Advertisement

ದಾಖಲೆಯ 8 ಬಾರಿ ಶಾಸಕರಾಗಿದ್ದ ಕತ್ತಿ; ರೈತರ ಸಮಸ್ಯೆ ಅರಿವಿದ್ದ ಹಿರಿಯ ರಾಜಕಾರಣಿ

01:37 AM Sep 07, 2022 | Team Udayavani |

ಬೆಳಗಾವಿ: ಹಿರಿಯ ರಾಜಕಾರಣಿ ಉಮೇಶ ಕತ್ತಿ ಬಹುಮುಖ ಪ್ರತಿಭೆ. ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವವುಳ್ಳವರಾಗಿದ್ದರು. ಕೃಷಿ ಕುಟಂಬದಿಂದ ಬಂದ ಅವರಿಗೆ ರೈತರ ಸಮಸ್ಯೆಗಳ ಕುರಿತು ಅರಿವಿತ್ತು. 8 ಬಾರಿ ಶಾಸಕರಾದ ದಾಖಲೆ ಅವರದು.

Advertisement

1960ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಹಿರಿಯ ಸಹಕಾರಿ ವಿಶ್ವನಾಥ ಹಾಗೂ ರಾಜೇಶ್ವರಿ ದಂಪತಿಯ ಜೇಷ್ಠ ಪುತ್ರರಾಗಿ ಉಮೇಶ ಜನಿಸಿದ್ದರು. ಇರುವುದನ್ನು ಇದ್ದಂತೆ ನೇರವಾಗಿ ಹೇಳಬಲ್ಲ ಮಹತ್ವಾಕಾಂಕ್ಷಿ ಗುಣದ ಮೇಧಾವಿ ರಾಜಕಾರಣಿಯಾಗಿದ್ದರು.

ರಾಜಕೀಯದಲ್ಲಿ ಬಹಳ ಅನುಭವ ಉಳ್ಳವರಾಗಿದ್ದ ಹುಕ್ಕೇರಿ ತಾಲೂಕಿನ ಉಮೆಶ ಕತ್ತಿ, ಜನತಾ ಪರಿವಾರದ ಮೂಲಕವೇ ತಮ್ಮ ಭದ್ರ ರಾಜಕೀಯ ಭವಿಷ್ಯ ಕಂಡುಕೊಂಡಿದ್ದರು. ಸಕ್ಕರೆ ರಾಜಕಾರಣದಿಂದ ಸಾಕಷ್ಟು ಸಿಹಿ ಉಂಡಿದ್ದರು. ಸುದೀರ್ಘ‌ ವರ್ಷಗಳಿಂದ ರಾಜಕೀಯದಲ್ಲಿದ್ದ ಉಮೇಶ ಕತ್ತಿ ತಮ್ಮ ತಂದೆಯವರ ಪರಂಪರೆ ಮುಂದುವರಿಸಿಕೊಂಡು ಬಂದಿದ್ದರು. 1985ರಿಂದ ರಾಜಕೀಯದಲ್ಲಿದ್ದ ಕತ್ತಿ ದೀರ್ಘ‌ ಕಾಲದ ರಾಜಕೀಯ ಜೀವನದಲ್ಲಿ ಎಲ್ಲ ಪಕ್ಷಗಳನ್ನು ನೋಡಿದ್ದಾರೆ. ಎಂಟು ಬಾರಿ ಶಾಸಕರಾಗಿ ದಾಖಲೆ ಮಾಡಿದ್ದಾರೆ. ಆದರೆ ಇದುವರೆಗಿನ ಚುನಾವಣೆಗಳಲ್ಲಿ ಉಮೇಶ ಕತ್ತಿಗೆ ಕಾಂಗ್ರೆಸ್‌ ಪಕ್ಷ ಮಾತ್ರ ಒಲಿದು ಬಂದಿಲ್ಲ. ಚುನಾವಣೆ ಎಂದರೆ ನೀರು ಕುಡಿದಷ್ಟು ಸುಲಭ ಎನ್ನುವಂತೆ ದಾಖಲೆಯ ಜಯ ಸಾಧಿಸುತ್ತಿದ್ದ ಬಿಜೆಪಿಯ ಉಮೇಶ ಕತ್ತಿ ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿದ್ದರು. 2004ರ ಚುನಾವಣೆ ಒಂದು ಹೊರತುಪಡಿಸಿದರೆ 1985ರಿಂದ 2022ರ ವರೆಗೆ ಹುಕ್ಕೇರಿಯಲ್ಲಿ ಉಮೇಶ ಕತ್ತಿಯದ್ದೇ ಆಟ. ಜನತಾ ಪರಿವಾರದ ಸರಕಾರದಲ್ಲಿ ಸಚಿವರಾಗಿದ್ದ ಉಮೇಶ ಕತ್ತಿ ಆನಂತರ ಯಡಿಯೂರಪ್ಪ ಸರಕಾರದಲ್ಲಿ ಸಹ ಸಚಿವರಾಗಿ ಕೆಲಸ ಮಾಡಿದ್ದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕ, ಆಹಾರ ಇಲಾಖೆ ಸಚಿವ ಉಮೇಶ್‌ ವಿಶ್ವನಾಥ್‌ ಕತ್ತಿ ಅವರು 1985ರಲ್ಲಿ ಅಪ್ಪ ವಿಶ್ವನಾಥ್‌ ಕತ್ತಿ ಅವರ ನಿಧನದ ಅನಂತರ ರಾಜಕೀಯಕ್ಕೆ ಪ್ರವೇಶಿಸಿದರು. 2013ರಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಅಸೆಂಬ್ಲಿಗೆ ಪ್ರವೇಶ ಪಡೆದರು. ಅವರು 9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಆ ಪೈಕಿ 8 ಬಾರಿ ಗೆಲುವು ಸಾಧಿಸಿದ್ದರು. ಒಂದು ಬಾರಿ ಕೇವಲ 800 ಮತಗಳ ಅಂತರದಿಂದ ಸೋಲುಂಡಿದ್ದರು.

6 ಬಾರಿ ಪಕ್ಷಗಳ ಬದಲಾವಣೆ
ರಾಜಕೀಯ ಜೀವನದಲ್ಲಿ ಅವರು ಒಟ್ಟು ಆರು ಪಕ್ಷಗಳನ್ನು ಬದಲಿಸಿದ್ದಾರೆ. 2004ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಸ್ಪರ್ಧಿಸಿ ಸೋತಿದ್ದರು. ಅವರ ರಾಜಕೀಯ ಜೀವನದಲ್ಲಿ ಕಂಡ ಏಕೈಕ ಸೋಲು ಇದಾಗಿತ್ತು. ಅನಂತರದಲ್ಲಿ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರಿ, ಮತ್ತೆ ವಿಜಯಮಾಲೆಯನ್ನು ಧರಿಸಿದರು.

Advertisement

ರಾಜಕಾರಣಿ ಮಾತ್ರವಲ್ಲದೇ ಉದ್ಯಮಿಯೂ ಆಗಿದ್ದ ಅವರು ಸಕ್ಕರೆ ಕಂಪೆನಿಗಳ ಮಾಲಕತ್ವ ಹೊಂದಿದ್ದರು. ಈ ಹಿಂದೆ ಸಕ್ಕರೆ, ಲೋಕೋಪಯೋಗಿ, ಬಂದೀಖಾನೆ, ತೋಟಗಾರಿಕೆ, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿತ್ತು.

ಅಜಾತಶತ್ರು
ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಗುರುತಿಸಿ ಕೊಂಡಿದ್ದ ಉಮೇಶ ಕತ್ತಿ ಅವರ ಅನಿರೀಕ್ಷಿತ ಸಾವಿನಿಂದ ಗಡಿ ಜಿಲ್ಲೆಯ ರಾಜಕಾರಣಕ್ಕೆ ಗರಿಬಡಿದಂತಾಗಿದೆ. ಎಂಟು ಬಾರಿ ಶಾಸಕರಾಗಿ ದಾಖಲೆ ಮಾಡಿದ್ದ ಅವರು ಮೂಲತಃ ಜನತಾ ಪರಿವಾರದವರು. ತಂದೆ ವಿಶ್ವನಾಥ ಕತ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದು ರಾಜಕಾರಣ ಪ್ರವೇಶ ಮಾಡಿದ್ದು, ಅನಂತರ ಹಿಂದಿರುಗಿ ನೋಡಲೇ ಇಲ್ಲ. ಜನತಾ ದಳ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು ಸು ದೀರ್ಘ‌ ರಾಜಕಾರಣದಲ್ಲಿ ಒಮ್ಮೆ ಮಾತ್ರ ಸೋಲುಂಡಿದ್ದರು. ಆಗ ಅವರು ಕಾಂಗ್ರೆಸ್‌ನಿಂದ ಚುನಾವಣೆ ಎದುರಿಸಿದ್ದರು. ಅನಂತರ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಸದಾ ಕನವರಿಸುತ್ತಿದ್ದ ಕತ್ತಿ ತನ್ನ ವಿವಾದದ ಮಾತುಗಳಿಂದಲೇ ಸುದ್ದಿಯಾಗುತ್ತಿದ್ದರು. ಇದರಿಂದ ಸರಕಾರಕ್ಕೆ ಮುಜುಗರ ಉಂಟಾದರೂ ನಿಲುವು ಮಾತ್ರ ಬದಲಾಯಿಸುತ್ತಿರಲಿಲ್ಲ. ತಮ್ಮ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಗೆ ಹೊಸ ರೂಪ ಕೊಡುವ ಕನಸು ಕಂಡಿದ್ದರು.
ಜಿಲ್ಲೆಯಲ್ಲಿ ದೊಡ್ಡ ಸಾಹುಕಾರ ಎಂದೇ ಪ್ರಸಿದ್ಧರಾಗಿದ್ದರು. ರಾಜ್ಯದ ಮಾಜಿ ಕೃಷಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ 2011ರ ಮಾ. 11ರಿಂದ 13ರ ವರೆಗೆ ವಿಶ್ವವೇ ಬೆರಗಾಗುವಂತೆ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಏರ್ಪಡಿಸುವ ಮೂಲಕ ಎಲ್ಲ ಕನ್ನಡಿಗರಿಂದ ಭೇಷ್‌ ಎನಿಸಿಕೊಂಡಿದ್ದರು.

ಉತ್ತರ ಕರ್ನಾಟಕ ಜನರ ಬಹು ನಿರೀಕ್ಷಿತ ಸುವರ್ಣ ವಿಧಾನಸೌಧ ಲೋಕಾರ್ಪಣೆ ಮಾಡಿ ಪ್ರಥಮ ಅಧಿವೇಶನ ಏರ್ಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿದ್ದರು.

ಸ್ವಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಆದರೆ ಕುಟುಂಬದ ಮೂಲ ವೃತ್ತಿಯಾದ ವ್ಯವಸಾಯದಲ್ಲಿ ಆಸಕ್ತಿ ಕಳೆದುಕೊಳ್ಳಲಿಲ್ಲ. 1985ರಲ್ಲಿ ತಂದೆ ವಿಶ್ವನಾಥ ಕತ್ತಿ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿದು ಛಾಪು ಮೂಡಿಸಿದ್ದರು.

ಉತ್ತರ ಕರ್ನಾಟಕ ಹಿಂದುಳಿದಿದ್ದರ ಬಗ್ಗೆ ತೀವ್ರ ನೋವು, ಆತಂಕ ವ್ಯಕ್ತಪಡಿಸುವುದರ ಜತೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವ ಹೇಳಿಕೆ ಮೂಲಕ ಸಂಚಲನ ಮೂಡಿಸುತ್ತಿದ್ದರು.

ಅಧಿಕಾರದ ಹಿಂದೆ ಬೀಳಲಿಲ್ಲ ಕತ್ತಿ ಅವರ ಕುಟುಂಬವೇ ರಾಜಕೀಯ ಜತೆಗೆ ಉದ್ಯಮಿಯ ಕುಟುಂಬ. ಇವರದ್ದು ಅಧಿಕಾರದ ರಾಜಕಾರಣ ಅಲ್ಲ. ಇವರ ತಂದೆ ವಿಶ್ವನಾಥ ಕತ್ತಿ ಸಹ ಶಾಸಕರಾಗಿದ್ದವರು. ಇವರ ಸಹೋದರ ರಮೇಶ ಕತ್ತಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದು ಗೆದ್ದು ಸಂಸದರಾಗಿ ಸೇವೆ ಸಲ್ಲಿಸಿದ್ದರು. ಉಮೇಶ ಕತ್ತಿ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದರೂ ಕ್ಷೇತ್ರದ ಜನತೆ ಇವರನ್ನು ಎಂದಿಗೂ ಕೈಬಿಟ್ಟಿರಲಿಲ್ಲ.

ಇದರಿಂದಲೇ ಬರೋಬ್ಬರಿ 8 ಬಾರಿ ಆಯ್ಕೆಯಾಗಿದ್ದರು. ರಾಜಕೀಯ ಪಲ್ಲಟ, ಧ್ರುವೀಕರಣದಿಂದಾಗಿ ಹಲವು ಬಾರಿ ಅನಿವಾರ್ಯವಾಗಿ ಪಕ್ಷ ಬದಲಾಯಿಸಬೇಕಾಗಿ ಬಂದಾಗಲೂ ಜನತೆ ಇವರ ಕೈಬಿಟ್ಟಿರಲಿಲ್ಲ.

ಹಲವು ಖಾತೆಗಳ ನಿರ್ವಹಣೆ ಉಮೇಶ ಕತ್ತಿ ಶಾಸಕರಾಗಿದ್ದಲ್ಲದೇ ರಾಜ್ಯದಲ್ಲಿ ತೋಟಗಾರಿಕೆ, ಬಂದೀಖಾನೆ, ಸಕ್ಕರೆ, ಕೃಷಿ, ಆಹಾರ ಸಂಸ್ಕರಣೆ, ಲೋಕೋಪಯೋಗಿ ಸೇರಿ ಹಲವಾರು ಪ್ರಮುಖ ಖಾತೆಗಳ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಸದ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಖಾತೆ ನಿಭಾಯಿಸುತ್ತಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next