Advertisement

ಮಂತ್ರಿಗಿರಿಗೆ ಮುಹೂರ್ತ

12:24 AM Aug 04, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿದ್ದು, ಬುಧವಾರ ಅಪರಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

Advertisement

ಈ ಬಗ್ಗೆ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಗೆ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ನೂತನ ಸಚಿವರಾಗುವ ಶಾಸಕರಿಗೆ ಮಾಹಿತಿ ರವಾನೆಯಾಗಿದೆ ಎನ್ನಲಾಗುತ್ತಿದೆ. 20ರಿಂದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಅಳೆದು ತೂಗಿ ಜಾತಿ ಮತ್ತು ಪ್ರಾದೇಶಿಕತೆ ಆಧಾರದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಅಶೋಕ್‌ಗೆ ಸ್ಥಾನ? :

ಹಾಲಿ ಸರಕಾರದಲ್ಲಿ ಎಷ್ಟು ಮಂದಿಯನ್ನು ಡಿಸಿಎಂಗಳನ್ನಾಗಿ ನೇಮಕ ಮಾಡಬೇಕೆಂಬ ಗೊಂದಲ ವರಿಷ್ಠರಲ್ಲಿ ಮೂಡಿತ್ತು. ಜಾತಿ ಲೆಕ್ಕಾಚಾರದಲ್ಲಿ ಯಾರಿಗೆ ಅವಕಾಶ ಕೊಟ್ಟರೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅನುಕೂಲ ಎನ್ನುವ ಬಗ್ಗೆ ಗೊಂದಲ ಉಂಟಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆರ್‌. ಅಶೋಕ್‌ ಅವರನ್ನು ಡಿಸಿಎಂ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸಕ್ತಿ ವಹಿಸಿದ್ದಾರೆ ಎನ್ನಲಾಗುತ್ತಿದೆ. ಆಗ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವರಿಗೆ ಅವಕಾಶ ನೀಡದಿದ್ದರೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ ಎಂಬ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಎಲ್ಲ ಹಿರಿಯರನ್ನು ಸಂಪುಟದಿಂದ ಹೊರಗಿಟ್ಟರೆ ಸರಕಾರವನ್ನು ಸಮರ್ಥಿಸಿ ಕೊಳ್ಳುವುದು ಕಷ್ಟವಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೆಲವು ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು. ಹೀಗೆ ಹಿರಿಯರು ಮತ್ತು ಹೊಸಬರ ಮಿಶ್ರಣವಾಗಿ  ಸಂಪುಟ ರಚನೆಯಾಗಲಿದೆ ಎನ್ನಲಾಗಿದೆ.

Advertisement

ಇಂದು ಅಂತಿಮ ಪಟ್ಟಿ : ಬೊಮ್ಮಾಯಿ :

ನೂತನ ಸಚಿವರ ಪಟ್ಟಿ ಬುಧವಾರ ಬೆಳಗ್ಗೆ ಅಂತಿಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜೆ.ಪಿ. ನಡ್ಡಾ ಭೇಟಿಯ ಬಳಿಕ ಮಂಗಳವಾರ ತಡರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು- ಮೂರು ವಿಚಾರಗಳ ಬಗ್ಗೆ ಬುಧವಾರ ಚರ್ಚೆ ನಡೆಯಲಿದೆ. ಬೆಳಿಗ್ಗೆಯೇ ಸ್ಪಷ್ಟ ಸೂಚನೆ ಸಿಕ್ಕರೆ ಮಧ್ಯಾಹ್ನ ಪ್ರಮಾಣ ವಚನ ನಡೆಯುವ ಸಾಧ್ಯತೆ ಇದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ನಮ್ಮ ಜತೆ ಬಂದಿರುವವರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.

ಡಿಸಿಎಂಗಳ ಬಗ್ಗೆ ಎರಡು ಅಭಿಪ್ರಾಯ ಇರುವುದು ನಿಜ. ಅಂತಿಮ ತೀರ್ಮಾನ ವರಿಷ್ಠರದು. ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದರು.

ಗೊಂದಲಕ್ಕೆ  ಕಾರಣ  ಡಿಸಿಎಂ ಪಟ್ಟ  :

ಸಿಎಂ ಬೊಮ್ಮಾಯಿ ಮಂಗಳವಾರ ಸಂಜೆವರೆಗೂ ವರಿಷ್ಠರ ಜತೆ ಹಲವು ಬಾರಿ ಚರ್ಚಿಸಿದ್ದಾರೆ. ಯಾರಿಗೆ ಡಿಸಿಎಂ ಪಟ್ಟ ಕಟ್ಟಬೇಕು, ಆ ಹುದ್ದೆಯೇ ಬೇಡವೇ, ಹಿರಿಯರಲ್ಲಿ ಯಾರನ್ನು ಕೈಬಿಡಬೇಕು, ಬಿಎಸ್‌ವೈ ಬಣದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು, ವಲಸಿಗರಲ್ಲಿ ಯಾರಿಗೆ ಅವಕಾಶ ಎಂಬ ಬಗ್ಗೆ ಗೊಂದಲಗಳು ಮುಂದುವರಿದಿದ್ದವು.

ರಾಜ್ಯ ರಾಜಕಾರಣದ ಜಾತಿ ಲೆಕ್ಕಾಚಾರದಲ್ಲಿ ದಲಿತ, ಒಕ್ಕಲಿಗ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ನಾಯಕರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬುದು ವರಿಷ್ಠರ ಚಿಂತನೆ ಎನ್ನಲಾಗಿದೆ.

ಅಮಿತ್‌ ಶಾ ಭೇಟಿ :

ಸೋಮವಾರ ಒಂದು ಸುತ್ತಿನ ಮಾತುಕತೆ ನಡೆಸಿದ್ದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರವೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ, ಡಿಸಿಎಂ ಹುದ್ದೆ ಮತ್ತು ಸಂಪುಟದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಯಾಣ 2 ಬಾರಿ ಮುಂದೂಡಿಕೆ :

ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದ ಬಳಿಕ ಸಿಎಂ ಬೊಮ್ಮಾಯಿ ಅವರು ಮಂಗಳವಾರ ರಾತ್ರಿ 7.50ಕ್ಕೆ ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಲು ವಿಮಾನದ ಟಿಕೆಟ್‌ ಕೂಡ ಕಾಯ್ದಿರಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಲು ತೆರಳಿದ್ದರಿಂದ ವಿಮಾನ ತಪ್ಪಿಸಿಕೊಂಡರು. ಜೆ.ಪಿ. ನಡ್ಡಾ ಭೇಟಿಯ ಅನಂತರ ರಾತ್ರಿ 9.15ಕ್ಕೆ ಮತ್ತೆ ಟಿಕೆಟ್‌ ಸಿದ್ಧವಾಗಿತ್ತು. ಆದರೆ ನಡ್ಡಾ ಜತೆಗಿನ ಚರ್ಚೆ ವಿಳಂಬವಾಗಿ ಮತ್ತೆ ವಿಮಾನ ತಪ್ಪಿತು.

ಸಂಪುಟ ಸೇರಲು ನಿಲ್ಲದ ಒತ್ತಡ :

ಬೆಂಗಳೂರು: ಸಿಎಂ ಬೊಮ್ಮಾಯಿ ದಿಲ್ಲಿಯಲ್ಲಿ ಸಂಪುಟ ರಚನೆಯ ಕಸರತ್ತು ಮುಂದುವರಿಸಿದ್ದರೆ, ರಾಜ್ಯದಲ್ಲಿ ಆಕಾಂಕ್ಷಿ ಶಾಸಕರು ವಿವಿಧ ಮೂಲಗಳಿಂದ ವರಿಷ್ಠರು ಮತ್ತು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ತಂತ್ರ ಮುಂದುವರೆಸಿದ್ದಾರೆ.

ಬಿ.ವೈ. ವಿಜಯೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವಂತೆ ಯಡಿಯೂರಪ್ಪ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪಂಚಪೀಠಾ ಧೀಶರಲ್ಲಿ ಒಬ್ಬರಾಗಿರುವ ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೂಡ ಆರೆಸ್ಸೆಸ್‌ ನಾಯಕರ ಮೂಲಕ ಸಂಪುಟ ಸೇರ್ಪಡೆಗೆ ಒತ್ತಡ ಮುಂದುವರಿಸಿದ್ದಾರೆ ಎನ್ನಲಾಗಿದ್ದು, ಮಂಗಳವಾರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಹುಕ್ಕೇರಿ ಶಾಸಕ ಉಮೇಶ್‌ ಕತ್ತಿ ಬೆಂಗಳೂರಿಗೆ ಆಗಮಿಸಿದ್ದು, ಬೊಮ್ಮಾಯಿ ಸಂಪುಟದಲ್ಲಿ ತಾವು ಸಚಿವರಾಗುವುದು ಖಚಿತ ಎಂದಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಸಂಜೆ ಸಚಿವ ಸಂಪುಟ ರಚನೆಯಾಗುವ ನಿರೀಕ್ಷೆ ಇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next