Advertisement

ಅಮಿತಾ ಪ್ರಸಾದ್‌, ವಿಜಯಭಾಸ್ಕರ್‌, ರಮಣರೆಡ್ಡಿ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

10:15 PM May 30, 2022 | Team Udayavani |

ಬೆಂಗಳೂರು: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅನುದಾನವನ್ನು ನಕಲಿ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ ಎಸಿಬಿ ವಿಶೇಷ ನ್ಯಾಯಾಲಯದ ಅದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಪ್ರಕರಣ ಸಂಬಂಧ ತಮ್ಮ ವಿರುದ್ಧ ತನಿಖೆಗೆ ಆದೇಶಿಸಿರುವ ಎಸಿಬಿ ಕೋರ್ಟ್‌ ಆದೇಶ ರದ್ದುಪಡಿಸುವಂತೆ ಕೋರಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ನಿವೃತ್ತ ಐಎಎಸ್‌ ಅಧಿಕಾರಿಗಳಾದ ಅಮಿತಾ ಪ್ರಸಾದ್‌, ಟಿ.ಎಂ. ವಿಜಯ್‌ ಭಾಸ್ಕರ್‌, ಕೈಗಾರಿಕಾ ಇಲಾಖೆ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಸಿಬಿ ತನಿಖೆ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿತು.

ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಹಲಸೂರು ಗೇಟ್‌ ಪೊಲೀಸರು, ಎಸಿಬಿ ಮತ್ತು ಖಾಸಗಿ ದೂರುದಾರ ಎಸ್‌. ನಾರಾಯಣಸ್ವಾಮಿ ಅವರಿಗೆ ನ್ಯಾಯಪೀಠ ತುರ್ತು ನೋಟಿಸ್‌ ಜಾರಿಗೊಳಿಸಿತು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ರಾಜ್ಯ ಜಲ ಮತ್ತು ನೈರ್ಮಲ್ಯ ಮಿಷನ್‌ ಯೋಜನೆಯಡಿ ಮಂಜೂರಾಗಿದ್ದ ಹಣವನ್ನು 2011ರಿಂದ 2015ರ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಅಮಿತಾ ಪ್ರಸಾದ್‌, ಟಿ.ಎಂ.ವಿಜಯಭಾಸ್ಕರ್‌, ಡಾ.ಇ.ವಿ.ರಮಣರೆಡ್ಡಿ ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ. ನೂರಾರು ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಆದೇಶಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಸ್‌.ನಾರಾಯಣ ಸ್ವಾಮಿ ಎಸಿಬಿ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು.

ಅಮಿತಾ ಪ್ರಸಾದ್‌ ಅವರು 104 ಬ್ಯಾಂಕ್‌ ಖಾತೆ ತೆರೆಯಲು ಅಕ್ರಮವಾಗಿ ಆದೇಶಿಸಿದ್ದರು. ಡಾ.ಇ.ವಿ. ರಮಣ ರೆಡ್ಡಿ ಅವರು ನಕಲಿ ಖಾತೆಗಳಿಗೆ ಖಜಾನೆಯಿಂದ 272 ಕೋಟಿ ಹಣ ವರ್ಗಾಯಿಸಲು ಆದೇಶಿಸಿದ್ದರು. ಟಿ.ಎಂ. ವಿಜಯ ಭಾಸ್ಕರ್‌ ಅವರು, ಹೆಚ್ಚುವರಿ ವಿನಿಯೋಗ ಪ್ರಮಾಣ ಪತ್ರಗಳಿಗೆ ಸಹಿ ಹಾಕಿ ಕೇಂದ್ರ ಸರ್ಕಾರವನ್ನು ಹಾದಿತಪ್ಪಿಸಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದರು.

Advertisement

ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಎಸಿಬಿ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಎಸಿಬಿ ವಿಶೇಷ ಕೋರ್ಟ್‌ 2022ರ ಏ.18ರಂದು ಆದೇಶಿಸಿತ್ತು.

ಈ ಆದೇಶ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ಖಾಸಗಿ ದೂರು ಸಲ್ಲಿಸಲಾಗಿದೆ. ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ.

ಇದೇ ಪ್ರಕರಣ ಸಂಬಂಧ ಹಲಸೂರು ಠಾಣಾ ಪೊಲೀಸರು ಎರಡು ಬಾರಿ ತನಿಖೆ ನಡೆಸಿದ್ದಾರೆ. ಆರ್‌ಡಿಪಿಆರ್‌ ಕಾರ್ಯದರ್ಶಿ ಡಾ.ಬೋರೇಗೌಡ, ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿ ರಾಮಕೃಷ್ಣ, ರಾಷ್ಟ್ರೀಕೃತ ಬ್ಯಾಂಕ್‌ವೊಂದರ ವ್ಯವಸ್ಥಾಪಕ ಸೀಲಂ ಗಿರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಆ ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next