Advertisement

ಪ್ರತಿಷ್ಠೆಗೆ ಕಲಾಪ ಬಲಿ : ಮನವೊಲಿಕೆಗೆ ಬಗ್ಗದ ಕಾಂಗ್ರೆಸ್‌ ಸದಸ್ಯರು

06:07 PM Feb 18, 2022 | Team Udayavani |

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಪ್ರತಿಷ್ಠೆಗೆ ವಿಧಾನ ಮಂಡಲದ ಅಧಿವೇಶನ ಮೂರನೇ ದಿನವೂ ಬಲಿಯಾಯಿತು. ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷ ಕಾಂಗ್ರೆಸ್‌ ಎರಡೂ ಸದನದಲ್ಲಿ ಧರಣಿ ಮುಂದುವರೆಸಿದ್ದು, ಸರ್ಕಾರ ಅವರ ಮನವೊಲಿಕೆಯ ಕಸರತ್ತು ನಡೆಸುವುದರಲ್ಲಿಯೇ ಮೂರು ದಿನದ ಕಲಾಪ ಬಲಿಯಾಯಿತು. ಕಾಂಗ್ರೆಸ್‌ ಸದಸ್ಯರ ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು, ಕಾಂಗ್ರೆಸ್‌ ಸದಸ್ಯರು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ.

Advertisement

ಗುರುವಾರದಿಂದಲೇ ಅಹೋರಾತ್ರಿ ಧರಣಿ ಆರಂಭಿಸಿರುವ ಕಾಂಗ್ರೆಸ್‌ ಸದಸ್ಯರು ಶುಕ್ರವಾರವೂ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ತಮ್ಮ ಧರಣಿಯನ್ನು ಮುಂದುವರೆಸಿದರು. ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಜಿ ಶಾಸಕ ಜಿ.ವಿ. ಮಂಟೂರು ಅವರಿಗೆ ಸಂತಾಪ ಸೂಚನೆ ವಿಷಯ ಮಂಡನೆ ಮಾಡಿದ್ದರಿಂದ ಸ್ವಲ್ಪ ಹೊತ್ತು ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗದೇ ಶಾಂತತೆ ಕಾಪಾಡಿಕೊಂಡರು.

ಸಂತಾಪ ಸೂಚನೆ ಮುಗಿದ ತಕ್ಷಣ ಕಾಂಗ್ರೆಸ್‌ ಸದಸ್ಯರು ಮತ್ತೆ ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹಿ ಈಶ್ವರಪ್ಪ ಎಂದು ಘೋಷಣೆಗಳನ್ನು ಕೂಗತೊಡಗಿದರು. ಆದರೆ, ಅವರ ಘೋಷಣೆಗೆ ಕಿವಿಗೊಡದೆ ಸ್ಪೀಕರ್‌ ಕಾಗೇರಿ ಪ್ರಶ್ನೋತ್ತರ ಕಲಾಪ ಮುಂದುವರೆಸಿದರು. ಕಾಂಗ್ರೆಸ್‌ ನಾಯಕರ ಗದ್ದಲದ ನಡುವೆಯೇ ಪ್ರಶ್ನೊತ್ತರ ಕಲಾಪ, ಕೆಪಿಎಸ್‌ಸಿ 2011 ಬ್ಯಾಚ್‌ ಗೆಜೆಟ್‌ ಪ್ರೊಬೆಷನರಿ ಹುದ್ದೆಗಳ ವಿಶೇಷ ನೇಮಕಾತಿ ವಿಧೇಯಕ ಹಾಗೂ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ ರಾಜ್‌ ಸಂಸ್ಥೆಗಳ ಸಮಿತಿ ವರದಿ ಮಂಡನೆ ಮಾಡಲಾಯಿತು.

ಮಾಧುಸ್ವಾಮಿ ಅಸಮಾಧಾನ :
ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ನಿಲುವಳಿ ಮಂಡನೆ ಆದ ಬಳಿಕ ಚರ್ಚೆ ಆಗಿ ಸಭಾಧ್ಯಕ್ಷರು ತೀರ್ಪು ಕೊಟ್ಟಿದ್ದಾರೆ. ಸಭಾಧ್ಯಕ್ಷರ ತೀರ್ಪು ವಿರೋಧ ಮಾಡಿದರೆ ಮುಂದೆ ಶಾಸನ ಸಭೆ ನಡೆಯುವುದು ಕಷ್ಟ. ವಿಧಾನಸಭೆಗೆ ಯಾವುದೇ ಗೌರವ ಉಳಿಯುದಿಲ್ಲ. ಇದಕ್ಕೊಂದು ಅಂತ್ಯವಾಡಬೇಕು. ಪರ ವಿರೋಧ ಪ್ರತಿಭಟನೆಗೆ ಬೇಕಾದಷ್ಟು ಅವಕಾಶ ಇದೆ. ಇಡೀ ಸಾರ್ವಜನಿಕರು ಈ ವ್ಯವಸ್ಥೆ ಬಗ್ಗೆ ಅಪಹಾಸ್ಯ ಮಾಡುವ ಪರಿಸ್ಥಿತಿ ಬಂದಿದೆ. ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಇಲ್ಲ ಎಂದು ರೂಲಿಂಗ್‌ ಕೊಟ್ಟ ಬಳಿಕ ಸದನದ ಹೊರಗಡೆ ಹೋರಾಟ ಮಾಡಬೇಕಿತ್ತು. ಸಭೆಯಲ್ಲಿ ಯಾರಿಗೂ ಮಾತನಾಡಲು ಅವಕಾಶ ಕೊಡುತ್ತಿಲ್ಲ, ಇವರೂ ಮಾತನಾಡುತ್ತಿಲ್ಲ. ಇದು ಯಾರಿಗೂ ಗೌರವ ಕೊಡಲ್ಲ. ಇದು ಈಶ್ವರಪ್ಪಗೆ ಮಾಡುತ್ತಿರುವ ಅವಮಾನ ಅಲ್ಲ ವಿಧಾನಸಭೆಗೆ ಮಾಡುತ್ತಿರುವ ಅವಮಾನ. ಚರ್ಚೆ ಆಗಬೇಕಾದ ಸಭೆಯಲ್ಲಿ ದೊಂಬಿ ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಇದಕ್ಕೆ ಅಂತ್ಯ ಹಾಡಬೇಕು. ಇದು ಪೀಠಕ್ಕೆ ಮಾಡುತ್ತಿರುವ ಅವಮಾನ,ಇದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ವಿಧಾನಸಭೆ ನಡೆಸಲು ಶಕ್ತಿ ಇಲ್ವಾ ಸರ್ಕಾರಕ್ಕೆ ಎಂದು ಜನ ಭಾವಿಸುತ್ತಾರೆ. ಶಾಸನ ಸಭೆ ಗೌರವ ಘನತೆಯನ್ನು ಎತ್ತಿ ಹಿಡಿಯಬೇಕು. ವಿಧಾನಸಭೆಗೆ ಅವಮಾನ ಮಾಡಬಾರದು ಎಂದು ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದರು.

ವಾಪಸ್‌ ಪಡೆಯಲು ಸ್ಪೀಕರ್‌ ಮನವಿ :
ವಿಧಾನಸಭೆಯಲ್ಲಿ ಶಾಂತಿಯಿಂದ ವರ್ತಿಸುವಂತೆ ಕಾಂಗ್ರೆಸ್‌ ಸದಸ್ಯರಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಲವು ಬಾರಿ ಮನವಿ ಮಾಡಿಕೊಂಡರು. ಸದನದಲ್ಲಿ ಎಲ್ಲ ಸದಸ್ಯರ ಹಿತ ಕಾಯುವುದು ಸಭಾಧ್ಯಕ್ಷನಾದ ನನ್ನ ಜವಾಬ್ದಾರಿ, ಬೇರೆ ಸದಸ್ಯರಿಗೆ ಚರ್ಚಿಸಲು ಅವಕಾಶ ನೀಡಬೇಕಿದೆ. ನೀವು ಚರ್ಚೆಯಲ್ಲಿ ಪಾಲ್ಗೊಳ್ಳಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲಿ ಎಂದು ಸ್ಪೀಕರ್‌ ಸಲಹೆ ನೀಡಿದರು. ಆದರೂ, ಕಾಂಗ್ರೆಸ್‌ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರೆಸಿದರು.

Advertisement

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹಿರಿಯ ಸದಸ್ಯ ರಮೇಶ್‌ ಕುಮಾರ್‌ ಮಧ್ಯಪ್ರವೇಶಿಸಿ, ಪ್ರತಿಭಟನೆ ತಡೆಯಲು ಆಗದಿದ್ದರೆ, ಸದನದಿಂದ ಅಮಾನತು ಮಾಡಿ, ನಿಮಗೆ ಆ ಅಧಿಕಾರ ಇದೆ ಎಂದು ಸಲಹೆ ನೀಡಿದರು. ಅವರ ಮಾತಿನಿಂದ ಕೆರಳಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ನನ್ನಿಂದ ಅದನ್ನೇಕೆ ನೀವು ಬಯಸುತ್ತಿದ್ದೀರಿ, ನೀವೆ ಹೊರಗಡೆ ಹೋಗಿ ಪ್ರತಿಭಟನೆ ಮಾಡಿ ಇಲ್ಲದಿದ್ದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸದಸ್ಯರನ್ನು ಅಮಾನತು ಮಾಡುವಂತೆ ಪತ್ರ ಬರೆದುಕೊಡಲಿ ಎಂದು ತಿರುಗೇಟು ನೀಡಿದರು.

ಅದಕ್ಕೆ ರಮೇಶ್‌ ಕುಮಾರ್‌ ನಾವು ಹೋಗುವುದಿಲ್ಲ ನಿಮಗೆ ಅಧಿಕಾರ ಇದೆ. ಅಮಾನತು ಮಾಡಿ ಎಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ, ರಮೇಶ್‌ ಕುಮಾರ್‌ ಅವರು ಗಲಾಟೆ ಮಾಡುತ್ತಿರುವವರನ್ನು ಸದನದಿಂದ ಅಮಾನತು ಮಾಡುವಂತೆ ಹೇಳುತ್ತಿದ್ದಾರೆ. ಅವರನ್ನು ಅಮಾನತು ಮಾಡಿ ಎಂದು ಅವರ ಮಾತಿಗೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಸ್ಪೀಕರ್‌ ಕಾಗೇರಿ, ರಮೇಶ್‌ ಕುಮಾರ್‌ ಅವರ ಮಾತಿಗೆ ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, ಈ ರೀತಿ ಸನ್ನಿವೇಶವನ್ನು ಇತಿಹಾಸದಲ್ಲಿ ನೋಡಿಲ್ಲ. ಸದನದಲ್ಲಿ ಅನೇಕ ಬಾರಿ ಜನರ ಕಷ್ಟಗಳಿಗೆ ರೈತರು, ಕೂಲಿಕಾರ್ಮಿಕರ ವಿಷಯವಿಟ್ಟುಕೊಂಡು ಧರಣಿಯಾಗಿದೆ ಅದಕ್ಕೆ ಫ‌ಲ ಕೂಡ ಸಿಕ್ಕಿದೆ. ಈ ಧರಣಿಯಲ್ಲಿ ಯಾವುದೇ ಜನಹಿತವಿಲ್ಲ. ವಿಪಕ್ಷ ತನ್ನ ಜವಾಬ್ದಾರಿ ಮರೆತಿದೆ. ನೋವಿನಿಂದ ಹೇಳುತ್ತಿದ್ದೇನೆ. ವಿಪಕ್ಷ ಜನಪರ ಧ್ವನಿ ಎತ್ತಬೇಕಿತ್ತು. ರಾಜಕೀಯ ಧರಣಿ ಮಾಡುವುದು ಅವರ ರಾಜಕೀಯ ದಿವಾಳಿತನ ತೋರಿಸುತ್ತದೆ. ಕೆಲ ಸದಸ್ಯರ ವರ್ತನೆಯಿಂದ ಎಲ್ಲಾ ಸದಸ್ಯರ ಅವಕಾಶ ಮೊಟಕಾಗುತ್ತಿದೆ. ಜೆಡಿಎಸ್‌ ಶಾಸಕರು ಮಾತನಾಡಬೇಕು ಅಂತ ಇದ್ದಾರೆ. ಆಡಳಿತ ಶಾಸಕರು ಕೂಡ ಧ್ವನಿ ಎತ್ತಬೇಕು ಎಂದಿದ್ದಾರೆ. ಈ ಧರಣಿಯಿಂದ ಯಾವ ಲಾಭ ಕೂಡ ಇಲ್ಲ. ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಗೊಂದಲ ನಡೆಯುತ್ತಿದೆ. ಮಕ್ಕಳಲ್ಲಿರುವ ಗೊಂದಲ ದೂರಮಾಡಿ. ಮಕ್ಕಳ ಭವಿಷ್ಯ ನಿರ್ಮಿಸಬೇಕು. ಆದರೆ, ಇವರು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ. ಎಲ್ಲರೂ ಸೇರಿ ಗೊಂದಲಕ್ಕೆ ತೆರೆ ಎಳೆದು ಮಕ್ಕಳಿಗೆ ಒಂದು ಸಂದೇಶ ಕೊಡಬೇಕು. ಇಡಿ ಭಾರತ ನೋಡುವ ಸಂಧರ್ಭಗಳಲ್ಲಿ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಸ್ಪೀಕರ್‌ ಕುರ್ಚಿಗೂ ಕೂಡ ಇವರು ಗೌರವ ನೀಡುತ್ತಿಲ್ಲ. ಸಂವಿಧಾನಕ್ಕೂ ಕೂಡ ದ್ರೋಹ ಬಗೆಯುತ್ತಿದ್ದಾರೆ. ರಾಜ್ಯದ ಜನತೆಗೆ, ಮಕ್ಕಳಿಗೆ ದ್ರೋಹ ಬಗೆಯುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರು ರಾಜ್ಯದ್ರೋಹಿಗಳು ಎಂದು ಸಿಎಂ ಬೊಮ್ಮಾಯಿ ಆರೋಪಿಸಿದರು.
ಶಾಸಕರನ್ನು ಸಸ್ಪೆಂಡ್‌ ಮಾಡುವುದು ಪರಿಹಾರ ಅಲ್ಲ ಅವರ ಮನವೊಲಿಕೆ ಮಾಡಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪೀಕರ್‌ ಹಾಗೂ ಸರ್ಕಾರದ ಮನವಿಗೆ ಕಾಂಗ್ರೆಸ್‌ ಸದಸ್ಯರು ಸ್ಪಂದಿಸದೇ ಇರುವುದರಿಂದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಸದನ ಮುಂದೂಡಿದರೂ ಕಾಂಗ್ರೆಸ್‌ ಸದಸ್ಯರು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next