Advertisement

ರಾಜಕೀಯ ಕುಡಿಗಳ ರಾಜಕಾರಣ

01:33 PM Jul 25, 2022 | Team Udayavani |

ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ತಮ್ಮ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರ ಅವರಿಗಾಗಿ ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಬಿಎಸ್‌ವೈ ಅವರ ಈ ಘೋಷಣೆ ರಾಜ್ಯಾದ್ಯಂತ ತೀವ್ರ ಚರ್ಚೆಗೂ ಕಾರಣವಾಗಿದೆ. ಅಷ್ಟೇ ಅಲ್ಲ, ಮಾಜಿ ಸ್ಪೀಕರ್‌ ಕೋಳಿವಾಡ ಅವರೂ, ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸಲ್ಲ, ಪುತ್ರನಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ, ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಎಷ್ಟು ಮಂದಿ ರಾಜಕಾರಣಿಗಳು ತಮ್ಮ ಮಕ್ಕಳಿಗಾಗಿ ಕ್ಷೇತ್ರ ಬಿಟ್ಟುಕೊಡಲು ತಯಾರಿದ್ದಾರೆ? ಹಾಗೆಯೇ, ಎಷ್ಟು ಮಂದಿ ತಮ್ಮ ಮಕ್ಕಳಿಗಾಗಿ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ? ಈ ಕುರಿತ ಸಮಗ್ರ ನೋಟ ಇಲ್ಲಿದೆ.

Advertisement

ಈಶ್ವರಪ್ಪ ಪುತ್ರ ಕಾಂತೇಶ್‌
ಶಿವಮೊಗ್ಗ ಜಿಲ್ಲೆಯ ಪಾಲಿಗೆ ಬಿಜೆಪಿಯ ತ್ರಿಮೂರ್ತಿಗಳು ಎಂದೇ ಗುರುತಿಸಲ್ಪಡುವ ಬಿ.ಎಸ್‌. ಯಡಿಯೂರಪ್ಪ, ಡಿ.ಎಚ್‌.ಶಂಕರಮೂರ್ತಿ, ಕೆ.ಎಸ್‌.ಈಶ್ವರಪ್ಪ ಇವರಲ್ಲಿ ಇಬ್ಬರು ತಮ್ಮ ಮಕ್ಕಳಿಗೆ ರಾಜಕೀಯ ವೇದಿಕೆ ಕಲ್ಪಿಸಿದ್ದಾರೆ. ಆದರೆ ಕೆ.ಎಸ್‌.ಈಶ್ವರಪ್ಪ ಮಾತ್ರ ತಮ್ಮ ಪುತ್ರನನ್ನು ಒಮ್ಮೆ ಜಿಪಂ ಕಣಕ್ಕೆ ಇಳಿಸಿದ್ದು ಬಿಟ್ಟರೆ ಶಾಸಕ ಸ್ಥಾನಕ್ಕೆ ಪ್ರಯತ್ನಿಸಿಲ್ಲ. ಈಗ ಬಿಎಸ್‌ವೈ ಮಗನಿಗೆ ಕ್ಷೇತ್ರ ಬಿಟ್ಟು ಕೊಡುವ ಮಾತನಾಡಿದ್ದು ಕೆ.ಎಸ್‌.ಈಶ್ವರಪ್ಪ ಸಹ ಮಗನ ಪರ ಬ್ಯಾಟಿಂಗ್‌ ಮಾಡಲು ಅವಕಾಶ ಕಲ್ಪಿಸಿದೆ. ವಯೋಮಿತಿ ಕಾರಣಕ್ಕೆ ಈಗಾಗಲೇ ಮುಂದಿನ ಚುನಾವಣೆಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ತಮ್ಮ ಪುತ್ರ ಕೆ.ಇ.ಕಾಂತೇಶ್‌ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವ ಕಾಂತೇಶ್‌ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.

ಅಲ್ಲಂ ವೀರಭದ್ರಪ್ಪ ಪುತ್ರ ಪ್ರಶಾಂತ್‌
ಮಾಜಿ ಸಚಿವರು, ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ಪುತ್ರ, ಜಿಪಂ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್‌ ಸಹ 2023ರ ವಿಧಾನಸಭೆ ಸಾರ್ವತ್ರಿಕ ಚುನಾ ವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಮತ್ತು ಸಮುದಾಯದಲ್ಲೂ ಅಲ್ಲಂ ಕುಟುಂಬ ತನ್ನದೇ ಆದ ಖ್ಯಾತಿ ಹೊಂದಿದೆ.

ಕಾರಜೋಳ ಪುತ್ರ ಉಮೇಶ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಮೀಸಲು ಕ್ಷೇತ್ರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರ ಸೋದರಳಿಯ ನಾಗೇಂದ್ರ ಮಾಯವಂಶಿ, 2013ರಲ್ಲಿ ಹಾಗೂ 2018ರಲ್ಲಿ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಬಿಜೆಪಿಯಿಂದ ಸ್ಪಧಿ ìಸಿ ಸೋಲನುಭವಿಸಿದ್ದಾರೆ. ಈ ಬಾರಿ ಗೋವಿಂದ ಕಾರಜೋಳ ಅವರ ಇನ್ನೋರ್ವ ಪುತ್ರ ಉಮೇಶ ಕಾರಜೋಳ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ. ಜೆಡಿಎಸ್‌ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ನಿಧನದಿಂದ ತೆರವಾಗಿದ್ದ ಸಿಂದಗಿ ಕ್ಷೇತ್ರದಲ್ಲಿ ಅವರ ಪುತ್ರ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿ ಉಪ ಚುನಾವಣೆಯಲ್ಲಿ ಸೋತಿದ್ದು ಮತ್ತೂಮ್ಮೆ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ಡಾ. ಅರುಣ್‌ ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರರಾಗಿದ್ದು, ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿಯಲ್ಲಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ತಮ್ಮ ತಂದೆಯ ಕ್ಷೇತ್ರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತ ರಾಜಕೀಯ ಕ್ಷೇತ್ರದಲ್ಲಿ ಅನುಭವ ಪಡೆಯುತ್ತಿರುವ ಇವರು ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಚ್ಚೆ ಹೊಂದಿದ್ದು, ಈಗಾಗಲೇ ಅಲ್ಲಿ ಮನೆ ಮಾಡಿಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.

Advertisement

ಮಹದೇವಪ್ಪ ಪುತ್ರ ಸುನೀಲ್‌

ಮಾಜಿ ಮಂತ್ರಿ ಡಾ.ಎಚ್‌.ಸಿ.ಮಹದೇವಪ್ಪ ಅವರು ಈ ಬಾರಿ ತಿ.ನರಸೀಪುರ (ಮೀಸಲು) ಕ್ಷೇತ್ರವನ್ನು ಪುತ್ರ ಸುನೀಲ್‌ ಬೋಸ್‌ ಅವರಿಗೆ ಬಿಟ್ಟುಕೊಟ್ಟು ತಾವು ಪಕ್ಕದ ನಂಜನಗೂಡು (ಮೀಸಲು) ಕ್ಷೇತ್ರದಲ್ಲಿ ಅಖಾಡಕ್ಕೆ ಧುಮ ಡಿಕಲು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ತಂದೆ-ಮಗ ಇಬ್ಬರಿಗೂ ಟಿಕೆಟ್‌ ನೀಡುವ ಸಾಧ್ಯತೆ ಕಡಿಮೆ ಇದೆ. ಈ ಮಧ್ಯೆ ಮಾಜಿ ಸಂಸದ ಆರ್‌.ಧ್ರುವನಾರಾಯಣ ನಂಜನಗೂಡು (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ.

ಜಿ.ಎಚ್‌.ತಿಪ್ಪಾರೆಡ್ಡಿ ಪುತ್ರ ಡಾ|ಸಿದ್ಧಾರ್ಥ್
ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಪುತ್ರ ಡಾ| ಸಿದ್ಧಾರ್ಥ್ ಹೆಸರು ಚುನಾವಣಾ ರಾಜಕೀಯದಲ್ಲಿ ಚಾಲ್ತಿಯಲ್ಲಿದೆ. ಒಂದು ವೇಳೆ ವಯಸ್ಸಿನ ಕಾರಣಕ್ಕೆ ತಿಪ್ಪಾರೆಡ್ಡಿ ಅವರಿಗೆ ಟಿಕೆಟ್‌ ಸಿಗದಿದ್ದರೆ ಡಾ|ಸಿದ್ಧಾರ್ಥ್ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜತೆಗೆ ಡಾ| ಸಿದ್ಧಾರ್ಥ್ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೂ ಆಗಾಗ ಬಂದು ಹೋಗುತ್ತಿದ್ದಾರೆ. ಹಿರಿಯೂರು ತಾಲೂಕಿನ ಐಮಂಗಲ ಹಾಗೂ ಧರ್ಮಪುರ ಭಾಗದಲ್ಲಿ ಜಿ.ಎಚ್‌.ತಿಪ್ಪಾರೆಡ್ಡಿ ಪ್ರಭಾವ ಇರುವುದರಿಂದ ಹಿರಿಯೂರಿನಿಂದ ಸ್ಪರ್ಧೆ ಮಾಡುವ ಅವಕಾಶ ಸಿಕ್ಕರೆ ಅದನ್ನೂ ಬಳಸಿಕೊಳ್ಳುವ ಚಿಂತನೆ ನಡೆದಿದೆ.

ಜಿ.ಎಂ.ಸಿದ್ದೇಶ್ವರ ಪುತ್ರ ಅನಿತ್‌
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರ ಜಿ.ಎಸ್‌.ಅನಿತ್‌ ಹೆಸರು ಈ ಬಾರಿಯ ಚುನಾವಣಾ ರಾಜಕಾರಣದಲ್ಲಿ ಮುಂಚೂಣಿಯಲ್ಲಿದೆ. ಸಿದ್ದೇಶ್ವರ ಅವರು ದಾವಣಗೆರೆ ಸಂಸದರಾಗಿದ್ದರೂ ಅವರ ಉದ್ಯಮ, ವ್ಯವಹಾರ ಹಾಗೂ ಕುಟುಂಬ ನೆಲೆ ನಿಂತಿರುವುದು ಚಿತ್ರದುರ್ಗ ತಾಲೂಕಿನ ಭೀಮಸಮುದ್ರದಲ್ಲಿ. ಕೋವಿಡ್‌ 2ನೇ ಅಲೆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸಿದ್ದೇಶ್ವರ ಕುಟುಂಬದಿಂದ ಆಕ್ಸಿಜನ್‌ ಪ್ಲಾಂಟ್‌ ಕೊಡುಗೆಯಾಗಿ ನೀಡಲಾಗಿತ್ತು. ಈ ನಡೆಯಿಂದ ಅನಿತ್‌ ಚಿತ್ರದುರ್ಗ ಜಿಲ್ಲೆ ಮೂಲಕ ರಾಜಕಾರಣ ಪ್ರವೇಶ ಮಾಡುತ್ತಾರಾ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿತ್ತು. ಈಗ ಅದು ಇನ್ನಷ್ಟು ಪ್ರಬಲಗೊಂಡಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದಲೇ ಅನಿತ್‌ ಈ ಬಾರಿ ಕಣಕ್ಕಿಳಿಯುವ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ.

ಜಿ.ಟಿ.ದೇವೇಗೌಡ ಪುತ್ರ ಹರೀಶ್‌ ಗೌಡ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪುತ್ರ ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಜಿ.ಡಿ.ಹರೀಶ್‌ ಗೌಡ ಅವರನ್ನು ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್‌ ಸೇರಲು ತಮಗೆ ಹಾಗೂ ತಮ್ಮ ಪುತ್ರ ಹರೀಶ್‌ ಗೌಡ ಇಬ್ಬರಿಗೂ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕೆಂಬ ಷರತ್ತನ್ನು ಜಿ.ಟಿ.ದೇವೇಗೌಡ ವಿಧಿಸಿದ್ದರು. ಈ ಮಧ್ಯೆ ಜಿ.ಟಿ.ದೇವೇಗೌಡ ರಾಜ್ಯ ರಾಜಕೀಯದ ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಈಗ ತಟಸ್ಥ ಧೋರಣೆ ತಳೆದಿದ್ದಾರೆ. ಈ ಮಧ್ಯೆ ದೇವೇಗೌಡರನ್ನು ಜೆಡಿಎಸ್‌ನಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್‌ನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೇವೇಗೌಡ ಹಾಗೂ ಅವರ ಪುತ್ರ ಹರೀಶ್‌ ಗೌಡ ಅವರಿಗೆ ಹುಣಸೂರಿನಲ್ಲಿ ಟಿಕೆಟ್‌ ನೀಡುವ ಭರವಸೆ ನೀಡಲಾಗಿದೆ.

ಎಂ.ಚಂದ್ರಪ್ಪ ಪುತ್ರ ರಘುಚಂದನ್‌
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ ಕೂಡಾ ಜಿಲ್ಲೆಯ ರಾಜಕೀಯ ವಲಯದಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತಿದ್ದಾರೆ. ಹೊಳಲ್ಕೆರೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುವ ಕಾರ್ಯ ಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುವುದು, ಬಿಜೆಪಿ ಕಾರ್ಯಕ್ರಮ ಗಳಲ್ಲಿ ಕೂಡಾ ಕಾಣಿಸಿ ಕೊಳ್ಳುವುದರಿಂದ ರಘುಚಂದನ್‌ ಕೂಡಾ ಚುನಾವಣಾ ರಾಜಕಾರಣಕ್ಕೆ ಇಳಿಯುತ್ತಾರಾ ಎನ್ನುವ ಮಾತುಗಳಿವೆ. ಬಿಜೆಪಿ ಆಯೋಜನೆ ಮಾಡುವ ಬಹುತೇಕ ಕಾರ್ಯಕ್ರಮಗಳಲ್ಲಿ ಡಾ|ಸಿದ್ಧಾರ್ಥ್, ಜಿ.ಎಸ್‌.ಅನಿತ್‌ ಹಾಗೂ ರಘುಚಂದನ್‌ ಮುಂಚೂಣಿಯಲ್ಲಿದ್ದು ಕೆಲಸ ಮಾಡುವುದನ್ನೂ ಜನತೆ ಗಮನಿಸುತ್ತಿದ್ದಾರೆ.

ಸತೀಶ ಪುತ್ರ ರಾಹುಲ್‌ ಜಾರಕಿಹೊಳಿ
ಸತೀಶ ಜಾರಕಿಹೊಳಿ ಪುತ್ರ ಬಿಇ ಎಂಜಿನಿಯರ್‌ ಪದವೀಧರರಾಗಿರುವ ರಾಹುಲ್‌ ಜಾರಕಿಹೊಳಿ ತಮ್ಮ ತಂದೆಯಂತೆ ರಾಜಕೀಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಮೊದಲು ಸಮಾಜ ಸೇವೆ ಮಾಡು, ಜನರ ನಡುವೆ ಗುರುತಿಸಿಕೊಳ್ಳು ವಂತೆ ತಂದೆ ನೀಡಿದ ಸಲಹೆಯಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರಾಹುಲ್‌ ಈಗಾಗಲೇ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ. ಮುಖ್ಯವಾಗಿ ಯುವ ಸಮುದಾಯದಲ್ಲಿ ಸಾಕಷ್ಟು ಚಿರಪರಿಚಿತರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಮಕನಮರಡಿ ಕ್ಷೇತ್ರದ ಅಭ್ಯರ್ಥಿ ಎಂಬ ಮಾತುಗಳಿವೆ. ಈಗಾಗಲೇ ಅವರೇ ನನ್ನ ಉತ್ತರಾಧಿಕಾರಿ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಆದರೆ ಯಾವಾಗ ಎಂಬ ಗುಟ್ಟನ್ನು ಮಾತ್ರ ಇನ್ನೂ ಬಿಟ್ಟುಕೊಟ್ಟಿಲ್ಲ.

ಪ್ರಿಯಾಂಕಾ ಜಾರಕಿಹೊಳಿ
ಎಂಬಿಎ ಪದವೀಧರೆ ಆಗಿರುವ ಪ್ರಿಯಾಂಕಾ ಸಹ ಸತೀಶ ಜಾರಕಿಹೊಳಿ ಅವರ ಮುಂದಿನ ಉತ್ತರಾಧಿಕಾರಿಯಾಗುವ ಎಲ್ಲ ಲಕ್ಷಣ ತೋರಿಸಿದ್ದಾರೆ. ಇದರ ಒಂದು ಹೆಜ್ಜೆಯಾಗಿ ಈಗಾಗಲೇ ಯಮಕನಮರಡಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಅನೇಕ ಕಡೆ ಭೇಟಿ ನೀಡಿ ಸಾಮಾಜಿಕ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಸಹೋದರ ರಾಹುಲ್‌ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಅಮರನಾಥ ಜಾರಕಿಹೊಳಿ
ರಮೇಶ ಜಾರಕಿಹೊಳಿ ಅವರ ಉತ್ತರಾಧಿಕಾರಿಯಾಗುವ ಎಲ್ಲ ಲಕ್ಷಣ ಗಳನ್ನು ಪುತ್ರ ಅಮರನಾಥ ತೋರಿಸಿದ್ದಾರೆ. ಪದವೀಧರರಾಗಿರುವ ಅಮರನಾಥ ಅವರನ್ನು ರಾಜಕೀಯಕ್ಕೆ ತಂದಿರುವ ರಮೇಶ ಜಾರಕಿಹೊಳಿ ಕೆಎಂಎಫ್‌ ನಿರ್ದೇಶಕರನ್ನಾಗಿ ಮಾಡುವ ಮೂಲಕ ಮುಂದೆ ಗೋಕಾಕ ರಾಜಕೀಯದಲ್ಲಿ ತಮ್ಮ ಉತ್ತರಾಧಿಕಾರಿ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾ ವಣೆಯಲ್ಲಿ ಗೋಕಾಕ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯ ಲಿರುವ ರಮೇಶ ಜಾರಕಿಹೊಳಿ ಒಂದು ವೇಳೆ ತನಗೆ ಟಿಕೆಟ್‌ ನೀಡದೇ ಇದ್ದರೆ ನನ್ನ ಬದಲಾಗಿ ಮಗ ಅಮರನಾಥನಿಗೆ ಟಿಕೆಟ್‌ ನೀಡಬೇಕು ಎಂದು ಬೇಡಿಕೆ ಈಗಾಗಲೇ ಬಿಜೆಪಿ ವರಿಷ್ಠರ ಮುಂದಿಟ್ಟಿದ್ದಾರೆ.

ಸುಭಾಷ ಗುತ್ತೇದಾರ ಪುತ್ರ ಹರ್ಷಾನಂದ
ಆಳಂದ ಕ್ಷೇತ್ರದಲ್ಲಿ ಬಿಜೆಪಿಯ ಸುಭಾಷ ಆರ್‌. ಗುತ್ತೇದಾರ ಶಾಸಕರಾಗಿದ್ದಾರೆ. ಕಳೆದ ಎರಡೂ¾ರು ವರ್ಷಗಳಿಂದ ಇವರ ಪುತ್ರ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಹೆಸರು ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಕೇಳಿಬರುತ್ತಿದೆ. ಆದರೆ ಒಂದು ತಿಂಗಳ ಹಿಂದೆಯಷ್ಟೇ ಶಾಸಕರು ನಾನು ಕೊನೆಯದಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ಅಡಗಿದೆ.

ಎಂ.ವೈ. ಪಾಟೀಲ ಪುತ್ರ ಅರುಣ
ಅಫ‌ಜಲಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ವೈ. ಪಾಟೀಲ ಶಾಸಕರಾಗಿದ್ದು, ಈಗ ಇವರಿಗೆ 79 ವರ್ಷ ವಯಸ್ಸು. ಹೀಗಾಗಿ ಉತ್ತರಾಧಿಕಾರಿಯಾಗಿ ಅವರ ಪುತ್ರ ಅರುಣಕುಮಾರ ಪಾಟೀಲ ಸ್ಪರ್ಧಿಸಲಿದ್ದಾರೆ ಎಂದು ಅವರೇ ಘೋಷಣೆ ಮಾಡಿದ್ದಾರೆ. ಜಿಪಂ ಮಾಜಿ ಸದಸ್ಯರಾಗಿರುವ ಅರುಣ ಎಂ. ಪಾಟೀಲ ಹೈದ್ರಾಬಾದ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. 2013, 2018ರ ಚುನಾವಣೆ ಸಂದರ್ಭದಲ್ಲೂ ಅರುಣಕುಮಾರ ಹೆಸರು ಕೇಳಿಬಂದಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಈ ಕುರಿತು ಒಮ್ಮತ ಮೂಡಿಲ್ಲ.

ನಾರಾ ಭರತ್‌ ರೆಡ್ಡಿ
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಯಾಗಿದ್ದ ನಾರಾ ಸೂರ್ಯನಾರಾಯಣರೆಡ್ಡಿ ಅವರ ಪುತ್ರ ನಾರಾ ಭರತ್‌ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈಗಾಗಲೇ ಟಚ್‌ ಲೈಫ್‌ ಫೌಂಡೇಷನ್‌ ಸಂಸ್ಥೆ ಯೊಂದಿಗೆ ಜಿಪಂ ಸದಸ್ಯ ರಾಗಿಯೂ ಸಾರ್ವ ಜನಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರು, ಮಂಗಳಮುಖೀಯರಿಗೆ ಉಡಿ ತುಂಬುವ ಮೂಲಕ ಗಮನ ಸೆಳೆದಿದ್ದಾರೆ. ಜತೆಗೆ ಕ್ಷೇತ್ರದ ಪ್ರತಿ ವಾರ್ಡ್‌ ಗಳಲ್ಲಿ ತಮ್ಮದೇ ಆದ ಕೆಲ ಯುವ ಪಡೆಯನ್ನು ನಿಯೋಜಿಸಿ, ಸಾರ್ವಜನಿಕರಿಗೆ ಸರ್ಕಾರದಿಂದ ಸಿಗಬೇಕಿದ್ದ ಸೌಲಭ್ಯಗಳನ್ನು ತಲುಪಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕಂದಕೂರ್‌ ಪುತ್ರ ಶರಣಗೌಡ
ಯಾದಗಿರಿ ಜಿಲ್ಲೆ ಗಡಿ ಭಾಗದ ಮತಕ್ಷೇತ್ರವೆಂದೆ ಖ್ಯಾತಿ ಹೊಂದಿರುವ ಗುರುಮಠಕಲ್‌ ಮತಕ್ಷೇತ್ರಕ್ಕೆ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರು ಈ ಬಾರಿ ಚುನಾವಣೆಗೆ ನಿಲ್ಲುವುದು ಖಚಿತವಾಗಿದೆ. ಶಾಸಕ ನಾಗನಗೌಡ ಕಂದಕೂರು ಈ ಬಗ್ಗೆ ಕೆಲವು ದಿನಗಳ ಹಿಂದೆ ಮುಂದಿನ ಚುನಾವಣೆ ಸಾರಥ್ಯ ತಮ್ಮ ಮಗನ ಸ್ಪರ್ಧೆಯೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದರಿಂದ ಜೆಡಿಎಸ್‌ ಯುವ ನಾಯಕ ಶರಣಗೌಡ ಕಂದಕೂರು ಕಣಕ್ಕೆ ಇಳಿಯುವುದು ಗ್ಯಾರಂಟಿಯಾಗಿದೆ. ಈಗಾಗಲೇ ಅವರು ತಮ್ಮ ಮತಕ್ಷೇತ್ರದ ಪ್ರಭಾವಿ ರಾಜಕೀಯ ಮುಖಂಡರಿಗೆ ಗಾಳ ಹಾಕುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಮುದ್ನಾಳ ಪುತ್ರ ಮಹೇಶ ರೆಡ್ಡಿ
ಯಾದಗಿರಿ ಜಿಲ್ಲಾ ಕೇಂದ್ರ ಶಾಸಕರಾಗಿರುವ ವೆಂಕಟರೆಡ್ಡಿಗೌಡ ಮುದ್ನಾಳ ಪುತ್ರ ಮಹೇಶರೆಡ್ಡಿ ಯುವ ನಾಯಕತ್ವಕ್ಕೆ ಸೈ ಎನ್ನುತ್ತಿರುವ ಸಂದರ್ಭ ದಲ್ಲಿಯೇ ರೆಡ್ಡಿ ಪಡೆಯೇ ಬಲಗೈಯಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಬಿಜೆಪಿ ಯುವಕರಿಗೆ ಆದ್ಯತೆ ನೀಡುವುದಾಗಿ ಚಿಂತಿಸಿದರೆ ಮಹೇಶ ರೆಡ್ಡಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಯುವಕರನ್ನು ಸೆಳೆಯುತ್ತಿದ್ದು, ಇತ್ತೀಚೆಗೆ ಯುವಕರಿಗೆ ನೆಚ್ಚಿನ ನಾಯಕರಾಗಿ ಕಾಣತೊಡಗಿದ್ದಾರೆ.

ಮೃಣಾಲ್‌ ಹೆಬ್ಟಾಳಕರ
ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಶಾಸಕಿ ಲಕೀÒ$¾ಹೆಬ್ಟಾಳಕರ ಸಹ ತಮ್ಮ ಪುತ್ರ ಮೃಣಾಲ್‌ ಅವರನ್ನು ಉತ್ತರಾಧಿಕಾರಿಯನ್ನಾಗಿ ಬಿಂಬಿಸುವ ಕಾರ್ಯ ಆರಂಭಿಸಿದ್ದಾರೆ. ಬಿಇ ಪದವೀಧರರಾಗಿರುವ ಮೃಣಾಲ್‌ ಹೆಬ್ಟಾಳಕರ ಕಾಂಗ್ರೆಸ್‌ನಲ್ಲಿ ಯುವ ಘಟಕದ ಪ್ರಮುಖ ಪದಾಧಿಕಾರಿಯಾಗುವ ಮೂಲಕ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಗಟ್ಟಿಯಾದ ಹೆಜ್ಜೆ ಇಟ್ಟಿದ್ದಾರೆ. ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಮೃಣಾಲ್‌ ತಾಯಿ ಲಕ್ಷ್ಮಿ ಹೆಬ್ಬಾಳಕರ ಅನುಪಸ್ಥಿತಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ತಾವು ಮುಂದೆ ಈ ಕ್ಷೇತ್ರದ ಉತ್ತರಾಧಿಕಾರಿ ಎಂಬುದನ್ನು ಬಿಂಬಿ ಸುವ ಪ್ರಯತ್ನ ಮಾಡು ತ್ತಿದ್ದಾರೆ.

ನಿಖೀಲ್‌ಗಾಗಿ ಅನಿತಾ ಕ್ಷೇತ್ರ ತ್ಯಾಗ!
ತೀವ್ರ ಕುತೂಹಲ ಮೂಡಿಸುತ್ತಿರುವ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ತಾಯಿ ಅನಿತಾ ಕುಮಾರಸ್ವಾಮಿ ಅವರು ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಇದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಈಗಾಗಲೇ ಸೋತಿರುವ ನಿಖಿಲ್‌ಗೆ ರಾಜಕೀಯ ಭವಿಷ್ಯ ನೀಡುವುದು ಅನಿತಾ ಕುಮಾರಸ್ವಾಮಿ ಅವರ ತಂತ್ರಗಾರಿಕೆ ಎಂದು ಹೇಳಲಾಗುತ್ತಿದೆ. ರಾಜ್ಯವನ್ನು ಕೊರೊನಾ ಭೀಕರವಾಗಿ ಕಾಡುತ್ತಿದ್ದಾಗ ಆಹಾರ ಕಿಟ್‌ ವಿತರಣೆ ಮೂಲಕ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದ ನಿಖೀಲ್‌, ಕ್ಷೇತ್ರದ ಪ್ರಮುಖ ನಾಯಕರು ಹಾಗೂ ಯುವಪಡೆಯೊಂದಿಗೆ ನಿರಂತರವಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಂಪರ್ಕ ಸಾಧಿಸುತ್ತಿದ್ದಾರೆ.

ಕಾಗೋಡು ತಿಮ್ಮಪ್ಪ ಪುತ್ರಿ ಡಾ|ರಾಜನಂದಿನಿ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಅಷ್ಟೇ ಅಲ್ಲ, ಸಾಗರದಲ್ಲೂ ರಾಜಕೀಯ ಉತ್ತರಾಧಿಕಾರದ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಜಿಪಂ ಚುನಾವಣೆ ನಡೆದಿದ್ದರೆ ಡಾ|ರಾಜನಂದಿನಿ ರಾಜಕೀಯ ಅನುಭವದ ಮೊದಲ ಪಾಠ ಪಡೆದುಕೊಳ್ಳುತ್ತಿದ್ದರು. ಕಾಗೋಡು ಪ್ರಭಾವದಿಂದಾಗಿಯೇ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿರುವ ಡಾ|ರಾಜನಂದಿನಿ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಸಾಗರದ ರೋಟರಿ ರೆಡ್‌ಕ್ರಾಸ್‌ ಬ್ಲಿಡ್‌ ಬ್ಯಾಂಕ್‌ನ ಉಪಾಧ್ಯಕ್ಷರಾಗಿ, ತಮ್ಮದೇ ಕಾಗೋಡು ತಿಮ್ಮಪ್ಪ ಫೌಂಡೇಷನ್‌ ಮೂಲಕ ಸಾಗರ ತಾಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಮಾಡುತ್ತ ಜನಪ್ರಿಯತೆ ಸಂಪಾದಿಸುವ ಮಾರ್ಗದಲ್ಲಿದ್ದಾರೆ.

ರಕ್ಷಾ ರಾಮಯ್ಯ
ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರ ಪುತ್ರರಾಗಿರುವ ರಕ್ಷಾ ರಾಮಯ್ಯ ಅವರು ರಾಜ್ಯ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷರಾಗಿ, ಪ್ರಸ್ತುತ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಆಂಧ್ರಪ್ರದೇಶ ಯುವ ಘಟಕದ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ವಿಧಾಸನಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ಇದ್ದು, ಪ್ರಮುಖವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.

ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಕ್ಷೇತ್ರದ ಹಾಲಿ ಶಾಸಕ ಶಿವಾನಂದ ಪಾಟೀಲ ಈ ಬಾರಿ ರಾಜಕೀಯ ಕಾರಣಕ್ಕೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನನ್ನ ಹಳೇ ಕ್ಷೇತ್ರ ಬಬಲೇಶ್ವರದಿಂದ ಟಿಕೆಟ್‌ ಕೇಳಿದರೆ ತಪ್ಪೇನು ಎಂದಿದ್ದಾರೆ. ಒಂದೊಮ್ಮೆ ಶಿವಾನಂದ ತಮ್ಮ ಮಾತಿಗೆ ಕಟಿಬಿದ್ದರೆ ಈ ಕ್ಷೇತ್ರ ದಿಂದ ಅವರ ಪುತ್ರಿ ಸಂಯುಕ್ತಾ ಕಣಕ್ಕಳಿಯುವ ಸಾಧ್ಯತೆ ಇದೆ. ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿಯೂ ಆಗಿರುವ ಸಂಯುಕ್ತಾ ರಾಜಕೀಯ ಮಹತ್ವಾಕಾಂಕ್ಷೆ ಇದೆ ಎಂದು ಹಲವು ಬಾರಿ ಹೇಳಿ ಕೊಂಡಿದ್ದು, ತಂದೆ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸಿದರೆ ಬಸವನಬಾಗೇವಾಡಿ ಕ್ಷೇತ್ರ ದಿಂದ ಯುವ ಹಾಗೂ ಮಹಿಳಾ ಕೋಟಾದಲ್ಲಿ ಟಿಕೆಟ್‌ ಕೇಳುವ ಸಾಧ್ಯತೆ ಇದೆ.

ಎಂಟಿಬಿ ಪುತ್ರ ನಿತಿನ್‌ ಪುರುಷೋತ್ತಮ
ಹೊಸಕೋಟೆ ವಿಧಾನಸಭಾ 2023ರ ಚುನಾವಣೆಗೆ ಪೌರಾಡಳಿತ ಸಚಿವ ನಾಗರಾಜ್‌ ಪುತ್ರರಾದ ನಿತಿನ್‌ ಪುರುಷೋತ್ತಮ ಈಗಾಗಲೇ ಕ್ಷೇತ್ರಾದ್ಯಂತ ಸಭೆಗಳನ್ನು ನಡೆಸುತ್ತಿದ್ದು, ಯುವಕರನ್ನು ಆಕರ್ಷಣೆ ಮಾಡುತ್ತಿದ್ದಾರೆ. ತಂದೆ ಎಂಟಿಬಿ ನಾಗರಾಜ್‌ ವಿಧಾನ ಪರಿಷತ್‌ ಹಾಲಿ ಸದಸ್ಯರ ಅವಧಿ ಇನ್ನು ಮೂರು ವರ್ಷಗಳಿದ್ದು, ಹೊಸಕೋಟೆ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಡಲು ಹಲವಾರು ಸಭೆಗಳನ್ನು ಮಾಡಿದ್ದಾರೆ. ನಿತಿನ್‌ ಪುರುಷೋತ್ತಮ ಮಾಜಿ ಬಿಬಿಎಂಪಿ ಸದಸ್ಯನಾಗಿ ರಾಜಕೀಯ ಅನುಭವ ಹೊಂದಿದ್ದಾರೆ;

ಮೋಟಮ್ಮ ಪುತ್ರಿ ನಯನ
ಚಿಕ್ಕಮಗಳೂರು ಜಿಲ್ಲೆ ರಾಜಕೀಯ ಇತಿಹಾಸದಲ್ಲಿ ಛಾಪು ಮೂಡಿಸಿದ ಡಾ|ಮೋಟಮ್ಮ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಲು ಮುಂದಾಗಿದ್ದು, ತಮ್ಮ ಉತ್ತರಾಧಿಕಾರವನ್ನು ತಮ್ಮ ಮಗಳಾದ ನಯನ ಮೋಟಮ್ಮ ಅವರಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಮೂಡಿಗೆರೆ ಮೀಸಲು ಕ್ಷೇತ್ರದಿಂದ 1978ರಲ್ಲಿ ರಾಜಕೀಯ ಪ್ರವೇಶಿಸಿದ ಡಾ|ಮೋಟಮ್ಮ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಸೋಲುಂಡು, ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಒಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಮಹಿಳಾ ಸ್ವ-ಸಹಾಯ ಸಂಘಗಳನ್ನು ರಚಿಸಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದ್ದರು. ಅಲ್ಲದೇ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕೋಳಿವಾಡ ಪುತ್ರ ಪ್ರಕಾಶ ಕೋಳಿವಾಡ
ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದು, ತಮ್ಮ ಪುತ್ರ ಪ್ರಕಾಶ ಕೋಳಿವಾಡ ಅವರಿಗೆ ಅವಕಾಶ ಮಾಡಿಕೊಡಲು ಮುಂದಾಗಿದ್ದಾರೆ. ತಾಲೂಕಿನ ರಾಣಿಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ವಾತಾವರಣವಿದ್ದು, ನಾನು ರಾಜ್ಯದಲ್ಲಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಮಗ ಪ್ರಕಾಶ್‌ ಕೋಳಿವಾಡಗೆ ಈ ಬಾರಿ ಟಿಕೆಟ್‌ ಕೊಡುವಂತೆ ಹೈಕಮಾಂಡ್‌ಗೆ ಕೇಳಿದ್ದೇನೆ. ಚುನಾವಣಾ ಕ್ಷೇತ್ರದಿಂದ ಹಿಂದೆ ಸರಿದು ನನ್ನ ಮಗನನ್ನು ಮುಂದೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಈ ಬಗ್ಗೆ ಹೈಕಮಾಂಡ್‌ನಿಂದಲೇ ಪ್ರಪೋಸಲ್‌ ಬಂದಿದೆ ಎಂದು ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. ರಾಜ್ಯ ರಾಜಕಾರಣದಿಂದ ನಾನು ನಿವೃತ್ತಿ ಆಗಿದ್ದೇನೆ. ಹೈಕಮಾಂಡ್‌ನ‌ವರು ಮುಂದಿನ ಲೋಕಸಭೆ, ರಾಜ್ಯಸಭೆಗೆ ಟಿಕೆಟ್‌ ಕೊಟ್ಟರೆ ನಾನು ನಿಲ್ಲುತ್ತೇನೆ ಎಂದು ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.

ರಾಜಾ ವೇಣುಗೋಪಾಲ
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ಈ ಬಾರಿ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ತಂದೆಗಿಂತ ಮಗನೇ ಹೆಚ್ಚಾಗಿ ಚಿರಪರಿಚಿತರಾಗುತ್ತಿದ್ದಾರೆ. ಒಂದು ವೇಳೆ ಯುವ ಮತಕ್ಕೆ ಕಾಂಗ್ರೆಸ್‌ ಯೋಚಿಸಿದರೆ ಮುಂದಿನ ಚುನಾವಣೆಗೆ ರಾಜಾ ವೇಣುಗೋಪಾಲ ನಾಯಕ ಹುರಿಯಾಳಾಗಬಹುದು. ಒಂದು ವೇಳೆ ರಾಜಾ ವೇಣುಗೋಪಾಲ ನಾಯಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಹಾಲಿ ಶಾಸಕ ರಾಜುಗೌಡಗೆ ಈ ಬಾರಿಯ ಚುನಾವಣೆ ದಿಕ್ಸೂಚಿ ಕಬ್ಬಿಣದ ಕಡಲೆಯಾಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ.

ಮಹದೇವಪ್ರಸಾದ್‌ ಪುತ್ರ ಗಣೇಶ್‌ಪ್ರಸಾದ್‌
ಚಾಮರಾಜನಗರ ಜಿಲ್ಲೆಯ ಮಾಜಿ ಸಚಿವ ದಿ. ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪುತ್ರ ಗಣೇಶ್‌ ಪ್ರಸಾದ್‌ ಮುಂಬರುವ ರಾಜ್ಯ ವಿಧಾನಸಭ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂಬುದು ನಿಶ್ಚಿತವಾಗಿದೆ. ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಅಕಾಲಿಕ ನಿಧನದ ಬಳಿಕ ಅವರ ಪತ್ನಿ ಗೀತಾ ಮಹದೇವಪ್ರಸಾದ್‌ ಉಪ ಚುನಾವಣೆಯಲ್ಲಿ ಜಯಗಳಿಸಿದರು. ಬಳಿಕ ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರು. ಅಮ್ಮನ ಹೆಗಲೇರಿದ್ದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿರುವ ಪುತ್ರ ಗಣೇಶ್‌ ಪ್ರಸಾದ್‌ ಮುಂದಿನ ಅಭ್ಯರ್ಥಿಯಾಗಲು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಗ್ರಾಮಗಳಲ್ಲಿ ಸಾಮಾಜಿಕ ಸೇವಾ ಕಾರ್ಯಗಳಿಗೆ ನೆರವಾಗುವುದು, ಎಲ್ಲ ಗ್ರಾಮಗಳಿಗೂ ಭೇಟಿ, ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next