ಬೆಂಗಳೂರು: ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಪಠ್ಯ ಸೇರಿದಂತೆ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆಯ ಸಂದರ್ಭ ಸೇರ್ಪಡೆಯಾಗಿರುವ ಪಠ್ಯಗಳನ್ನು ಕೈ ಬಿಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2017ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹಾಗೂ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ
ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇಲಾಖೆಗೆ ಈ ಸಂಬಂಧ ನಿರ್ದೇಶನ ನೀಡುವುದಕ್ಕೂ ಮುನ್ನ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.
ಇದೇ ಸಭೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಬಗ್ಗೆಯೂ ತಜ್ಞರು, ಸಾಹಿತಿಗಳು ಸರಕಾರಕ್ಕೆ ಸಲಹೆ ನೀಡಿದ್ದರು. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ತರಗತಿಗಳು ಪ್ರಾರಂಭವಾಗಿವೆ. ಪಠ್ಯಪುಸ್ತಕಗಳ ವಿತರಣೆಯೂ ಆಗಿದೆ. ಹಾಗಾಗಿ ಈ ಹಂತದಲ್ಲಿ ತತ್‌ಕ್ಷಣಕ್ಕೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡುವುದು ಕಷ್ಟ. ಹೊಸ ಪಠ್ಯ ಪುಸ್ತಕಗಳ ಪರಿಷ್ಕರಣೆ ಮತ್ತು ಮುದ್ರಣಕ್ಕೆ ಆರ್ಥಿಕ ಹೊರೆಯ ಜತೆಗೆ ಮೂರು ತಿಂಗಳು ಸಮಯ ಬೇಕು.
Related Articles
ಎನ್‌ಇಪಿ: ಚರ್ಚಿಸಿದ ಬಳಿಕ ತೀರ್ಮಾನ
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಶಿಕ್ಷಣ ತಜ್ಞರೊಂದಿಗೆ ಸುದೀರ್ಘ ಸಭೆ ನಡೆಸಿದರು. ರಾಜ್ಯದಲ್ಲಿ ಎನ್‌ಇಪಿ ಜಾರಿಯ ವಸ್ತುಸ್ಥಿತಿ, ಅದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗಳ ಬಗ್ಗೆ ಮತ್ತು ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸಿದರೆ ಆಗುವ ಸಾಧಕ-ಬಾಧಕಗಳ ಬಗ್ಗೆ ಶಿಕ್ಷಣ ತಜ್ಞರು ಸಮಗ್ರ ವಿವರಣೆ ನೀಡಿದ್ದಾರೆ. ಎಲ್ಲ ಅಂಶಗಳನ್ನು ಕೂಲಂಕಷವಾಗಿ ಆಲಿಸಿದ ಸಚಿವರು ಎನ್‌ಇಪಿ ಭಾಗೀದಾರರಾದ ಶಿಕ್ಷಣ ತಜ್ಞರು, ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರೊಂದಿಗೆ ಎಲ್ಲ ಆಯಾಮಗಳಲ್ಲಿ ಸಮಗ್ರವಾಗಿ ಚರ್ಚಿಸಿದ ಬಳಿಕ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು ಎನ್ನಲಾಗಿದೆ.
ಪಠ್ಯ ಕೈಬಿಡುವುದು ಹೇಗೆ?
ಸದ್ಯ ಪಠ್ಯಪರಿಷ್ಕರಣೆ ಕಷ್ಟಸಾಧ್ಯ. ಹೀಗಾಗಿ ಯಾವ ಪಠ್ಯವನ್ನು ತೆಗೆದುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಬಗ್ಗೆ ಒಂದು ತಿಧ್ದೋಲೆ ಕಳುಹಿಸಲು ಸಲಹೆ ನೀಡಲಾಗಿದೆ. ಸದ್ಯ ನಿರ್ಧಾರ ಮಾಡಲಾಗಿರುವ ವಿಷಯಗಳ ಬಗ್ಗೆ ಶಾಲೆಗಳಿಗೆ ತಿಧ್ದೋಲೆ ಕಳುಹಿಸಲಾಗುತ್ತದೆ. ಇದಕ್ಕೆ ಸಿಎಂ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.