Advertisement

ಕರ್ನಾಟಕ ಅಂತಾರಾಷ್ಟ್ರೀಯ ಕ್ರೀಡಾ ಹಬ್‌: ರಾಜ್ಯಪಾಲ ಗೆಹ್ಲೋಟ್

11:54 PM Jan 05, 2023 | Team Udayavani |

ಉಡುಪಿ: ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬೇಕಾದ ತರಬೇತಿ, ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಕರ್ನಾಟಕವನ್ನು ಅಂತಾರಾಷ್ಟ್ರೀಯ ಕ್ರೀಡಾ ಹಬ್‌ ಆಗಿ ರೂಪಿಸಲು ರಾಜ್ಯ ಸರಕಾರ ಮುಂದಾಗುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಂಗಳೂರು ವಿ.ವಿ. ಮತ್ತು ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಅಖೀಲ ಭಾರತ ಅಂತರ್‌ ವಿ.ವಿ. ಮಟ್ಟದ ಪುರುಷರ ವಾಲಿಬಾಲ್‌ ಪಂದ್ಯಾಟಕ್ಕೆ ಅವರು ಗುರುವಾರ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರೀಡೆಗೆ ವಿಶೇಷ ಪ್ರಾಮುಖ್ಯ ನೀಡುತ್ತಿವೆ. ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿದ ಅನಂತರ ಕ್ರೀಡೆಯನ್ನು ಪಠ್ಯಕ್ರಮದಲ್ಲಿ ಸೇರಿಸಿದೆ. ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ಬರುವ ಜತೆಗೆ ಮಾನಸಿಕ, ಶಾರೀರಿಕ ಕ್ಷಮತೆಯೂ ಹೆಚ್ಚಾಗುತ್ತಿದೆ. ದೇಶಾದ್ಯಂತ ಕ್ರೀಡೆಗೆ ಇನ್ನಷ್ಟು ಪ್ರಾಮುಖ್ಯ ಸಿಗಬೇಕು ಎಂದು ಹೇಳಿದರು.

ದೇಶದಲ್ಲಿ ಕ್ರೀಡೆಯ ಜತೆಗೆ ಕ್ರೀಡಾ ಪ್ರತಿಭೆಗಳಿಗೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಪ್ರಧಾನ ಮಂತ್ರಿಯವರ ಪ್ರಮುಖ ಯೋಜನೆಗಳಾದ ಫಿಟ್‌ ಇಂಡಿಯಾ, ಖೋಲೋ ಇಂಡಿಯಾ ಕಾರ್ಯಕ್ರಮಗಳು ಭಾರತವು ವಿಶ್ವಮಟ್ಟದಲ್ಲಿ ಕ್ರೀಡೆಯಿಂದ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತಿದೆ.

ಒಲಿಂಪಿಕ್‌ ಹಾಗೂ ಏಷ್ಯನ್‌ ಗೇಮ್ಸ್‌ಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಮತ್ತು ಭಾರತಕ್ಕೆ ಬರುವ ಪದಕಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಅಂಗವಿಕಲರಿಗೂ ಕ್ರೀಡೆಯಲ್ಲಿ ಉತ್ತೇಜನ ಸಿಗುತ್ತಿದೆ. ಗ್ವಾಲಿಯರ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾ ಕೇಂದ್ರದಲ್ಲಿ ಅಂಗವಿಕಲರಿಗೆ ವಿಶೇಷ ಸೌಲಭ್ಯದ ಜತೆಗೆ ತರಬೇತಿ ನೀಡಲಾಗುವುದು ಎಂದರು.

Advertisement

ಅದಮಾರು ಶಿಕ್ಷಣ ಪರಿಷ್ಠಾನದ ಅಧ್ಯಕ್ಷರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀ ವಿಬುಧೇಶತೀರ್ಥ ಶ್ರೀಪಾದರು ತಮ್ಮ ದೂರದೃಷ್ಟಿಯ ಚಿಂತನೆಯೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಎಲ್ಲ ರೀತಿಯ ತರಬೇತಿ ನೀಡಲು ಪ್ರೇರಣೆಯಾದರು. ಕ್ರೀಡೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.

ಭಾರತೀಯ ವಿ.ವಿ. ಸಂಘದ ಜಂಟಿ ಕಾರ್ಯದರ್ಶಿ ಡಾ| ಬಲ್ಜಿತ್‌ ಸಿಂಗ್‌ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಏಷ್ಯನ್‌ ವಾಲಿಬಾಲ್‌ ಪಂದ್ಯಾಟವನ್ನು ಭಾರತದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಂತರ್‌ ವಿ.ವಿ. ಮಟ್ಟದಲ್ಲಿ ಆಡುತ್ತಿರುವ ಕೆಲವು ಆಟ ಗಾರರು ಮುಂದೆ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಭ ಕೋರಿ ದರು. ಆಡಳಿತಾಧಿಕಾರಿ ಡಾ| ಎ.ಪಿ.ಭಟ್‌, ಕಾಲೇ ಜಿನ ಕೋಶಾ ಧಿ ಕಾರಿ ಪ್ರಶಾಂತ ಹೊಳ್ಳ ಟಿ., ಕ್ರೀಡಾಕೂಟದ ಅಧ್ಯಕ್ಷ ಹಾಗೂ ಮಂಗಳೂರು ವಿ.ವಿ. ಕುಲಸಚಿವ ಡಾ| ಕಿಶೋರ್‌ ಕುಮಾರ್‌ ಸಿ.ಕೆ., ಸಂಘಟನ ಕಾರ್ಯದರ್ಶಿ ಡಾ| ಜೆರಾಲ್ಡ್‌ ಸಂತೋಷ್‌ ಡಿ’ಸೋಜಾ, ಸಂಯೋಜಕ ಸುಕುಮಾರ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌ ಸ್ವಾಗತಿಸಿ ಪ್ರಾಂಶುಪಾಲ ಡಾ| ರಾಘವೇಂದ್ರ ಎ. ವಂದಿಸಿದರು. ವಾಣಿಜ್ಯ ವಿಭಾಗದ ಸಂದೀಪ್‌ ಶೆಟ್ಟಿ ನಿರೂಪಿಸಿದರು.

ಮಂಗಳೂರು ವಿ.ವಿ.ಗೆ ಜಯ
ಉದ್ಘಾಟನೆಯ ಅನಂತರ ರಾಜ್ಯಪಾಲ ಗೆಹ್ಲೋಟ್ ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಆಟ ಗಾರರನ್ನು ಪ್ರೋತ್ಸಾಹಿಸಿ, ಮೈದಾನದಲ್ಲಿ ಗಿಡ ನೆಟ್ಟರು. ಅನಂತರ ನಡೆದ ಪಂದ್ಯಾವಳಿಯಲ್ಲಿ ಮಂಗಳೂರು ವಿ.ವಿ. ತಂಡವು ಪುಣೆಯ ಭಾರತಿ ವಿ.ವಿ. ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿತು.

 

 

Advertisement

Udayavani is now on Telegram. Click here to join our channel and stay updated with the latest news.

Next