ಬೆಂಗಳೂರು: ರಾಜ್ಯದೆಲ್ಲೆಡೆ ಗ್ರಾ. ಪಂ ಚುನಾವಣೆ ಬಾರಿ ಸದ್ದು ಮಾಡುತ್ತಿರುವ ಬೆನ್ನೆಲ್ಲೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ಚುನಾವಣಾ ಅಖಾಡ ರಂಗೇರಲಾರಂಭಿಸಿದೆ. ಮುಂಬರುವ 2021 ರ ಜನವರಿಯಲ್ಲಿ ಆಡಳಿತ ಮಂಡಳಿಯ ಸಾಮಾನ್ಯ ಸಭೆ ನಡೆಸಲು ಮಂಡಳಿ ಕಾರ್ಯಕಾರಿ ಸಮೀತಿಯು ಮುಂದಾಗಿದ್ದು, ಜನವರಿಯಲ್ಲಿಯೇ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1,595 ಜನ ಸದಸ್ಯ ಮತದಾರರಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕಜಾಂಚಿ ಹಾಗೂ ಕಾರ್ಯಕಾರಿ ಸಮೀತಿಯ ಸದ್ಯಸ್ಯರುಗಳನ್ನು ಈ ಸದಸ್ಯರು ಆಯ್ಕೆ ಮಾಡಲಿದ್ದಾರೆ.
ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಸಾ. ರಾ ಗೋವಿಂದು, ನಿರ್ಮಾಪಕರಾದ ಬಾ.ಮ ಹರೀಶ್, ಕೆ.ಸಿ. ಎನ್ ಚಂದ್ರಶೇಖರ, ವೆಂಕಟೇಶ್ ಮುಂತಾದವರ ಹೆಸರುಗಳು ಆಕಾಂಕ್ಷಿಗಳ ಸಾಲಿನಲ್ಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಇನ್ನಷ್ಟು ಜನರ ಹೆಸರು ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ:ರಂಗೇರಿದ ಗ್ರಾಪಂ ಚುನಾವಣಾ ಅಖಾಡ
ಈ ಹಿಂದೆ ಚಿತ್ರ ಪ್ರದರ್ಶಕ ಡಿ.ಆರ್ ಜೈರಾಜ್ ಅವರು ಮಂಡಳಿಯ ಅಧ್ಯಕ್ಷರಾಗಿದ್ದರು. 2020ರ ಜೂನ್ ವೇಳೆಗೆ ಅವರ ಅಧಿಕಾರ ಅವಧಿ ಪೂರ್ಣಗೊಂಡಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಆಡಳಿತ ಮಂಡಳಿಯ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಚುನಾವಣೆ ನಡೆಸಲು ಸಮೀತಿಯು ತಯಾರಿ ನಡೆಸುತ್ತಿದ್ದು, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಥಾಮಸ್ ಡಿಸೋಜಾ ಅವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಿದೆ ಎಂದು ತಿಳಿದುಬಂದಿದೆ.
ಚಲನ ಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲುತೀರ್ಮಾನಿಸಿದ್ದು,ಕಾರ್ಯಕಾರಿ ಸಮೀತಿಯು ಈ ವಾರದಲ್ಲಿ ಮತ್ತೊಮ್ಮೆ ಸಭೆ ಸೇರುವ ಮೂಲಕ ಚುನಾವಣಾ ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದೆ. ಸದ್ಯದಲ್ಲಿಯೇ ಸದಸ್ಯರೆಲ್ಲರಿಗೂ ತಿಳುವಳಿಕೆ ಸೂಚನಾ ಪತ್ರವನ್ನು ರವಾನಿಸಲಾಗುವುದು ಎಂದು ಥಾಮಸ್ ಡಿಸೋಜಾ ತಿಳಿಸಿದ್ದಾರೆ.