Advertisement

ಕರ್ನಾಟಕ-ಹಿಂದೂಸ್ತಾನಿ ಸಂಗೀತ ಕಿತ್ತಾಟ ಬೇಡ

12:33 PM Mar 04, 2018 | Team Udayavani |

ಮೈಸೂರು: ಜೀವನೋತ್ಸಾಹ ಮೂಡಿಸಬಲ್ಲ ಸಂಗೀತದ ಉದ್ದೇಶ ನಾದವಾಗಿರಬೇಕೇ  ವಿನಃ, ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತದ ಹೆಸರಲ್ಲಿ ಕಿತ್ತಾಡುವುದು ಸರಿಯಲ್ಲ ಎಂದು ಸಂಗೀತ ವಿದ್ವಾನ್‌ ಆರ್‌.ಕೆ.ಪದ್ಮನಾಭ ಹೇಳಿದರು.

Advertisement

ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ 105ನೇ ಜನ್ಮ ದಿನ ನಿಮಿತ್ತ ಏರ್ಪಡಿಸಿದ್ದ ಸಂಗೀತೋತ್ಸವದಲ್ಲಿ ಪುಟ್ಟರಾಜ ಸನ್ಮಾನ-2018 ಸ್ವೀಕರಿಸಿ ಮಾತನಾಡಿದರು.

ಕರ್ನಾಟಕ ಸಂಗೀತ ಬಹಳ ದೊಡ್ಡ ಕ್ರಿಯೇಟಿವ್‌, ಕರ್ನಾಟಕ ಸಂಗೀತ ಬೇರೆ ಸಂಗೀತಗಳನ್ನು ತನ್ನತ್ತ ಸೆಳೆಯುತ್ತದೆಯೇ ಹೊರತು, ದೂರ ತಳ್ಳಲ್ಲ. ಕರ್ನಾಟಕ ಸಂಗೀತದಲ್ಲಿ ನೂರಾರು ಡಾಕ್ಟರೇಟ್‌ ಮಾಡುವಷ್ಟು ಸಂಪತ್ತಿಗೆ ಎಂದರು.

ಈಗ ಒಂದಾಗಿದ್ದಾರೆ: ಹಿಂದೂಸ್ತಾನಿ ಸಂಗೀತವನ್ನೂ ಕರ್ನಾಟಕ ಸಂಗೀತ ಆತ್ಮೀಯವಾಗಿ ಕಾಣುತ್ತೆ. ಹಿಂದೆ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಹೆಸರಲ್ಲಿ ಪಾಂಡವರು-ಕೌರವರಂತೆ ಹೋರಾಡುತ್ತಿದ್ದರು. ಈಗ ಎಲ್ಲ ಒಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಲಕ್ಷಣಗಳು ಬೇರೆ ಬೇರೆಯಾದರೂ ಭಾವ ಒಂದೇ ಇರುತ್ತದೆ. ಹೀಗಾಗಿ ನಾನು ಕರ್ನಾಟಕ ಸಂಗೀತವನ್ನು ಪ್ರೀತಿಸುವಷ್ಟೇ, ಹಿಂದೂಸ್ತಾನಿ ಸಂಗೀತವನ್ನೂ ಗೌರವಿಸುತ್ತೇನೆ ಎಂದರು.

Advertisement

ಈ ರೀತಿಯ ಸನ್ಮಾನಗಳಾದಾಗ ನಾದ ಸೌಖ್ಯದ ಕಡೆಗೆ ಗಮನ ಕೊಡಬೇಕು. ಶಾರೀರ ಉಳಿಸಿಕೊಳ್ಳಬೇಕು. ನನ್ನ ಸಂಗೀತ ಪ್ರಯಾಣದಲ್ಲಿ ವಿಶೇಷವಾದ ದಿನ ಇದು. ಗವಾಯಿಗಳಿಗೂ ನನಗೂ ಅವಿನಾಭಾವ ಸಂಬಂಧ, ಹೀಗಾಗಿ ನನ್ನೊಂದಿಗೆ ಅವರಿಲ್ಲ ಎಂಬ ಭಾವನೆಯೇ ನನಗೆ ಬರುವುದಿಲ್ಲ. ಗವಾಯಿಗಳ ಅಂತಃಶಕ್ತಿಯ ಮುಂದೆ ನಾವುಗಳೇ ಅಂಧರು. ಯಾವತ್ತೂ ಒಳಗಣ್ಣು ತೆರೆದುಕೊಂಡಿದ್ದರು ಎಂದು ಹೇಳಿದರು.

ಸ್ವರ, ರಾಗವೇ ಟಾನಿಕ್‌: ನನಗೆ ವಯಸ್ಸಾಗುತ್ತಿದ್ದರೂ ಸ್ವರ, ರಾಗವೇ ನನಗೆ ಟಾನಿಕ್‌ ಆಗಿದೆ. ಮುಂದೊಂದು ದಿನ ಜನರಿಗೆ ತಲೆನೋವು ಬಂದರೆ ಶಂಕರಾಭರಣ ರಾಗ ಕೇಳಿ ಎಂದು ವೈದ್ಯರು ಸಲಹೆ ನೀಡುವ ಕಾಲ ಬರಬೇಕು ಎಂದು ಅವರು ಆಶಿಸಿದರು.

ಮುಖ್ಯ ಅತಿಥಿಗಳಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ವಯೋಲಿನ್‌ ಕಲಾವಿದ ಡಾ.ಎಂ.ಮಂಜುನಾಥ್‌ ಮಾತನಾಡಿ, ಕ್ರೀಡಾ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಪಂಚದ ಇತರೆ ದೇಶಗಳ ಜತೆಗೆ ಭಾರತ ಸ್ಪರ್ಧೆ ಮಾಡುವುದು ಕಷ್ಟ. ಆದರೆ ಭಾರತದ ಸಂಗೀತ ಸಂಪತ್ತಿಗೆ ಪ್ರಪಂಚವೇ ತಲೆಬಾಗುತ್ತೆ ಎಂದರು. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಎರಡೂ ಬೇರೆ ಬೇರೆ ಅನ್ನಬೇಕಿಲ್ಲ.

ಎರಡೂ ಸಂಗೀತಗಳು ಭಾರತದ ಕಣ್ಣುಗಳಿದ್ದಂತೆ ಎಂದು ಹೇಳಿದರು. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ಜತೆಗೆ ಸಂಸ್ಕಾರ ಕಲಿಸುತ್ತಾ ಬಂದಿರುವ ಆರ್‌.ಕೆ.ಪದ್ಮನಾಭ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಗೇ ವಿಶೇಷ ಗೌರವ ತಂದುಕೊಟ್ಟಿದೆ ಎಂದರು. ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ, ಸಂಗೀತ ಪೋಷಕ ಎಸ್‌.ಕೆ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ಹಣ ಹುಟ್ಟೂರ ಶಾಲೆಗೆ: ಪುಟ್ಟರಾಜ ಸನ್ಮಾನ-2018ರ ಒಂದು ಲಕ್ಷ ರೂ. ಪ್ರಶಸ್ತಿ ಹಣವನ್ನು ವಿದ್ವಾನ್‌ ಆರ್‌.ಕೆ.ಪದ್ಮನಾಭ ಅವರು ತಮ್ಮ ಹುಟ್ಟೂರು ರುದ್ರಪಟ್ಟಣದ ಪ್ರೌಢಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ನೀಡುವುದಾಗಿ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next