Advertisement

ಇನ್ನೇನಿದ್ದರೂ ಮನೆ ಬಾಗಿಲ ಪ್ರಚಾರ: ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ

12:55 AM May 08, 2023 | Team Udayavani |

ಬೆಂಗಳೂರು: ದೇಶದ ಗಮನ ಸೆಳೆದ ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ 8 ಕೊನೆಯ ದಿನವಾಗಿದ್ದು, ಸಂಜೆ 6ಕ್ಕೆ ಬಹಿರಂಗ ಅಖಾಡಕ್ಕೆ ತೆರೆ ಬೀಳಲಿದೆ. ಬಳಿಕ “ಮೌನ ಅವಧಿ’ ಜಾರಿಗೆ ಬರಲಿದ್ದು, ಅನಂತ ರ “ಮನೆ ಬಾಗಿಲ’ ಪ್ರಹಸನ ನಡೆಯಲಿದೆ.

Advertisement

ಮತದಾರನ ಮನ ಗೆದ್ದು ರಾಜ್ಯದ ಗದ್ದುಗೆ ಏರಲು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಒಂದು ತಿಂಗಳಿನಿಂದ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಬ್ಬರಿಸಿದರೆ, ಕಾಂಗ್ರೆಸ್‌ನ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ವರಿಷ್ಠ ರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಘಟಾನುಘಟಿ ನಾಯಕರು ಕಾಂಗ್ರೆಸ್‌ ಪಕ್ಷಕ್ಕಾಗಿ ಮತಯಾಚಿಸಿದ್ದಾರೆ. ಜೆಡಿಎಸ್‌ ಪರ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ ಬೇಟೆ ನಡೆಸಿದ್ದಾರೆ.

ಮತದಾನ ಮೇ 10ರಂದು ನಡೆಯಲಿದ್ದು, ಚುನಾವಣ ಆಯೋಗದ ಮಾರ್ಗ ಸೂಚಿ ಪ್ರಕಾರ ಅದಕ್ಕಿಂತ 48 ತಾಸು ಮುನ್ನ ಬಹಿರಂಗ ಪ್ರಚಾರ ಅಂತ್ಯ ಗೊಳ್ಳಬೇಕು. ಈ 48 ತಾಸು ಅವಧಿ ಯನ್ನು “ಮೌನ ಅವಧಿ’ ಎನ್ನಲಾಗುತ್ತದೆ. ಈ ಅವಧಿಯಲ್ಲಿ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಪಕ್ಷದ ಸ್ಟಾರ್‌ ಪ್ರಚಾರಕರು ಮತ್ತು ಕ್ಷೇತ್ರದ ಮತದಾರಲ್ಲದವರು ಮೇ 8ರ ಸಂಜೆ 6ರ ಬಳಿಕ ಕ್ಷೇತ್ರ ಬಿಟ್ಟು ತೆರಳ ಬೇಕು. ಅದರಂತೆ ಮಾಜಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಪ್ರಚಾರ ಅಂತ್ಯಗೊಳಿಸಿದ್ದಾರೆ. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಸೋಮವಾರವೂ ಬಹಿರಂಗ ಪ್ರಚಾರ ನಡೆಸಲಿದ್ದಾರೆ.

ಮನೆ-ಮನೆ ಪ್ರಚಾರಕ್ಕೆ ಗಮನ
ಮೇ 8ರ ಸಂಜೆ 6ರಿಂದ ಮೇ 10ರಂದು ಮತದಾನದ ಅವಧಿ ಮುಕ್ತಾಯವಾಗುವ ತನಕ “ಸೈಲೆಂಟ್‌ ಪಿರಿಯಡ್‌’, “ಡ್ರೈ ಡೇ’ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬಹಿರಂಗ ಪ್ರಚಾರ ಮತ್ತು ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರುತ್ತದೆ. ಜತೆಗೆ ಪ್ರತೀ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗುತ್ತದೆ. 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಆದರೆ ಮನೆ- ಮನೆ ಪ್ರಚಾರಕ್ಕೆ ಇದು ಅನ್ವಯವಾಗುವುದಿಲ್ಲ. ಮನೆ-ಮನೆ ಪ್ರಚಾರದ ವೇಳೆಯಲ್ಲೂ ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಪ್ರತಿಸ್ಪರ್ಧಿಗಳ ಬಗ್ಗೆ ವೈಯಕ್ತಿಕ ಟೀಕೆ, ನಿಂದನೆ ಮಾಡುವಂತಿಲ್ಲ, ದ್ವೇಷದ ಮಾತುಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮಾತುಗಳಿಗೆ ನಿರ್ಬಂಧವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next