ಜಿ.ಪಂ ಸಿಇಒ ಡಾ| ರಾಜಾ ಪಿ., ನಗರ ಉಪ ಪೊಲೀಸ್‌ ಆಯುಕ್ತ ಡಿ. ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಶ್ರೀಕಾಂತ ಫುಲಾರಿ ಮತ್ತು ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು, ಡಾ| ಶಂಕರ್‌ ವಣಿಕ್ಯಾಳ ವಂದಿಸಿದರು

ಕವಿ ಅಮೋಘವರ್ಷ ನೃಪತುಂಗನ “ಕವಿರಾಜ ಮಾರ್ಗ’ ಕೃತಿ ಕಾವೇರಿಯಿಂದ ಗೋದಾವರಿ ವರೆಗೆ ಕನ್ನಡ ನಾಡು ವಿಸ್ತರಿಸಿರುವ ವೈಭವ ವರ್ಣಿಸಿದೆ. ಇಂತಹ ಕನ್ನಡಿಗರು ಮತ್ತೆ ಒಂದಾಗಲು ನೂರಾರು ವರ್ಷಗಳೇ ಬೇಕಾಯಿತು. ಆದ್ದರಿಂದ ನಾವೆಲ್ಲ ಹಿರಿಯರು ಒಂದುಗೂಡಿಸಿದ ನಾಡು, ನುಡಿ ರಕ್ಷಣೆಗೆ ಪಣತೊಡೋಣ.  –ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next