Advertisement

ಸಾಲ ಮನ್ನಾ ಯೋಗ, 50,000 ರೂ.ವರೆಗಿನ ಸಾಲ ಮನ್ನಾ

03:45 AM Jun 22, 2017 | Team Udayavani |

ವಿಧಾನಸಭೆ: ಕಳೆದ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯವನ್ನು ಉಳಿಸಲು ಸಾಲ ಮನ್ನಾ ಮಾಡಬೇಕು ಎಂಬ ಸಾರ್ವತ್ರಿಕ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಸಹಕಾರ ಸಂಘಗಳ ಮೂಲಕ ರೈತರು ಮಾಡಿದ್ದ ಬೆಳೆ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದೆ.

Advertisement

ಆದರೆ, ಇದು ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ ಬಡ್ಡಿ ರಹಿತ ಅಲ್ಪಾವಧಿ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮಾಡಿದ ರೈತರಿಗೂ ಈ ಸೌಲಭ್ಯ ಒದಗಿಸಬೇಕು ಎಂಬ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.

2017-18ನೇ ಸಾಲಿನ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಬುಧವಾರ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಘೋಷಣೆ ಮಾಡಿದ್ದು, ಇದರಿಂದ ರಾಜ್ಯದ 22,27,506 ರೈತರಿಗೆ ಅನುಕೂಲವಾಗಲಿದೆ. ಸಾಲ ಮನ್ನಾ ಘೋಷಣೆಯಿಂದ ರಾಜ್ಯ ಸರ್ಕಾರದ ಮೇಲೆ 8165 ಕೋಟಿ ರೂ. ಹೊರೆ ಬೀಳಲಿದೆ.

ಮಂಗಳವಾರದವರೆಗೆ (20.6.2017) ರೈತರು ಉಳಿಸಿಕೊಂಡಿರುವ ಬೆಳೆ ಸಾಲಕ್ಕೆ ಈ ಸಾಲ ಮನ್ನಾ ಘೋಷಣೆ ಅನ್ವಯವಾಗಲಿದೆ. ರೈತರು ಎಷ್ಟೇ ಅಲ್ಪಾವಧಿ ಬೆಳೆ ಸಾಲ ಮಾಡಿದ್ದರೂ (ಒಂದು ವರ್ಷ ಅವಧಿಯ ಸಾಲ) ಆ ಪೈಕಿ 50 ಸಾವಿರ ರೂ. ಮನ್ನಾ ಆಗಲಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಅಲ್ಲದೆ, ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಇದರಿಂದ 50 ಸಾವಿರ ಮತ್ತು ಅದಕ್ಕಿಂತ ಕಮ್ಮಿ ಮೊತ್ತದ ಸಾಲ ಮಾಡಿದ್ದರೆ ಸಂಪೂರ್ಣ ಸಾಲ ಮನ್ನಾ ಆಗುತ್ತದೆ. ಅದಕ್ಕಿಂತ ಹೆಚ್ಚು ಸಾಲ ಪಡೆದವರ 50 ಸಾವಿರ ರೂ. ಮನ್ನಾ ಆಗಲಿದ್ದು, ಉಳಿದ ಸಾಲವನ್ನು ರೈತರು ಭರಿಸಬೇಕಾಗುತ್ತದೆ.

Advertisement

ಪ್ರಸ್ತುತ ರಾಜ್ಯದ ಸಹಕಾರ ಬ್ಯಾಂಕ್‌ಗಳಲ್ಲಿ 22,27,506 ರೈತರು ಸುಮಾರು 10736 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಮಾಡಿದ್ದಾರೆ. ಈ ಎಲ್ಲಾ ರೈತರು ಮಂಗಳವಾರದವರೆಗೆ ಬಾಕಿ ಉಳಿಸಿಕೊಂಡಿರುವ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಮೊತ್ತವನ್ನು ಸರ್ಕಾರ ಭರಿಸುತ್ತದೆ. ವಿಳಂಬ ಮಾಡದೆ, ಕೂಡಲೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಬಿಜೆಪಿ ವಿರುದ್ಧ ಶೇಮ್‌ ಶೇಮ್‌ ಘೋಷಣೆ:
ಈ ಮಧ್ಯೆ ಸಾಲ ಮನ್ನಾ ಮಾಡಿದ ಬಗ್ಗೆ ಮುಖ್ಯಮಂತ್ರಿಗಳನ್ನು ಅಭಿನಂದಿಸಲು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಎದ್ದುನಿಂತರಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಅದಕ್ಕೆ ಅವಕಾಶ ನೀಡಲಿಲ್ಲ. ಮೊದಲು ಕೇಂದ್ರ ಸರ್ಕಾರದ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡಿಸಿ ನಂತರ ಮಾತನಾಡಿ ಎಂದು ಒತ್ತಾಯಿಸಿದರು.

ಆದರೂ ಜಗದೀಶ್‌ ಶೆಟ್ಟರ್‌ ಮಾತನಾಡಲು ಪ್ರಯತ್ನಿಸಿದರಾದರೂ ಶೇಮ್‌ ಶೇಮ್‌ ಎಂದು ಘೋಷಣೆ ಕೂಗಲಾರಂಭಿಸಿದ ಕಾಂಗ್ರೆಸ್‌ ಸದಸ್ಯರು, ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಪದೇ ಪದೇ ಅಡ್ಡಿಪಡಿಸಿದರು. ಇದರ ಮಧ್ಯೆಯೂ ಮಾತು ಮುಂದುವರಿಸಿದ ಜಗದೀಶ್‌ ಶೆಟ್ಟರ್‌, ಪ್ರತಿಪಕ್ಷದ ಒತ್ತಾಯ ಮತ್ತು ರೈತರ ಭಾವನೆಗಳಿಗೆ ಸ್ಪಂದಿಸಿ ಸಾಲ ಮನ್ನಾ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವ ಕುರಿತು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡೋಣ ಎಂದು ಹೇಳಿದರು. ಅಷ್ಟರಲ್ಲಿ ಕಾಂಗ್ರೆಸ್‌ ಸದಸ್ಯರ ಕಡೆಯಿಂದ ಶೇಮ್‌ ಶೇಮ್‌ ಘೋಷಣೆ ಜೋರಾಗಿದ್ದರಿಂದ ಈ ವಿಷಯಕ್ಕೆ ತೆರೆ ಎಳೆದು ವಿಧೇಯಕಗಳನ್ನು ಕೈಗೆತ್ತಿಕೊಳ್ಳಲಾಯಿತು.

ಪ್ರತಿಪಕ್ಷದ ಒತ್ತಾಯಕ್ಕಾಗಿ ಅಲ್ಲ, ರೈತರಿಗಾಗಿ ಸಾಲ ಮನ್ನಾ:
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಲ ಮನ್ನಾ ಬಗ್ಗೆ ಪ್ರತಿಪಕ್ಷದವರು ಸಾಕಷ್ಟು ಮಾತನಾಡಿದ್ದಾರೆ. ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿ 1600 ಕೋಟಿ ರೂ. ಭರಿಸಿದ್ದರು. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ವರೆಗಿನ 3600 ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ಈ ಪೈಕಿ ಹಿಂದಿನ ಸರ್ಕಾರ 960 ಕೋಟಿ ರೂ. ಭರಿಸಿದ್ದರೆ ಉಳಿದ ಮೊತ್ತವನ್ನು ನಮ್ಮ ಸರ್ಕಾರ ಭರಿಸಿತ್ತು. ಪ್ರಸ್ತುತ ರಾಜ್ಯದ ರೈತರ ಮೇಲೆ 1.16 ಲಕ್ಷ ಕೋಟಿ ರೂ. ಸಾಲವಿದೆ.

ಈ ಪೈಕಿ 54 ಸಾವಿರ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲವಾಗಿದ್ದು, ಅದರಲ್ಲಿ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ ಸಾಲ 10,376 ಕೋಟಿ ರೂ. ಮಾತ್ರ. ಉಳಿದ ಸುಮಾರು 42 ಸಾವಿರ ಕೋಟಿ ರೂ. ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೈತರಿಗೂ ಸಾಲ ಮನ್ನಾದ ಅನುಕೂಲ ಸಿಗಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲದ ಶೇ. 50ರಷ್ಟನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ ಸಾಲದ ಶೇ. 50ನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದೆ ಮತ್ತು ಭೇಟಿ ಮಾಡಿದಾಗಲೂ ಮನವಿ ಮಾಡಿದ್ದೆ ಎಂದರು.

ಆದರೆ, ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಶಿಸ್ತು ಹಾಳಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಹೇಳಿದ್ದರು. ಅಲ್ಲದೆ, ಕೇಂದ್ರ ಕೃಷಿ ಸಚಿವರು ಮತ್ತು ವಿತ್ತ ಸಚಿವರೂ ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಿದ್ದರೂ ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಮತ್ತು ಸಾಲ ಮನ್ನಾ ಮಾಡುವಂತೆ ಅವರು ಒತ್ತಾಯಿಸಿದ್ದರಿಂದ ಈ ಸಾಲ ಮನ್ನಾ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಅಲ್ಲದೆ, ಸರ್ಕಾರದ ಮೂಗು ಹಿಡಿದು ರೈತರ ಸಾಲ ಮನ್ನಾ ಮಾಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಅದಕ್ಕೆ ಮುನ್ನವೇ ನಾವು ಸಾಲ ಮನ್ನಾ ಮಾಡಿದ್ದೇವೆ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ಇನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡಿಸಲಿ ಎಂದು ಒತ್ತಾಯಿಸಿದರು.

ಮಧ್ಯಮಾವಧಿ, ದೀರ್ಘಾವಧಿ ಸಾಲಕ್ಕೂ ಮನ್ನಾ ಅನ್ವಯವಾಗಲಿ
ವಿಧಾನಸಭೆ:
ರಾಜ್ಯ ಸರ್ಕಾರದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಘೋಷಣೆಯನ್ನು ಸಹಕಾರ ಬ್ಯಾಂಕ್‌ಗಳ ಮೂಲಕ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದಿರುವ ರೈತರಿಗೂ ವಿಸ್ತರಿಸುವಂತೆ ಕಾಂಗ್ರೆಸ್‌ ಸದಸ್ಯ ಕೆ.ಬಿ. ಪ್ರಸನ್ನಕುಮಾರ್‌ ಮುಖ್ಯಮಂತ್ರಿಗಳ ಬಳಿ ಬಂದು ಒತ್ತಾಯಿಸಿದ ಪ್ರಸಂಗ ನಡೆಯಿತು.

ರೈತರ 50 ಸಾವಿರ ರೂ.ವರೆಗಿನ ಬೆಳೆ ಸಾಲ ಮನ್ನಾ ಕುರಿತು ಮುಖ್ಯಮಂತ್ರಿಗಳು ಘೋಷಣೆ ಮಾಡಿ ಕುಳಿತ ಕೂಡಲೇ ಅವರ ಬಳಿ ಧಾವಿಸಿ ಬಂದ ಪ್ರಸನ್ನ ಕುಮಾರ್‌, ಕಲೆದ ನಾಲ್ಕು ವರ್ಷಗಳಿಂದ ರೈತರು ಬರಗಾಲ ಎದುರಿಸುತ್ತಿದ್ದಾರೆ. ಆದ್ದರಿಂದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಕ್ಕೂ ಇದು ಅನ್ವಯವಾಗಬೇಕು ಎಂದು ಕೋರಿದರು.

ಆದರೆ, ಮುಖ್ಯಮಂತ್ರಿಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೊಂದೆಡೆ ಪ್ರಸನ್ನಕುಮಾರ್‌ ಅಲ್ಲಿಂದ ತೆರಳಲು ಸಿದ್ಧರಿರಲಿಲ್ಲ. ಅಷ್ಟರಲ್ಲಿ ಪ್ರಸನ್ನಕುಮಾರ್‌ ಅವರನ್ನು ಸಮಾಧಾನಪಡಿಸಿದ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, ಇದುವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮನ್ನಾ ಮಾಡಿದ ಉದಾಹರಣೆ ಇಲ್ಲ. ಹೀಗಾಗಿ ಅದು ಸಾಧ್ಯವಿಲ್ಲ ಎಂದು ಹೇಳಿದರು. ಅಷ್ಟರಲ್ಲಿ ವಿಧೇಯಕಗಳ ಮೇಲೆ ಚರ್ಚೆ ಆರಂಭವಾಗಿದ್ದರಿಂದ ಪ್ರಸನ್ನ ಕುಮಾರ್‌ ತಮ್ಮ ಸ್ಥಾನಕ್ಕೆ ಮರಳಿದರು.

– 22,27,506 ರೈತರಿಗೆ ಅನುಕೂಲ
– 8165 ಕೋಟಿ ರೂ. ಸರ್ಕಾರಕ್ಕೆ ಹೊರೆ
– 20-6-2017ವರೆಗಿನ ಬಾಕಿಗೆ ಅನ್ವಯ
– 1.16 ಲಕ್ಷ ಕೋಟಿ ರೂ. ರೈತರು ಮಾಡಿರುವ ಒಟ್ಟು ಸಾಲ
– 54 ಸಾವಿರ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ
– 10376 ಕೋಟಿ ರೂ. ಸಹಕಾರ ಬ್ಯಾಂಕ್‌ಗಳ ಮೂಲಕ ಮಾಡಿದ ಬೆಳೆ ಸಾಲ
– 42,000 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಬೆಳೆ ಸಾಲ

 

Advertisement

Udayavani is now on Telegram. Click here to join our channel and stay updated with the latest news.

Next