ಹೊಸದಿಲ್ಲಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಟದಲ್ಲಿ ಮುನ್ನೆಲೆಯಲ್ಲಿರುವುದು ವೈದ್ಯರು. ಅವರನ್ನು ‘ಆರೋಗ್ಯ ವೀರ’ರೆಂದು ಗುರುತಿಸಿ ಗೌರವಿಸಲಾಗುತ್ತಿದೆ.
ಅಮೆರಿಕದಲ್ಲಿರುವ ಮೈಸೂರು ಮೂಲದ ವೈದ್ಯೆ ಡಾ| ಉಮಾ ಮಧುಸೂದನ್ ಅಲ್ಲಿ ಇಂಥ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ.
1990ರಲ್ಲಿ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದ ಡಾ| ಉಮಾ ಮಧುಸೂದನ್ ಸದ್ಯ ಅಮೆರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ತನ್ನ ಪಾಳಿ ಮುಗಿಸಿ ಮನೆಗೆ ವಾಪಸ್ ಆಗಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರು ನೂರಾರು ಕಾರುಗಳ ಜತೆಗೂಡಿ ಬಂದು ಸೈರನ್ ಮೊಳಗಿಸುವ ಮೂಲಕ ಗೌರವ (ಡ್ರೈವ್ ಆಫ್ ಹಾನರ್) ಸಲ್ಲಿಸಿದ್ದಾರೆ.
ಈ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದೆ. ಅವರ ನಿವಾಸದ ಮುಂದೆ, “ಡಾ| ಉಮಾ ಅವರನ್ನು ಸೌತ್ ವಿಂಡ್ಸರ್‌ನ ತೆರೆಮರೆಯ ನಾಯಕಿ ಎಂದು ಗುರುತಿಸಲಾಗಿದೆ’ ಎಂಬ ಭಿತ್ತಿಪತ್ರ ಲಗತ್ತಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಪ್ರಶಂಸೆಯ ಮಳೆ ಸುರಿದಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಡಾ| ಉಮಾ ಸಾಧನೆಯನ್ನು ಕೊಂಡಾಡಿದ್ದಾರೆ.