Advertisement

ರಾಜ್ಯೋತ್ಸವ ಪ್ರಯುಕ್ತ ಅ.28ಕ್ಕೆ ಕೋಟಿ ಕಂಠ ಗಾಯನ : ಸಚಿವ ಸುನಿಲ್‌ಕುಮಾರ್‌

09:11 PM Oct 06, 2022 | Team Udayavani |

ಬೆಂಗಳೂರು: ರಾಜ್ಯೋತ್ಸವ ಪ್ರಯುಕ್ತ ಅ.28ರಂದು ಏಕಕಾಲದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳ ಗಾಯನ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್‌ ತಿಳಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯಾದ್ಯಂತ ಅಂದು ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕಳೆದ ವರ್ಷ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ಮಾತಾಡ್‌ ಮಾತಾಡ್‌ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಲಕ್ಷ ಕಂಠ ಗಾಯನ ಯೋಜಿಸಲಾಗಿತ್ತು. ಈ ಬಾರಿ ಕೋಟಿ ಕಂಠ ಗಾಯನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಅ.28 ರಂದು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ’, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ’, ಡಾ.ಡಿ.ಎಸ್‌.ಕರ್ಕಿಯವರ “ಹಚ್ಚೇವು ಕನ್ನಡದ ದೀಪ’ ಹಾಗೂ ಡಾ.ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಐದು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ. ಇದನ್ನು ಹೊರತುಪಡಿಸಿಯೂ ಆಸಕ್ತರು ಬೇರೆ ಕನ್ನಡ ಗೀತೆಗಳನ್ನು ಸಮಯದ ಮಿತಿ ಆಧರಿಸಿ ಪ್ರಸ್ತುತಪಡಿಸಬಹುದಾಗಿದೆ ಎಂದು ಹೇಳಿದ್ದಾರೆ.

ಕನ್ನಡಿಗರು, ಅನಿವಾಸಿ ಕನ್ನಡಿಗರು, ಹೊರನಾಡ ಕನ್ನಡಿಗರು ಹಾಗೂ ಗಡಿನಾಡ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದು, ಪ್ರಪಂಚದಾದ್ಯಂತ ಕನ್ನಡದ ಕಂಪು ಪಸರಿಸುವ ವಿನೂತನ ಕಾರ್ಯಕ್ರಮ ಇದಾಗಲಿದೆ ಎಂದು ತಿಳಿಸಿದ್ದಾರೆ.

ಈ ಅಭಿಯಾನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳು, ತಾಲೂಕು ಕೇಂದ್ರಗಳು, ದೆಹಲಿ ಕನ್ನಡ ಸಂಘ, ಹೊರನಾಡು, ಗಡಿನಾಡ ಸಂಘಗಳ ಕಚೇರಿ, ವಿಧಾನಸೌಧದ ಮೆಟ್ಟಿಲು ಹಾಗೂ ವಿಧಾನಸೌಧ-ವಿಕಾಸ ಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಮೂಹ ಗಾಯನ ನಡೆಸುವರು.

Advertisement

ಅದೇ ರೀತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಜೆಸ್ಟಿಕ್‌ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣದಲ್ಲೂ ಈ ಐದು ಕನ್ನಡ ಗೀತೆಗಳನ್ನು ಹಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಡಿನ ಪ್ರಮುಖ ಪ್ರವಾಸಿ ಸ್ಥಳಗಳು, ಕೋಟೆಗಳು, ಕಡಲತೀರ, ಐಟಿ ಕಂಪನಿಗಳು, ಆಸ್ಪತ್ರೆ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಕೋಟಿ ಕಂಠ ಗಾಯನ ಅಭಿಯಾನ ನಡೆಯಲಿದ್ದು, ಸಮಸ್ತ ಕನ್ನಡಿಗರು ಅಭಿಮಾನ ಪೂರ್ವಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next