ಬೆಂಗಳೂರು: ವಿವಾದಿತ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಬಾಬಾ ಬುಡನ್ ಗಿರಿಯಲ್ಲಿ ದೈನಂದಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಸ್ಲಿಂ ಮುಜಾವರ್ ನೇಮಕ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಎತ್ತಿಹಿಡಿದಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಹಿಂದೂ-ಮುಸ್ಲಿಂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಧಾರ್ಮಿಕ ಆಚರಣೆಗಳನ್ನು ನೆರವೇರಿಸುವ ಚಾಲ್ತಿಯಲ್ಲಿರುವ ವ್ಯವಸ್ಥೆಗೆ “ತಥಾಸ್ತು’ ಎಂದಿದೆ.
ಬಾಬಾ ಬುಡನ್‌ಗಿರಿ ದತ್ತಪೀಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಸ್ಲಿಂ ಮುಜಾವರ್ ನೇಮಕ ಮಾಡಿರುವುದನ್ನು ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಷಾ ಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ಸೋಮವಾರ ಪ್ರಕಟಿಸಿರುವ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾ. ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಬಾಬಾ ಬುಡನ್‌ಗಿರಿ ದತ್ತಪೀಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಸ್ಲಿಂ ಮುಜಾವರ್ ನೇಮಕ ಮಾಡಿ 2018ರ ಮಾ.19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ 2021ರ ಸೆ.28ರಂದು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಎತ್ತಿಹಿಡಿದರು ವಿಭಾಗೀಯ ನ್ಯಾಯಪೀಠ ಷಾ ಖಾದ್ರಿ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೇ ವಿವಾದದ ಆನಂತರದ ಬೆಳವಣಿಗೆಗಳಲ್ಲಿ 2022ರ ಜು.19ರಂದು ರಾಜ್ಯ ಸರ್ಕಾರ ಎರಡೂ ಧರ್ಮದ ಪ್ರತಿನಿಧಿಗಳನ್ನೊಳಗೊಂಡ ತಂಡ ರಚಿಸಿದೆ. ಅದರಂತೆ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ದೈನಂದಿನ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
Related Articles
2022ರ ನ.18ರಂದು ಎಲ್ಲಾ ಧರ್ಮದ ಪ್ರತಿನಿಧಿಗಳನ್ನೊಳಗೊಂಡ ನಿರ್ವಹಣಾ ಸಮಿತಿಯನ್ನು ಸರ್ಕಾರ ರಚಿಸಿದೆ. ಮುಖ್ಯವಾಗಿ ಸಚಿವ ಸಂಪುಟದ ಉಪಸಮಿತಿಯ ಶಿಫಾರಸಿನಂತೆ ಮುಜರಾಯಿ ಆಯುಕ್ತರು ಪ್ರತ್ಯೇಕವಾಗಿ ಅರ್ಚಕ ಮತ್ತು ಪುರೋಹಿತರನ್ನು ನೇಮಕ ಮಾಡಿದ್ದಾರೆ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ಎರಡೂ ಧರ್ಮದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ವ್ಯವಸ್ಥೆ ಸದ್ಯ ಚಾಲ್ತಿಯಲ್ಲಿದ್ದು, ಅದಕ್ಕೆ ಸಮ್ಮತಿ ಸೂಚಿಸಿದೆ.
ವಿವಾದ ಸುಖಾಂತ್ಯಗೊಳ್ಳಬೇಕು: ಹೈಕೋರ್ಟ್ ಆಶಯ
ಎಲ್ಲ ಧರ್ಮ, ಲಿಂಗ, ಜಾತಿ, ಮೇಲು, ಕೀಳುಗಳನ್ನೆಲ್ಲಾ ತೊಡೆದುಹಾಕಿ ಸಮಾಜ ಸಮಾಜ ನಿರ್ಮಾಣವೇ ಸಂವಿಧಾನದ ಹೆಗ್ಗುರುತು ಆಗಿದೆ. ಸಂವಿಧಾನದ ಕಲಂ 25ರಿಂದ 30ನ್ನು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಬಹಳ ಸೂಕ್ಷ್ಮತೆಯಿಂದ ನಡೆದುಕೊಂಡಿದೆ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೇ ಕೋರ್ಟ್ ಆದೇಶದ ನಂತರದ ಕ್ರಮಗಳು ಏಕಪಕ್ಷೀಯ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಯಾವುದೇ ಸಮಾಜದವರು ಆಕ್ಷೇಪ ಎತ್ತಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ತಮ್ಮ ನಡವಳಿಕೆಯಿಂದ ಧಾರ್ಮಿಕ ಸಂಸ್ಥೆಗಳನ್ನು ಪ್ರಜಾಪ್ರಭುತ್ವದ “ಉಜ್ವಲ ಉದಾಹರಣೆ’ಯನ್ನಾಗಿ ಮಾಡಿದ್ದಾರೆ. ಕೋರ್ಟ್ ಸಹ ಧಾರ್ಮಿಕ ಕೇಂದ್ರಗಳ ಸಂಪ್ರದಾಯ ಮತ್ತು ವಿಧಿ ವಿಧಾನಗಳ ಬಗ್ಗೆ ಜಾಗರೂಕವಾಗಿರುತ್ತದೆ. ಹಾಗಾಗಿ ಸಾಮಾನ್ಯವಾಗಿ ನ್ಯಾಯಾಲಯಗಳು ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಅದರಲ್ಲೂ ವಿಶೇಷವಾಗಿ ಭಕ್ತಾಧಿಗಳ ನಡುವಿನ ಮೂಲಭೂತ ಹಕ್ಕುಗಳ ವಿಷಯ ವಿಚಾರದಲ್ಲಿ. ಹಾಗಾಗಿ ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಐದು ದಶಕಗಳ ಹಿಂದೆ ಉಂಟಾಗಿರುವ ವಿವಾದ ಉಭಯ ಧರ್ಮದವರ ನಡುವೆ ಯಾವುದೇ ವಿವಾದಗಳಿಲ್ಲಿದೆ ಸುಖಾಂತ್ಯ ಕಾಣಬೇಕಿದೆ ಎಂದು ಆಶಯ ವ್ಯಕ್ತಪಡಿಸಿದೆ.