Advertisement

ಅಧಿವೇಶನದಲ್ಲಿ ಅಭಿವೃದ್ಧಿ, ಜನಹಿತದ ವಿಷಯಗಳೇ ಆದ್ಯತೆಯಾಗಲಿ

12:22 AM Sep 12, 2022 | Team Udayavani |

ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನ ಸೋಮವಾರ ಆರಂಭಗೊಳ್ಳಲಿದೆ. ಬಜೆಟ್‌ ಅಧಿವೇಶನದ ನಡೆದು ಸುದೀರ್ಘ‌ ವಿರಾಮದ ಬಳಿಕ ವಿಧಾನಮಂಡಲದ ಅಧಿವೇಶನ ನಡೆಯು­ತ್ತಿದ್ದು ಸಹಜವಾಗಿಯೇ ಈ ಅಧಿವೇಶನದ ಬಗೆಗೆ ರಾಜ್ಯದ ಜನರಲ್ಲಿ ಭಾರೀ ಕುತೂಹಲವಿದೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ನೌಕರರ ನೇಮಕಾತಿಗಾಗಿನ ಪರೀಕ್ಷೆಗಳಲ್ಲಿ ಭಾರೀ ಅಕ್ರಮಗಳು ನಡೆದು ಅನರ್ಹರು ಮತ್ತು ಪ್ರಭಾವಿಗಳು ಸರಕಾರಿ ಹುದ್ದೆಗೆ ನೇಮಕಗೊಂಡಿರುವ ಸರಣಿ ಪ್ರಕರಣಗಳು ಬಯಲಾಗಿವೆ. ಇದರ ನಡುವೆ ರಾಜಧಾನಿ ಬೆಂಗಳೂರು ಸಹಿತ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನರು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಗೆ ಭಂಗ, ಬೆಂಗಳೂರು-ಮೈಸೂರು ಹೆದ್ದಾರಿ, ಮಂಗಳೂ­ರಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸ್ಮಾರ್ಟ್‌ಸಿಟಿ ಯೋಜನೆ ಸೃಷ್ಟಿಸಿರುವ ಅವಾಂತರಗಳು, ವಿವಿಧ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿ­ಗಳ ಅವ್ಯವಸ್ಥೆ, ಪ್ರತೀ ಮಳೆಗಾಲದಲ್ಲಿಯೂ ನಗರಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುತ್ತಿರುವುದು ಸಹಿತ ಹತ್ತು ಹಲವು ಸಮಸ್ಯೆಗಳ ಬಗೆಗೆ ವಿಪಕ್ಷಗಳು ಸರಕಾರದ ಗಮನ ಸೆಳೆಯಲು ಸಜ್ಜಾಗಿವೆ. ರಾಜ್ಯ ಸರಕಾರದ ವಿರುದ್ಧ ಈ ಹಿಂದೆ ಕೇಳಿ ಬಂದಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪ ಪದೇ ಪದೆ ಪ್ರತಿಧ್ವನಿ­ಸುತ್ತಿದ್ದು ಈ ಬಗ್ಗೆಯೂ ಸದನಗಳಲ್ಲಿ ವಾಕ್ಸಮರ ನಡೆಯುವ ಎಲ್ಲ ಸಾಧ್ಯತೆ ಇದೆ.

ಅಧಿವೇಶನ ಎಂದ ಬಳಿಕ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ಚುಚ್ಚುಮಾತು, ಸಭಾತ್ಯಾಗ, ಧರಣಿ ಇವೆಲ್ಲವೂ ಸಾಮಾನ್ಯ. ಆದರೆ ವರ್ಷಗಳುರುಳಿದಂತೆಯೇ ಇವೆಲ್ಲವೂ ಎಲ್ಲೆ ಮೀರುತ್ತಿದ್ದು ಆಡಳಿತ ಮತ್ತು ವಿಪಕ್ಷಗಳ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸದನದ ನಿರ್ದಿಷ್ಟ ಕಾರ್ಯಕಲಾಪಗಳು ನಡೆಯುವುದರ ಜತೆಯಲ್ಲಿ ಜನರ ಸಮಸ್ಯೆ, ಬೇಡಿಕೆಗಳ ಕುರಿತಂತೆ ಶಾಸಕರು ಸದನದಲ್ಲಿ ಪ್ರಸ್ತಾವಿಸಿ ಅವುಗಳಿಗೆ ಸರಕಾರದಿಂದ ಸ್ಪಷ್ಟ ಉತ್ತರ ಬಯಸುವುದು ಸಹಜ. ಆದರೆ ಇದ್ಯಾವುದಕ್ಕೂ ಅವಕಾಶ ನೀಡದೆ ಯಾವುದಾದರೊಂದು ವಿಷಯವನ್ನು ಮುಂದಿಟ್ಟು ಅದನ್ನು ಸುದೀರ್ಘ‌ ಕಾಲ ಎಳೆದು ಸದನದ ಕಾರ್ಯಕಲಾಪವನ್ನು ಹಾಳುಗೆಡಹುವ ಸಂಪ್ರದಾಯ ಇದೀಗ ಮಾಮೂಲು ಎಂಬಂತಾಗಿದೆ.

ಅಧಿವೇಶನದ ಸಂದರ್ಭದಲ್ಲಿ ತಮಗೆ ಲಭಿಸುವ ವಿವಿಧ ಭತ್ತೆಗಳನ್ನು ಪಡೆದುಕೊಂಡು ಸದನದ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ಕೇವಲ ಹರಟೆ, ಗಲಾಟೆ, ಗದ್ದಲ ನಡೆಸುವುದಷ್ಟೇ ನಮ್ಮ ಕರ್ತವ್ಯ ಎಂದು ಶಾಸಕರಾ­ದವರು ಭಾವಿಸುವುದು ಸರಿಯಲ್ಲ. ಒಂದೇ ಮಾತಿನಲ್ಲಿ ಹೇಳುವುದಿದ್ದಲ್ಲಿ ಇದು ತಮ್ಮನ್ನು ಚುನಾಯಿಸಿದ ಜನತೆಗೆ ದ್ರೋಹ ಬಗೆದಂತೆಯೇ.

ವಿಪಕ್ಷ ಶಾಸಕರು ಜನರ ಸಮಸ್ಯೆ, ಬೇಡಿಕೆಗಳನ್ನು ಪ್ರಸ್ತಾವಿಸಿದಾಗ ಮತ್ತು ಸರಕಾರದ ವೈಫ‌ಲ್ಯಗಳ ಬಗೆಗೆ ಬೆಟ್ಟು ಮಾಡಿದಾಗ ಸಮರ್ಪಕ ಉತ್ತರ ಮತ್ತು ಸ್ಪಷ್ಟನೆ ನೀಡುವುದು ಸರಕಾರದ ಕರ್ತವ್ಯ. ಇದನ್ನು ಬಿಟ್ಟು ಕಾಲೆಳೆಯಲೆಂದೇ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು, ಸಚಿವರು ನೀಡುವ ಉತ್ತರ­ ಆಲಿಸುವ ಕನಿಷ್ಠ ಸೌಜನ್ಯ ತೋರದಿರು­ವಂತಹ ವಿಪಕ್ಷ ಶಾಸಕರ ಧೋರಣೆ­ಯಾಗಲಿ, ವಿಪಕ್ಷಗಳ ಮೇಲೆ ಮುಗಿಬೀಳು­ವಂತೆ ಆಡಳಿತಾ­ರೂಢ ಪಕ್ಷದ ಶಾಸಕರು ವರ್ತಿಸುವುದಾಗಲಿ ಸದನಗಳ ಘನತೆ, ಗೌರವಗಳಿಗೆ ತಕ್ಕುದಲ್ಲ.

Advertisement

ಈ ಬಾರಿಯ ಅಧಿವೇಶನ 10 ದಿನಗಳಷ್ಟೇ ನಡೆಯಲಿದ್ದು ಈ ಅಲ್ಪ ಅವಧಿ­­ಯಲ್ಲಿ ಉಭಯ ಸದನಗಳಲ್ಲಿ ಮಹತ್ವದ ವಿಷಯಗಳ ಬಗೆಗೆ ಚರ್ಚೆಗಳು ನಡೆಯಬೇಕಿದೆ. ರಾಜ್ಯದ ಅಭಿವೃದ್ಧಿ, ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ­ಕೊಂಡು ಈ ಬಾರಿಯಾದರೂ ಅಧಿವೇಶನ ಸುಸೂತ್ರವಾಗಿ ನಡೆಯಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next