Advertisement

ನಾಳೆ ಎಲ್ಲರೂ ಕಾಯುತ್ತಿರುವ ಮತದಾನ ಹಬ್ಬದ ದಿನ. ಮುಂದಿನ 5 ವರ್ಷಗಳ ಕಾಲ ಕರ್ನಾಟಕದಲ್ಲಿ ಅಧಿಕಾರ ನಡೆಸುವಂಥ ಪಕ್ಷವನ್ನು ಆಯ್ಕೆ ಮಾಡುವ ದಿನ. ಅಷ್ಟೇ ಅಲ್ಲ, ನೀವು ವಾಸಿಸುವ ಕ್ಷೇತ್ರದ ಶಾಸಕರನ್ನು ಆರಿಸಿ, ವಿಧಾನಸಭೆಗೆ ಕಳುಹಿಸುವ ದಿನ. ಇಂಥ ದಿನವನ್ನು ಯಾರೂ ಮಿಸ್‌ ಮಾಡಬಾರದು. ಕಡ್ಡಾಯವಾಗಿ ಮತಕೇಂದ್ರಕ್ಕೆ ಹೋಗಿ ಮತ ಹಾಕಿ ಎಂದು ಹೇಳುತ್ತಿದ್ದಾರೆ ನಾಡಿನ ಧಾರ್ಮಿಕ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು…

Advertisement

ಸೂಕ್ತ ಸರಕಾರ ಬರಲು ನಿಮ್ಮ ಕೊಡುಗೆ ನೀಡಿ

ಮತದಾನದ ಹಕ್ಕು ಬಹಳ ವಿಶೇಷವಾದದ್ದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಿಕ್ಕಿರುವ ಈ ಹಕ್ಕನ್ನು ಚಲಾಯಿಸಬೇಕು. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯೋಗ್ಯ ಮತ್ತು ಪ್ರಬುದ್ಧರನ್ನು ಆಯ್ಕೆ ಮಾಡಿ ಅವರನ್ನು ಬಹುಮತದಿಂದ ಚುನಾಯಿಸಿ ವಿಧಾನಸಭೆಗೆ ತಮ್ಮ ಪ್ರತಿನಿಧಿಯಾಗಿ ಕಳುಹಿಸಬೇಕು. ಇದರಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿ ಮುನ್ನ ಡೆಯಲು ಸಾಧ್ಯ.

ಈ ಬಾರಿ 80 ವರ್ಷ ಮೇಲ್ಪಟ್ಟವರು ಹಾಗೂ ಅಶಕ್ತರೂ ತಮ್ಮ ಹಕ್ಕು ಚಲಾಯಿಸಲು ಅನು ಕೂಲವಾಗುವಂತೆ ಮನೆಯಲ್ಲೇ ಮತದಾನದ ಅವಕಾಶವನ್ನು ಆಯೋಗ ಕಲ್ಪಿಸಿರುವುದು ಅದ್ಭುತ ಪ್ರಯತ್ನವಾಗಿದೆ. ಇದನ್ನು ಆಯೋಜನೆ ಮಾಡಿದ ವರನ್ನು ಅಭಿನಂದಿಸುತ್ತೇನೆ. ಮತದಾನದಿಂದ ತಾಲೂಕು, ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲಿ ಬದಲಾವಣೆ ತರುವ ಕೆಲಸವಾಗಲಿದೆ. ಈ ಮೂಲಕ ಒಂದು ಉತ್ತಮ ಸರಕಾರ ರಚನೆಗೆ ನಮ್ಮ ಪಾಲಿನ ಕೊಡುಗೆ ಕೊಟ್ಟಂತಾಗುತ್ತದೆ. ಜನರು ಯಾವುದೇ ಕಾರಣಕ್ಕೂ ಸಂಕೋಚ ಪಡದೆ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕು. ಇದರಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಭಾವನೆಯನ್ನು ತಾಳದೆ ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಿ ಸೂಕ್ತ ಮತ್ತು ಸಮರ್ಥ ಸರಕಾರ ರಚನೆಯಾಗಲು ನಿಮ್ಮ ಕೊಡುಗೆ ನೀಡಿ.

– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

**

ಮತದಾನ ಪವಿತ್ರ ಕಾರ್ಯ

ಮತದಾನದ ಎಂಬುದು ಕೇವಲ ಅಭ್ಯರ್ಥಿಗಳನ್ನು ಆರಿಸುವ ಯಾಂತ್ರಿಕ ಪ್ರಕ್ರಿಯೆ ಅಲ್ಲ; ಬದಲಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಮ್ಮ ಹಕ್ಕನ್ನು ಚಲಾಯಿಸುವ ಪವಿತ್ರ ಕಾರ್ಯ. ಈ ಭವ್ಯ ದೇಶದ ಪ್ರಜೆಗಳಾಗಿ ವಿಧಾನಸಭೆಯಲ್ಲಿ ನಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ಗಂಭೀರ ಕಾರ್ಯ. ಈ ಸಂದರ್ಭದಲ್ಲಿ ಎಲ್ಲರೂ ತಪ್ಪದೆ ಮತ ಹಾಕಬೇಕು. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಒಳ್ಳೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಭವಿಷ್ಯದ ಸಮೃದ್ಧ ನಾಡನ್ನು ಕಟ್ಟಲು ಮುಂದಾಗಬೇಕು. ನೆನಪಿರಲಿ ಮತದಾನ ಶ್ರೇಷ್ಠ ದಾನಗಳಲ್ಲೊಂದು. ಪ್ರಜ್ಞಾವಂತರಾಗಿ ತಪ್ಪದೇ ಮತ ಚಲಾಯಿಸೋಣ.

– ರೆವರೆಂಡ್‌ ಪೀಟರ್‌ ಮಚಾದೊ, ಆರ್ಚ್‌ ಬಿಶಪ್‌, ಬೆಂಗಳೂರು.

**

ನಾಗರಿಕನ ಜವಾಬ್ದಾರಿ

ಚುನಾವಣೆಗಳಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವದ ಮಹತ್ವವನ್ನು ಮನವರಿಕೆ ಮಾಡಿಕೊಂಡ ಪ್ರತಿಯೊಬ್ಬ ಅರ್ಹ ಮತದಾರರನು ತನ್ನ ಹಕ್ಕನ್ನು ಚಲಾಯಿಸಬೇಕು. ಮತ ಹಾಕುವಾಗ ಜಾತಿ, ಧರ್ಮ, ಭಾಷೆಯ ಪ್ರಭಾವಕ್ಕೆ ಅಥವಾ ಯಾವುದೇ ತರಹದ ಆಮಿಷಗಳಿಗೆ ಒಳಗಾಗಬಾರದು. ಪ್ರತಿಯೊಬ್ಬರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಹಿನ್ನೆಲೆಯನ್ನು ಅರಿತು ಕೊಂಡು ಆ ಅಭ್ಯರ್ಥಿಯಿಂದ ಕ್ಷೇತ್ರ ಮತ್ತು ಸಮಾಜಕ್ಕೆ ಯಾವ ರೀತಿ ಒಳಿತು ಆಗುತ್ತದೆ ಎಂದು ಗಮನಿಸಿ ಮತ ಹಾಕಬೇಕು.

– ನ್ಯಾ| ಎನ್‌. ಸಂತೋಷ ಹೆಗ್ಡೆ, ನಿವೃತ್ತ ಲೋಕಾಯುಕ್ತ.

**

ಒತ್ತಡಗಳಿಗೆ ಒಳಗಾಗದೇ ಮತದಾನ ಮಾಡಿ

ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಲಾಗುತ್ತದೆ. ನಿಜ ಅರ್ಥದಲ್ಲಿ ಮತದಾನದ ದಿನ ಪ್ರತಿಯೊಬ್ಬ ನಾಗರಿಕನ “ಸ್ವಾತಂತ್ರ್ಯದ ದಿನ’ ವಾಗಿದೆ. ಯಾವುದೇ ಬಲವಂತ, ಒತ್ತಡ, ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬ ಪ್ರಜೆ ತನ್ನ ಸಂಪೂರ್ಣ ಸ್ವತಂತ್ರ ನಿಲುವಿನೊಂದಿಗೆ ಮುಂದಿನ 5 ವರ್ಷಗಳಿಗೆ ನಮ್ಮನ್ನು ಆಳುವವರನ್ನು ಆಯ್ಕೆ ಮಾಡಬೇಕು. ನಮ್ಮ ಆಯ್ಕೆ ನಮ್ಮನ್ನು ಮುಂದಿನ ಐದು ವರ್ಷ ಗುಲಾಮಗರಿ, ದಾಸ್ಯತನಕ್ಕೆ ಒಳಪಡಿಸುವಂಥ‌ದ್ದಾಗಬಾರದು. ಅತ್ಯಂತ ಜವಾಬ್ದಾರಿ ಮತ್ತು ಕಾಳಜಿಯಿಂದ ಮತ ಚಲಾಯಿಸಬೇಕು. ಮತದಾನ ಸಾಮಾಜಿಕ ಮತ್ತು ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಸಾಂವಿಧಾನಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಪರತೆ ಮತ್ತು ಮಾನವೀಯತೆಗೆ ಆದ್ಯತೆ ನೀಡಿ ಸತ್ಯವಂತರು, ಚಾರಿತ್ರ್ಯವಂತರನ್ನು ಆಯ್ಕೆ ಮಾಡಿ. ಪ್ರತಿಯೊಂದು ಮತವೂ ಅಮೂಲ್ಯವಾದದ್ದು ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು.

– ಡಾ| ಮೊಹಮ್ಮದ್‌ ಸಾದ್‌ ಬೆಲಗಾಮಿ, ರಾಜ್ಯಾಧ್ಯಕ್ಷರು, ಜಮಾತೆ ಇಸ್ಲಾಮಿ

**

ಸೋಮಾರಿಗಳಾಗದೇ ಮತದಾನ ಮಾಡಬೇಕು

ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸಬೇಕು, ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯವೂ ಆಗಿದೆ. ಯಾವುದೇ ಕಾರಣಕ್ಕೂ ಜನಪ್ರತಿ ನಿಧಿಗಳನ್ನು ಆಯ್ಕೆ ಮಾಡುವಾಗ ಮತದಾರರ ಸೋಮಾರಿಗಳಾ ಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹ ರಿಸುವ, ಅಗತ್ಯಗಳನ್ನು ಪೂರೈಸುವ ವ್ಯಕ್ತಿಯನ್ನು ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಚುನಾವಣೆ ವೇಳೆ ಪ್ರಜೆಗಳು ಸೋಮಾರಿಗ ಳಾಗಬಾರದು. ಜವಾಬ್ದಾರಿ ಕಳೆದುಕೊಂಡರೆ ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುತ್ತೇವೆ. ಹೀಗಾಗಿ ಮನೆಯಲ್ಲಿ ಕುಳಿತು ಕೊಳ್ಳದೇ  ಮನೆಯಿಂದ ಹೊರಬಂದು ಮತ ಚಲಾಯಿಸಬೇಕು.

– ಡಾ| ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

**

ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಿ

ಮತದಾನ ಭಾರತ ಸಂವಿಧಾನ ನೀಡಿರುವ ಅತ್ಯಂತ ದೊಡ್ಡ ಅವಕಾಶ. ಬಾಬಾ ಸಾಹೇಬರು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅವಕಾಶ ಕಲ್ಪಿಸಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ದೊಡ್ಡ ಹಬ್ಬ ಇದಾಗಿದೆ. ಇಡೀ ರಾಜ್ಯ ಇದನ್ನು ಆಚರಿಸುವಾಗ ಯಾರೊಬ್ಬರೂ ದೂರ ಉಳಿಯಬಾರದು. ಮನೆಯಲ್ಲಿ ಹಬ್ಬ ಆಚರಿಸುವಾಗ ದೂರದಲ್ಲಿರುವ ಬಂಧುಗಳು ಹೇಗೆ ಬಂದು ಭಾಗವಹಿಸುತ್ತಾರೋ ಅದೇ ರೀತಿಯಲ್ಲಿ ಮನೆಯಿಂದ ದೂರದ ಊರುಗಳಲ್ಲಿ ದ್ದರೂ ಬಂದು ಮನೆಯವರೊಂದಿಗೆ ಸೇರಿಕೊಂಡು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ದೇಶದ ಸತøಜೆಗ ಳಾಗಬೇಕು. ಎಂಥದ್ದೇ ಸಂದರ್ಭವಿದ್ದರೂ ಮತದಾನದಿಂದ ದೂರ ಉಳಿದು ಸಂವಿಧಾನ ಕೊಟ್ಟಿರುವ ಅವಕಾಶದಿಂದ ವಂಚಿತರಾಗಬೇಡಿ.

– ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ

**

ಮತದಾನ ಕ್ಷುಲ್ಲಕ ಎಂದು ಭಾವಿಸದಿರಿ

ಬಾಬಾ ಸಾಹೇಬ್‌ ಅಂಬೇಡ್ಕರರು ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಮುತುವರ್ಜಿ ವಹಿಸಿ ಒಂದು ಮಾತು ಹೇಳಿದ್ದಾರೆ. ಹಿಂದೆ ರಾಣಿಯ ಹೊಟ್ಟೆಯಲ್ಲಿ ರಾಜ ಹುಟ್ಟುತ್ತಿದ್ದ. ಆದರೆ ಈಗ ರಾಜರು ಮತ ಪೆಟ್ಟಿಗೆಯಲ್ಲಿ ಹುಟ್ಟುತ್ತಾರೆ. ರಾಜ ನಾಡಿನ ಪ್ರತ್ಯಕ್ಷ ದೇವರಿದ್ದಂತೆ. ನಮ್ಮನ್ನೆಲ್ಲ ರಕ್ಷಣೆ ಮಾಡುವ ಅಭಿವೃದ್ಧಿ ಮಾಡುವ ಜವಾಬ್ದಾರಿ ಅವರ ಮೇಲಿರುತ್ತದೆ. ನಾವು ಮಾಡುವ ಮತದಾನ ಕ್ಷುಲ್ಲಕ ಅಲ್ಲ. ನಮ್ಮ ಮತಕ್ಕೆ ದೇಶದ ನಾಯಕನನ್ನು ಕೊಡುವ ಮಹಾನ್‌ ಶಕ್ತಿಯಿದೆ. ಪ್ರಜ್ಞಾವಂತರು ಎಲ್ಲ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಕ್ಕಿಂತ, ಇರುವವರಲ್ಲಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಈ ಮೂಲಕ ಭಾರತವನ್ನು ಜಗತ್ತು ನೋಡುವಂತೆ ನಿರ್ಮಾಣ ಮಾಡುವ ಮೊದಲ ಮೆಟ್ಟಿಲು ಮತದಾನ. ಉತ್ತಮ ಜನನಾಯಕನನ್ನು ಆಯ್ಕೆ ಮಾಡಿ ಭಾರತ ಜಗತ್ತು ನೋಡುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಅರ್ಹ ಮತದಾರ ಪ್ರಭುಗಳು ನಿಮ್ಮ ಒಂದು ಮತದಾನದಿಂದ ಭಾರತದ ಭವ್ಯ ಭವಿಷ್ಯ ನಿರ್ಮಾಣ ಮಾಡಬಹುದು. ನಾವೆಲ್ಲರೂ ಬ್ರಹ್ಮನ ರೀತಿಯಲ್ಲಿ ಮತದಾನ ಮಾಡಿ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ತರುವ ಕೆಲಸ ಮಾಡೋಣ.

– ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ, ಚಿತ್ರದುರ್ಗ

**

ಮತದಾರರಿಗಿದೆ ಉತ್ತಮ ನಾಯಕನ ಆಯ್ಕೆ ಶಕ್ತಿ

ಮತದಾನ ಮಾಡುವುದು ನಿಜವಾದ ದೇಶಪ್ರೇಮ. ಮತದಾನದ ಅರ್ಹತೆಯುಳ್ಳ ಎಲ್ಲ  ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನವನ್ನು ಯಾವುದೇ ಆಮಿಷಕ್ಕೊಳಗಾಗಿ ಮಾಡಬಾರದು. ಮತವನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು. ಮತದಾನ ಎಂಬುದು ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ಇರುವ ಬಹುದೊಡ್ಡ ಜವಾಬ್ದಾರಿ ಹಾಗೂ ಹಕ್ಕಾಗಿದೆ. ಅದನ್ನು ಸೂಕ್ತ ವ್ಯಕ್ತಿಗೆ ದಾನ ಮಾಡಬೇಕು. ಬಡವ, ದೀನ ದಲಿತರ ಬಗ್ಗೆ ಚಿಂತನೆ, ಕಾಳಜಿ ಹೊಂದಿದವರನ್ನು ಬೆಂಬಲಿಸಬೇಕು. ಪ್ರಜಾಪ್ರಭುತ್ವದ ನಿಜವಾದ ಅರ್ಥ ಕಾಪಾಡಲು ಉತ್ತಮ ದೃಷ್ಟಿಕೋನ ಮತ್ತು ಸಿದ್ಧಾಂತ ಹೊಂದಿರುವ ನಾಯಕರನ್ನು ಆಯ್ಕೆ ಮಾಡಬೇಕು. ಒಳ್ಳೆಯ ಹಾಗೂ ನಿಜವಾದ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ಮತದಾರರ ಕೈಯಲ್ಲೇ ಇದೆ.

– ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ, ಕಾಗಿನೆಲೆ

**

ಮತದಾನ ಮಾಡದಿದ್ದರೆ ಹಕ್ಕು ಬಿಟ್ಟು ಕೊಟ್ಟಂತೆ

ಮತದಾನ ಎಂಬುದು ಮತ ಮತ್ತು ದಾನ ಎನ್ನುವ ಎರಡು ಪದಗಳನ್ನು ಒಳಗೊಂಡಿದೆ. ದಾನ ಎನ್ನುವುದು ಯೋಗ್ಯರಿಗೆ ನೀಡುವಂತಹದು. ಆಮಿಷಕ್ಕೆ ಬಿದ್ದು ಅದನ್ನು ಮಾರಿಕೊಳ್ಳಬಾರದು. ಯಾರಿಗೆ ದಾನ ಮಾಡುತ್ತಿದ್ದೇವೆ ಮತ್ತು ಏಕೆ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅರಿವಿರಬೇಕು. ಆ ದಾನಕ್ಕೆ ಅವರು ಯೋಗ್ಯರಾಗಿದ್ದಾರಾ ಎಂದು ಯೋಚನೆ ಮಾಡಬೇಕು. ಅಪಾತ್ರರಿಗೆ ಯಾವತ್ತೂ ದಾನ ಮಾಡಬಾರದೆನ್ನುವ ವಿಚಾರ ನಮ್ಮಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮತದಾನ ಮಾಡುವ ಅವಕಾಶ ಐದು ವರ್ಷಗಳಿಗೆ ಒಮ್ಮೆ  ಸಿಗುವಂತಹುದು. ಅಂತಹ ಅವಕಾಶವನ್ನು ಕಳೆದುಕೊಳ್ಳಬಾರದು. ಅದರ ಸದುಪಯೋಗ ಪಡೆಯಬೇಕು. ಮತದಾನ ಮಾಡದೇ ಬಿಟ್ಟರೆ ನಿಮ್ಮ ಹಕ್ಕು ಬಿಟ್ಟುಕೊಟ್ಟ ಹಾಗೆ. ಅನಂತರ ಅದರ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಳ್ಳುತ್ತೀರಿ. ಮತದಾನ ಮಾಡಿ ನಾಗರಿಕ ಹಕ್ಕು ಚಲಾಯಿಸಿ.

– ಜಗದ್ಗುರು ಶ್ರಿ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ

**

ಪ್ರಚಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ

ಮತದಾನ ಮಾಡುವುದು  ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮತದಾನ ಮಾಡುವ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಮೇ.10 ರಂದು ತಪ್ಪದೇ ಮತದಾನ ಮಾಡಿ. 18 ವರ್ಷ ತುಂಬಿರುವ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡುವ ಅರ್ಹತೆ ಹೊಂದಿದ್ದು, ಸಂವಿಧಾನದ ಆಶಯದಡಿಯಲ್ಲಿ ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗ ಬೇಕಾದರೆ ಯಾವುದೋ ಆಸೆ, ಆಮಿಷಗಳಿಗೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳದೇ ಶುದ್ಧವಾದ ಮನಸ್ಸು ಇಟ್ಟುಕೊಂಡು, ಪಕ್ಷ,  ಜಾತಿ, ಮತ, ಧರ್ಮ ನೋಡದೇ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಆಯೋಗದ ನಿಯಮಾನುಸಾರ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಬೇಕು. ಚುನಾವಣ ಆಯೋಗ ಹಲವಾರು ಬದಲಾವಣೆ ತಂದಿದೆ 80 ವರ್ಷ ಮೇಲ್ಪಟ್ಟವರಿಗೆ ವಿಶೇಷ ಚೇತನರಿಗೆ ಮನೆಯಲ್ಲಿಯೇ ಮತಚಲಾಯಿಸುವ ಅವಕಾಶ ಕಲ್ಪಿಸಿದೆ ಇನ್ನು ಹಲವಾರು ಬದಲಾವಣೆ ಮಾಡಿದೆ ಇಂತಹ ಸಂದರ್ಭದಲ್ಲಿ ನಾಡಿನ ಪ್ರತಿಯೊಬ್ಬ ಮತದಾರರೂ ಮತದಾನದಿಂದ ಹೊರಗುಳಿಯದೇ ತಪ್ಪದೇ ಮತದಾನ ಮಾಡಿ ಮತದಾನದ ಘನತೆ ಗೌರವವನ್ನು ಎತ್ತಿಹಿಡಿಯಬೇಕು.

– ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು

**

ಮತದಾನ ಬಹುಮುಖ್ಯ ಜವಾಬ್ದಾರಿ

ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರಿಕರ ಬಹುಮುಖ್ಯವಾದ ಜವಾಬ್ದಾರಿ ಹಾಗೂ ಹಕ್ಕಾಗಿದೆ. ಇದನ್ನು ಪ್ರತಿಯೊಬ್ಬರೂ ತಪ್ಪದೇ ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಇರುವ ಬಹುದೊಡ್ಡ ಹಕ್ಕು ಇದಾಗಿದ್ದು ಮತವನ್ನು ಸಾಕಷ್ಟು ಯೋಚಿಸಿ, ಯೋಗ್ಯ ವ್ಯಕ್ತಿಗೆ ಹಾಕಬೇಕು. ಯೋಗ್ಯ ನಾಯಕನನ್ನು ಆರಿಸುವ ಜವಾಬ್ದಾರಿ ಪ್ರಜೆಗಳ ಕೈಯಲ್ಲಿ ಇರುವುದೇ ಪ್ರಜಾಪ್ರಭುತ್ವದ ವಿಶೇಷವಾಗಿದೆ. ಮತವನ್ನು ಯಾವುದೇ ಆಮಿಷಕ್ಕೊಳಗಾಗದೇ ಯೋಗ್ಯ ವ್ಯಕ್ತಿಗೆ ಚಲಾಯಿಸಬೇಕು. ಮತದಾನದಲ್ಲಿ  ಪ್ರತಿಯೊಬ್ಬರೂ ಭಾಗವಹಿಸಿದಾಗ ಮಾತ್ರ ಇದೊಂದು ಪ್ರಜಾಪ್ರಭುತ್ವದ ಹಬ್ಬವಾಗುತ್ತದೆ.

– ಶ್ರೀ ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ,ಹರಿಹರ

**

ಮತದಾನ ಮಾಡದಿರುವುದು ನಾಡಿಗೆ ದ್ರೋಹ

ಮತದಾನ ನಮ್ಮ ಹಕ್ಕು ಮಾತ್ರವಲ್ಲ; ಜವಾಬ್ದಾರಿ. ಇದರಿಂದ ನುಣುಚಿಕೊಳ್ಳುವುದೆಂದರೆ ನನ್ನ ಪ್ರಕಾರ ದೇಶಕ್ಕೆ ಅಥವಾ ನಾಡಿಗೆ ಮಾಡುವ ದ್ರೋಹ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಸೂಕ್ತ ವ್ಯಕ್ತಿಗೆ ಮತ ಚಲಾಯಿಸಬೇಕು.  ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ 112 ವರ್ಷದವಳಾದ ನಾನು ಬುಧವಾರ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ಲಿಗೆ ತೆರಳಿ ಮತ ಚಲಾಯಿಸುತ್ತೇನೆ. ನಾನು ಈಗ ಬೇಲೂರಿನಲ್ಲಿದ್ದೇನೆ. ಅಂದರೆ ಮತಗಟ್ಟೆಯಿಂದ ಸುಮಾರು 150 ಕಿ.ಮೀ. ದೂರದಲ್ಲಿದ್ದೇನೆ. ವಯಸ್ಸೂ ಆಗಿದೆ. ಹಾಗಂತ ನನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತದೆಯೇ? ಖಂಡಿತ ಇಲ್ಲ.  ಹಾಗೆಯೇ ನಾಡಿನ ಪ್ರತಿಯೊಬ್ಬ ಪ್ರಜೆ ಕೂಡ ಹಕ್ಕು ಚಲಾಯಿಸಬೇಕು. ವಿಶೇಷವಾಗಿ ಯುವಕರಿಗೆ ನಾನು ಹೇಳುವುದಿಷ್ಟೇ- ನಾನೊಬ್ಬ ಅನಕ್ಷರಸ್ಥೆ, ಶಾಲೆಗೆ ಹೋದವಳೂ ಅಲ್ಲ. ಆದರೂ ನನಗೆ ಗೊತ್ತು ಮತದಾನ ನನ್ನ ಹಕ್ಕು ಎನ್ನುವುದು. ಈಗ ಬಹುತೇಕ ಎಲ್ಲರೂ ಸುಶಿಕ್ಷಿತರಿದ್ದಾರೆ. ನನಗಿಂತ ನಿಮಗೆ ಈ ಜವಾಬ್ದಾರಿಯ ಅರಿವು ಇದೆ ಎಂಬುದು ನನ್ನ ಭಾವನೆ. ದಯವಿಟ್ಟು ಎಲ್ಲರೂ ಅಂದು ಬಿಡುವು ಮಾಡಿಕೊಂಡು ಮತ ಹಾಕಬೇಕು.

– ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪುರಸ್ಕೃತರು

**

ಕಡ್ಡಾಯವಾಗಿ ಮತ ಚಲಾಯಿಸಿ

ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕತ್ವ ಗುಣವುಳ್ಳವರನ್ನು ಆಯ್ಕೆ ಮಾಡಲು ಇರುವ ಒಂದು ಅವಕಾಶವೆಂದರೆ ಮತದಾನ. ಆದರೆ ನಗರಗಳಲ್ಲಿ ಮತದಾರರ ಸಂಖ್ಯೆ ಶೇಕಡಾವಾರು ಕಡಿಮೆಯಾಗುತ್ತಿರುವುದು ಪ್ರಜಾಪ್ರಭುತ್ವ ಹಕ್ಕುಗಳ ಬಗ್ಗೆ ನಮಗಿರುವ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ. ಆದ್ದರಿಂದ ಅಮೂಲ್ಯವಾದ ಹಕ್ಕನ್ನು ನಿರ್ಲಕ್ಷಿಸುವ ಬದಲು, ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಕಡ್ಡಾಯ ಮತ ಚಲಾಯಿಸುವ ಮೂಲಕ ಉತ್ತಮ ನಾಯಕನನ್ನು ಆಯ್ಕೆಮಾಡೋಣ.

– ಡಾ| ಸುದರ್ಶನ್‌ ಬಲ್ಲಾಳ್‌, ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥ

**

ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ

ಮತದಾನ ಮಾಡುವುದು ನಮ್ಮ ಜವಾಬ್ದಾರಿ. ಯಾರೂ ಕೂಡ ಆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಬೇಡಿ. ಮತದಾನ ಮಾಡಿದಾಗಲೇ ವ್ಯವಸ್ಥೆಯ ಬಗ್ಗೆ ನಮಗೂ ಮಾತನಾಡುವ ನೈತಿಕ ಹಕ್ಕಿರುತ್ತದೆ. ಅದನ್ನು ಬಿಟ್ಟು ವ್ಯವಸ್ಥೆಯನ್ನು ದೂಷಿಸುತ್ತ, ಅದರ ಬಗ್ಗೆ ಮಾತನಾಡುತ್ತ, ನಮ್ಮ ಮತದಾನದ ಜವಾಬ್ದಾರಿಯನ್ನು ಮರೆತರೆ ಅದರಿಂದ ಏನೂ ಪ್ರಯೋಜನವಾಗದು. ಇನ್ನು ನನ್ನ ಪ್ರಕಾರ ಯಾವುದೇ ಪಕ್ಷಕ್ಕಿಂತ ಸ್ಥಳೀಯವಾಗಿ ನಮ್ಮ ಕ್ಷೇತ್ರದ ಅಭ್ಯರ್ಥಿ ಹೇಗಿದ್ದಾರೆ? ಅವರಿಂದ ನಮ್ಮ ಕ್ಷೇತ್ರಕ್ಕೆ ಏನು ಪ್ರಯೋಜನವಾಗಬಹುದು? ಎಂಬುದನ್ನು ಯೋಚಿಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಉತ್ತಮ.

– ರಕ್ಷಿತ್‌ ಶೆಟ್ಟಿ, ನಟ, ನಿರ್ಮಾಪಕ, ನಿರ್ದೇಶಕ 

**

ಒಂದು ಮತವೂ ಅಮೂಲ್ಯ

ಎಲ್ಲರೂ ಮತದಾನ ಮಾಡಲೇಬೇಕು. ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಬೇಕು. ಪ್ರಜಾಪ್ರಭುತ್ವದಲ್ಲಿ ನಮಗೆ ಕಣ್ಣಿಗೆ ಕಾಣದಿರುವ ಒಂದು ದೊಡ್ಡ ಶಕ್ತಿ ಅಂದ್ರೆ ಅದು ನಮ್ಮ ಮತ. ನಮ್ಮ ಪ್ರತಿಯೊಂದು ಮತಕ್ಕೂ ಒಂದು ಅದೃಶ್ಯ ಶಕ್ತಿಯಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ನಮ್ಮ ಒಂದು ಮತದಿಂದ ಚುನಾವಣೆಯಲ್ಲೂ, ರಾಜಕೀಯ ವ್ಯವಸ್ಥೆಯಲ್ಲೋ ಏನು ಮಹಾ ಬದಲಾವಣೆಯಾಗುತ್ತದೆ ಎಂದು ಯಾರೂ ಹಗುರವಾಗಿ ಪರಿಗಣಿಸಬಾರದು. ನಮಗೇ ಗೊತ್ತಿಲ್ಲದಂತೆ, ನಮ್ಮ ಒಂದು ಮತ ದೇಶದ ಬೆಳವಣಿಗೆಗೆ, ಬದಲಾವಣೆಗೆ ಕಾರಣವಾಗಿರುತ್ತದೆ. ದೇಶದ ಭವಿಷ್ಯವನ್ನು ಬದಲಾಯಿಸುತ್ತದೆ. ಪ್ರತೀ ಕಟ್ಟಡಕ್ಕೂ ಒಂದೊಂದು ಇಟ್ಟಿಗೆ ಎಷ್ಟು ಮುಖ್ಯವೋ, ಹಾಗೆಯೇ ಪ್ರಜಾಪ್ರಭುತ್ವ ಎಂಬ ಕಟ್ಟಡಕ್ಕೆ ನಮ್ಮ ಒಂದೊಂದು ಮತವೂ ಅಷ್ಟೇ ಮುಖ್ಯ. ನೀರಿನ ಒಂದೊಂದು ಹನಿ ಸೇರಿದಾಗಲೇ ಸಾಗರವಾಗುತ್ತದೆ. ಒಂದೊಂದು ಮತ ಸೇರಿದಾಗಲೇ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾ ಣವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿ ಬೆಳೆಯ ಬೇಕೆಂದರೆ, ಅದರಲ್ಲಿ ಪ್ರಜೆಗಳಾದ ನಮ್ಮ ಕರ್ತವ್ಯ ಪ್ರಜ್ಞೆ, ಪಾಲ್ಗೊಳ್ಳುವಿಕೆ ಎರಡೂ ಇರಬೇಕಾಗುತ್ತದೆ. ನಮ್ಮ ಕರ್ತವ್ಯವನ್ನು ನಿಭಾಯಿಸಿದಾಗ ಮಾತ್ರ, ನಮ್ಮ ಹಕ್ಕನ್ನು ಕೇಳಲು ನಮಗೆ ನೈತಿಕತೆ ಇರುತ್ತದೆ.

– ರಮೇಶ್‌ ಅರವಿಂದ್‌, ನಟ

**

ಮತದಾನವನ್ನು ಆಚರಿಸೋಣ…

ಒಳ್ಳೆಯ ನಾಯಕನಿಲ್ಲ, ಒಳ್ಳೆಯ ಸರಕಾರವಿಲ್ಲ ಎಂದು ಅನೇಕರು ದೂರುತ್ತಾರೆ. ಆದರೆ ಸರಕಾರವನ್ನು, ಒಳ್ಳೆಯ ಜನನಾಯಕನನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಅನೇಕರು ಮತದಾನ ಮಾಡದೇ ದೂರ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ನಾವು ಚಲಾಯಿಸಿದಾಗ ನಮಗೂ ಧ್ವನಿ ಎತ್ತಲು ಹಕ್ಕಿರುತ್ತದೆ. ಸಾಮಾನ್ಯವಾಗಿ ಸುಮಾರು ಕ್ಷೇತ್ರಗಳಲ್ಲಿ ಶೇ 50-60 ಅಷ್ಟೇ ಮತದಾನವಾಗುತ್ತದೆ. ಶೇ 40ರಷ್ಟು ಜನ ಓಟು ಮಾಡೋಕೆ ಹೋಗುವುದಿಲ್ಲ. ಇದು ಒಟ್ಟಾರೆ ಫ‌ಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟು ಮಾತ್ರವಲ್ಲದೆ ಮತದಾನದಿಂದ ದೂರವುಳಿಯುವುದರಿಂದ ಪರರ ಆಯ್ಕೆಯನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನಾವು ಓಟು ಮಾಡಬೇಕಾಗುತ್ತದೆ. ಆ ದಿನ ಈ ದಿನ ಎನ್ನುತ್ತಾ ಎಲ್ಲ ದಿನಗಳನ್ನು ಆಚರಣೆ ಮಾಡುತ್ತೇವೆೆ. ಹೀಗಿರುವಾಗ ಒಂದು ದಿನ ಮತದಾನಕ್ಕಾಗಿ ಸಮಯ ಮಾಡಿಕೊಂಡು ಹೋಗಿ ಮತ ಚಲಾಯಿಸುವುದು ಒಳ್ಳೆಯದು. ಯಾವತ್ತಿಗೂ ಬಹುಮತಗಳು ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಪ ಮತಗಳಾದಾಗ, ವಿಧಿ ಇಲ್ಲದೇ ಒಪ್ಪಿಕೊಳ್ಳಬೇಕು. ಅನಂತರ ಸೋಶಿಯಲ್‌ ಮೀಡಿಯಾದಲ್ಲಿ ಬೈದುಕೊಂಡು ತಿರುಗುವ ಬದಲು ಪ್ರತಿಯೊಬ್ಬರು ಮತ ಚಲಾಯಿಸುವುದು ಒಳ್ಳೆಯದು.

– ರಿಷಭ್‌ ಶೆಟ್ಟಿ, ನಟ, ನಿರ್ದೇಶಕ, ನಿರ್ಮಾಪಕ

**

ಮತದಾನ ನಮ್ಮೆಲ್ಲರ ಕರ್ತವ್ಯ

ಮತದಾನ ನಮ್ಮೆಲ್ಲರ ಹಕ್ಕು . ಹೌದು ಹಕ್ಕಿಗಿಂತ ಜಾಸ್ತಿ ಅದು ನಮ್ಮ ಕರ್ತವ್ಯ. ಕರ್ತವ್ಯ ಪಾಲನೆ ಮಾಡಬೇಕು. ಇಂದು ಮನೆಯಲ್ಲಿ  ಕೂತು ಬೆಂಗಳೂರು ಹಾಗಾಗಿದೆ ಹೀಗಾಗಿದೆ ಅದು ಸರಿಯಿಲ್ಲ, ಇದು ಸರಿಯಿಲ್ಲ ಅನ್ನುವವರು ಮೊದಲು ಮತದಾನ ಮಾಡಬೇಕು.

– ಭಾವನಾ ರಾವ್‌, ನಟಿ

**

ಉತ್ತಮರ‌ನ್ನು ಆರಿಸುವುದು ನಮ್ಮ ಜವಾಬ್ದಾರಿ

ನಮ್ಮ  ಪ್ರತಿನಿಧಿಗಳ ಹತ್ತಿರ ಯಾಕೆ ಕೆಲಸ ಆಗಿಲ್ಲ  ಎಂದು ಪ್ರಶ್ನೆ ಮಾಡುವ ಹಕ್ಕು ಉಳಿಯಬೇಕೆಂದರೆ ಮೊದಲು ಮತದಾನ ಮಾಡಬೇಕು. ಪ್ರಶ್ನೆ ಮಾಡುವ ಮೊದಲು, ಬೆಟ್ಟು ಮಾಡುವ ಮೊದಲು, ನಮ್ಮ ಕೆಲಸ ಸರಿಯಾಗಿ ಮಾಡೋಣ. ಎಲ್ಲರೂ ತಪ್ಪದೇ ಮತದಾನ ಮಾಡಿ.

– ಅರ್ಚನಾ ಜೋಯಿಸ್‌, ನಟಿ

**

ಕರ್ತವ್ಯ ಮರೆಯಬೇಡಿ

ಪ್ರತೀ ಬಾರಿಯೂ ಚುನಾವಣೆ ಬಂದಾಗ ತಪ್ಪದೇ ಮತದಾನ ಮಾಡಿ ಎಂದು ಬೇರೆಯವರು ನಮಗೆ ನೆನಪಿಸಿ ಹೇಳಬೇಕಾ? ಇದು ನಿಜಕ್ಕೂ ಬೇಸರದ ಸಂಗತಿ. ಪಕ್ಷ ಯಾವುದೇ ಇರಲಿ, ತಪ್ಪದೇ ಮತದಾನ ಮಾಡಿ ನಮ್ಮ ಇಷ್ಟದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಉತ್ತಮ ಪ್ರಜೆಗಳು ಎನಿಸಿಕೊಳ್ಳೋಣ. ನಾನಂತೂ ಇಲ್ಲಿಯವರೆಗೆ ಒಮ್ಮೆಯೂ ಮತದಾನ ಮಾಡುವ ಅವಕಾಶ ತಪ್ಪಿಸಿಕೊಂಡಿಲ್ಲ.

– ನಿಮಿಕಾ ರತ್ನಾಕರ್‌, ನಟಿ

**

ನಿಮ್ಮ ಮತದಿಂದಲೇ ಎಲ್ಲ ನಿರ್ಧಾರ

ನನ್ನ  ಕಾಲೇಜು ದಿನಗಳಿಂದಲೂ ನೋಡಿದಿನಿ. ಎಷ್ಟೋ ಮಂದಿ  ಓಟರ್‌ ಐಡಿ ಮಾಡಿಸಿಕೊಳ್ಳುತ್ತಾರೆ. ಆದರೆ ಯಾರು ಓಟು ಮಾಡೋಲ್ಲ. ಓಟರ್‌ ಐಡಿ ಮಾಡಿಸಿ ಇಟ್ಟರೆ ಪ್ರಯೋಜನವಿಲ್ಲ. ಓಟು ಮಾಡಬೇಕು. ಮುಂದಿನ ಐದು ವರ್ಷಕ್ಕೆ ಏನೆಲ್ಲಾ ಅಭಿವೃದ್ಧಿ ಆಗಬೇಕು, ನಮ್ಮಲ್ಲಿ ಇನ್ನು ಹೆಚ್ಚಿನ ಕಾರ್ಯಗಳು ಆಗಬೇಕು ಎನ್ನುವುದು ನಿರ್ಧರಿತವಾಗೋದು ನಿಮ್ಮ ಮತಗಳಿಂದಲೇ. ಓಟು ಮಾಡೋರು ಕನ್‌ಫ್ಯೂಸ್ ಆಗದೇ ಸರಿಯಾದ ನಿರ್ಧಾರ ತೆಗೆದುಕೊ ಳ್ಳಬೇಕು. ಸರಕಾರಕ್ಕೆ  ಪ್ರಶ್ನೆ ಮಾಡುವ ಹಕ್ಕು ನಮಗೆ ಬೇಕು ಅಂದರೆ ಮತ ಹಾಕಿ.

– ರಚನಾ ಇಂದರ್‌, ನಟಿ

**

ಆಮಿಷಕ್ಕೆ ಬಲಿಯಾಗಬೇಡಿ

ಹನಿ ಹನಿ ಕೂಡಿದರೆ ಹಳ್ಳ ಅನ್ನುವ ಮಾತಿದೆ. ಹಾಗೇ ಒಂದೊಂದು ಓಟು ಸೇರಿ ಉತ್ತಮ ನಾಯಕನನ್ನಾಗಿ ಆರಿಸಿವಂತದ್ದು. ವಿಪರ್ಯಾಸ ಎಂದರೆ ಇಂದಿನ ಯುವ ಕರಿಗೆ ತಮ್ಮ ಕ್ಷೇತ್ರ ಯಾವುದು? ಯಾರು ಅಭ್ಯರ್ಥಿಗಳು ಎನ್ನುವುದೇ ತಿಳಿದಿರುವುದಿಲ್ಲ. ಚುನಾವಣೆ ಐದು ವರ್ಷ ಕ್ಕೊಮ್ಮೆ ನಡೆಯುತ್ತದೆ ಅನ್ನುವ ಸಣ್ಣ ಜ್ಞಾನವೂ ಇಲ್ಲದವರೂ ಇದ್ದಾರೆ. ಇಂದಿನ ಆ್ಯಕ್ಷನ್‌ ಮುಂದಿನ ದಿನಗಳ ಮೇಲೆ ಪ್ರಭಾವ ಬೀರುವ ರಿಯಾಕ್ಷನ್‌ ಎನ್ನುವುದು ಯುವಕರಿಗೆ ತಿಳಿದಿರಬೇಕು. ದುಡ್ಡಿಗೋ ಮತ್ತೂಂದು ಆಮಿಷಕ್ಕೋ ಬಲಿಯಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಿಮ್ಮ ಕ್ಷೇತ್ರದ ಅಭ್ಯರ್ಥಿ ಬಗ್ಗೆ  ಮೊದಲು ತಿಳಿದುಕೊಂಡು ಸರಿಯಾದ ವ್ಯಕ್ತಿಯನ್ನು ಆರಿಸಿ. ಎಲ್ಲರೂ ಮತದಾನ ಮಾಡಿ.

– ಭೂಮಿ ಶೆಟ್ಟಿ, ಕಿರುತೆರೆ ನಟಿ, ಮಾಜಿ ಬಿಗ್‌ಬಾಸ್‌ ಸ್ಪರ್ಧಿ

**

ನಮ್ಮ ಕಡೆಯಿಂದಲೇ ಬದಲಾವಣೆ

ಕೇವಲ ಕಂಪ್ಲೇಂಟ್‌ ಮಾಡುವುದರಿಂದ ಪ್ರಯೋಜನ ವಿಲ್ಲ. ಮತದಾನ ಮಾಡಿ. ನಮಗೆ ಬೇಕಾದ ಬದಲಾವಣೆ, ಬೆಳವಣಿಗೆ ಬೇಕು ಅಂದಾದರೆ. ಮತದಾನದ ಮೂಲಕ ಉತ್ತಮ ನಾಯಕನನ್ನು ಆರಿಸುವುದು ನಮ್ಮ ಹೊಣೆ. ನಿಮಗೆ ಯಾವ ವ್ಯಕ್ತಿಯೂ ಸರಿಯಿಲ್ಲ  ಎಂದು ಅನಿಸಿದರೆ ಮತದಾನದಲ್ಲಿ  ನೋಟಾ ಎನ್ನುವ ಆಪ್ಷನ್‌ ಕೂಡ ಇರುತ್ತದೆ. ಅದನ್ನು ಬೇಕಾದರು ಹಾಕಬಹುದು.  ಆದರೆ ನಮ್ಮ ಕಡೆಯಿಂದ ಉತ್ತಮ ಪ್ರಯತ್ನ ನಡೆಸಿದರೆ ಮಾತ್ರ ಬದಲಾವಣೆ ಸಾಧ್ಯ.

– ಸಂಗೀತಾ ಶೃಂಗೇರಿ, ನಟಿ

**

ಅಭಿವೃದ್ಧಿ ಬೇಕಾದರೆ ಮತದಾನ ಮಾಡಲೇ ಬೇಕು

ಮೊದಲೆಲ್ಲ ನಮ್ಮ ತಂದೆ-ತಾಯಿ ಕಾಲದಲ್ಲಿ, ಚುನಾವಣೆ, ಅಭ್ಯರ್ಥಿ, ಅಭಿವೃದ್ಧಿ, ರಾಜಕೀಯದ ಕುರಿತು ತಿಳಿದುಕೊಳ್ಳಬೇಕು ಅಂದರೆ ಪತ್ರಿಕೆಗಳ ಮೊರೆ ಹೋಗಬೇಕಿತ್ತು. ಆದರೆ ಇಂದು ಕಾಲ ಬದಲಾಗಿದೆ, ಜನರು ಬೆರಳ ತುದಿಯಲ್ಲೇ ಎಲ್ಲ ಮಾಹಿತಿಯನ್ನು ತಿಳಿಯಬಹುದು. ಆದರೆ ಇಂದಿನ ನಗರದ ಬಹುತೇಕರು ಮತದಾನ ಮಾಡುವುದಿಲ್ಲ. ಹೆಚ್ಚಿನ ಮಾಹಿತಿ ಇದ್ದರೂ ಓಟು ಮಾಡೊಲ್ಲ. ಎಲ್ಲ ಅಭಿವೃದ್ದಿ, ಜ್ಞಾನ ಬೇಕೆಂದರೆ ಮತದಾನ ಮಾಡಲೇ ಬೇಕು. ಜನರಲ್ಲಿ ಮತದಾನದ ಕುರಿತು ನಿಜವಾದ ತಿಳಿವಳಿಕೆಬೇಕು.

– ಸಂಯುಕ್ತಾ ಹೊರನಾಡು, ನಟಿ

Advertisement

Udayavani is now on Telegram. Click here to join our channel and stay updated with the latest news.

Next