Advertisement

ಇಂದಿನಿಂದ ಕೆಪಿಎಲ್‌ ಟಿ20 ರೋಮಾಂಚನ

12:15 PM Aug 16, 2019 | Sriram |

ಬೆಂಗಳೂರು: ಕರ್ನಾಟಕ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುವ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟಿ20 ಕ್ರಿಕೆಟ್‌ ಕೂಟಕ್ಕೆ ಶುಕ್ರವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ವರ್ಣರಂಜಿತ ಚಾಲನೆ ಸಿಗಲಿದೆ.
ಒಟ್ಟು 16 ದಿನ, 25 ಪಂದ್ಯಗಳು ನಡೆಯಲಿವೆ. ಮೊದಲ 15 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಿದರೆ ಅನಂತರದ 10 ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ.

Advertisement

ಕುತೂಹಲ ಕೆರಳಿಸಿದ ಮೊದಲ ಪಂದ್ಯ
ಆತಿಥೇಯ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಉದ್ಘಾಟನಾ ಪಂದ್ಯದಲ್ಲಿ ಮೈಸೂರು ವಾರಿಯರ್ ತಂಡವನ್ನು ಎದುರಿಸಲಿದೆ. ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಜೋನಾಥ್‌ ರಾಂಗ್ಸೆನ್‌ ಮುನ್ನಡೆಸುತ್ತಿದ್ದಾರೆ. ವಿ. ಕೌಶಿಕ್‌, ರೋಹನ್‌ ಕದಮ್‌ ಹಾಗೂ ನಿಕಿನ್‌ ಜೋಶ್‌ ತಂಡದ ಪ್ರಮುಖ ತಾರಾ ಆಟಗಾರರಾಗಿದ್ದಾರೆ.ಮೈಸೂರು ವಾರಿಯರ್ ತಂಡಕ್ಕೆ ಅಮಿತ್‌ ವರ್ಮ ನಾಯಕತ್ವವಿದೆ. ಅನಿರುದ್ಧ್ ಜೋಶಿ, ಜೆ. ಸುಚಿತ್‌ ಹಾಗೂ ಡಿ.ನಿಶ್ಚಲ್‌ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.

ಮೈಸೂರಿನಲ್ಲಿ ಫೈನಲ್‌:
ಪ್ರತಿ ವರ್ಷದಂತೆ ಈ ಸಲವೂ ಕೆಪಿಎಲ್‌ ರೋಚಕತೆ ಹುಚ್ಚೆಬ್ಬಿಸಿದೆ. ಹಲವಾರು ದಾಖಲೆಗಳು, ಅವಿಸ್ಮರಣೀಯ ಕ್ಷಣಗಳಿಗೆ ಈ ಸಲದ ಕೂಟ ಸಾಕ್ಷಿಯಾಗುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಎಲ್ಲ ಪಂದ್ಯವನ್ನು ವರ್ಗಾಯಿಸಲಾಗಿದ್ದು ಆ.31ರಂದು ಫೈನಲ್‌ ಪಂದ್ಯ ಮೈಸೂರಿನಲ್ಲಿ ನಡೆಯಲಿದೆ.

ಅಗ್ಗದ ಬೆಲೆಗೆ ಟಿಕೆಟ್‌
ಕ್ರಿಕೆಟ್‌ ಪ್ರಿಯರು ಅಗ್ಗದ ಬೆಲೆಯಲ್ಲಿ ಟಿ20 ಕ್ರಿಕೆಟ್‌ ಕೂಟವನ್ನು ವೀಕ್ಷಿಸಬಹುದಾಗಿದೆ. ಟಿಕೇಟ್‌ ಖರೀದಿಗಾಗಿ ಕ್ರೀಡಾಂಗಣದ ಬಾಕ್ಸ್‌ ಆಫೀಸ್‌ ಕೌಂಟರ್‌ಗಳು ಪಂದ್ಯದ ದಿನ ಬೆಳಿಗ್ಗೆ 11ರಿಂದ ರಾತ್ರಿ 8 ರ ತನಕ, ಪಂದ್ಯ ಇಲ್ಲದ ದಿನ ಬೆಳಿಗ್ಗೆ 11ರಿಂದ ಸಂಜೆ 6ರ ತನಕ ತೆರೆದಿರುತ್ತವೆ. ಗೇಟ್‌ ನಂ.18ರಲ್ಲಿ ಟಿಕೆಟ್‌ಗಳು ಲಭ್ಯವಿರಲಿದೆ. ಗೇಟ್‌ ನಂ.19ರಲ್ಲಿ ಆನ್‌ಲೈನ್‌ನಲ್ಲಿ ಕಾಯ್ದಿರಿಸಿದವರಿಗೆ ಟಿಕೆಟ್‌ಗಳು ನೀಡಲಾಗುತ್ತದೆ. ಬೆಂಗಳೂರು ಚರಣದ ಪಂದ್ಯಗಳ ಟಿಕೆಟ್‌ ದರ ರೂ.50 ರಿಂದ 2 ಸಾವಿರ ರೂ. ವರೆಗೆ ಇದೆ. ಮೈಸೂರು ಚರಣದ ಪಂದ್ಯದ ಟಿಕೆಟ್‌ ಬೆಲೆ ಕೇವಲ 50 ರೂ. ಆಗಿದೆ.

ಮಹಿಳಾ ಪ್ರದರ್ಶನ ಪಂದ್ಯ
ರಾಜ್ಯದಲ್ಲಿ ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಪಿಎಲ್‌ ಜತೆಜತೆಗೆ ಮಹಿಳಾ ಟಿ20 ಕೂಟವನ್ನೂ ನಡೆಸಲಾಗುತ್ತಿದೆ. ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್‌, ಶಿವಮೊಗ್ಗ ಲಯನ್ಸ್‌-ಈ ಮೂರು ತಂಡಗಳು ಪ್ರದರ್ಶನ ಪಂದ್ಯದಲ್ಲಿ ಆಡಲಿವೆ.

Advertisement

ಉದ್ಯಾನಗರಿಯ ರೈಲ್‌ ವೀಲ್‌ ಫ್ಯಾಕ್ಟರಿ ಕ್ರೀಡಾಂಗಣದಲ್ಲಿ ಪಂದ್ಯಗಳು ಸಾಗಲಿವೆ. ಬಳ್ಳಾರಿ ಟಸ್ಕರ್ಸ್‌ ತಂಡವನ್ನು ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮುನ್ನಡೆಸಲಿದ್ದಾರೆ. ಬೆಳಗಾವಿ ಪ್ಯಾಂಥರ್ಸ್‌ ತಂಡಕ್ಕೆ ದಿವ್ಯಾ ಹಾಗೂ ಶಿವಮೊಗ್ಗ ಲಯನ್ಸ್‌ ಗೆ ರಕ್ಷಿತಾ ಕೃಷ್ಣಪ್ಪ ನಾಯಕಿಯಾಗಿದ್ದಾರೆ. ಆ. 18, 19, 20, 22 ಮತ್ತು 23ರಂದು ಪಂದ್ಯಗಳು ನಡೆಯಲಿವೆ.

ಉದ್ಘಾಟನೆಗೆ ತಾರೆಯರ ಮೇಳ
ಕೆಪಿಎಲ್‌ ಉದ್ಘಾಟನೆ ಸಂಜೆ 5 ಗಂಟೆಗೆ ನೆರವೇರಲಿದೆ. ಗಾಯಕ ಚಂದನ್‌ ಶೆಟ್ಟಿ, ನಟಿ ರಾಗಿಣಿ ದ್ವಿವೇದಿ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ. ಮಾಜಿ ಕ್ರಿಕೆಟಿಗ ಜಿ.ಆರ್‌. ವಿಶ್ವನಾಥ್‌ ಸೇರಿದಂತೆ ಕೆಎಸ್‌ಸಿಎ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಕೂಟಕ್ಕೆ ಚಾಲನೆ ಸಿಗಲಿದೆ.

ಕೆಪಿಎಲ್‌: ಬೆಂಗಳೂರು ಪಂದ್ಯಗಳ ವೇಳಾಪಟ್ಟಿ
ದಿನಾಂಕ ಪಂದ್ಯ ಆರಂಭ
ಆ. 16 ಬೆಂಗಳೂರು-ಮೈಸೂರು 7.00
ಆ. 17 ಹುಬ್ಬಳ್ಳಿ-ಶಿವಮೊಗ್ಗ 3.00
ಆ. 17 ಬಳ್ಳಾರಿ-ಬೆಳಗಾವಿ 7.00
ಆ. 18 ಮೈಸೂರು-ಶಿವಮೊಗ್ಗ 3.00
ಆ. 18 ಬೆಂಗಳೂರು-ಬಿಜಾಪುರ 7.00
ಆ. 19 ಹುಬ್ಬಳ್ಳಿ-ಬಳ್ಳಾರಿ 3.00
ಆ. 19 ಮೈಸೂರು-ಬೆಳಗಾವಿ 7.00
ಆ. 20 ಬಳ್ಳಾರಿ-ಬಿಜಾಪುರ 3.00
ಆ. 20 ಬೆಂಗಳೂರು-ಶಿವಮೊಗ್ಗ 7.00
ಆ. 21 ಬಿಜಾಪುರ-ಮೈಸೂರು 3.00
ಆ. 21 ಹುಬ್ಬಳ್ಳಿ-ಬೆಳಗಾವಿ 7.00
ಆ. 22 ಬಳ್ಳಾರಿ-ಬೆಂಗಳೂರು 3.00
ಆ. 22 ಹುಬ್ಬಳ್ಳಿ-ಬಿಜಾಪುರ 7.00
ಆ. 23 ಬೆಳಗಾವಿ-ಬೆಂಗಳೂರು 3.00
ಆ. 23 ಶಿವಮೊಗ್ಗ-ಬಳ್ಳಾರಿ 7.00
 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next