Advertisement

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರಕಾರ ಪ್ರಯತ್ನ ನಡೆಸಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಗೋಹತ್ಯೆ ಮಾಡುವವರಿಗೆ 10 ವರ್ಷ ಜೈಲು, 5 ಲಕ್ಷ ರೂ. ದಂಡ ವಿಧಿಸಲು ಮುಂದಾಗಿದೆ.

Advertisement

ರಾಜ್ಯದಲ್ಲಿ ಸದ್ಯ 1964ರ ಗೋ ಹತ್ಯೆ ನಿಷೇಧ ಮತ್ತು ಗೋಸಂರಕ್ಷಣ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಯ ಪ್ರಕಾರ ಅಕ್ರಮ ಗೋ ಹತ್ಯೆಗೆ 6 ತಿಂಗಳು ಜೈಲು ಮತ್ತು 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕಾಯ್ದೆಯಡಿ 12 ವರ್ಷ ದೊಳಗಿನ ಗೋವುಗಳ ಹತ್ಯೆ ನಿಷೇಧಿಸಲಾಗಿದ್ದು, ವಯ ಸ್ಸಾ ದ, ನಿರುಪಯುಕ್ತ ಗೋವುಗಳ ಹತ್ಯೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

2010ರಲ್ಲಿ ಪ್ರಯತ್ನ
ಈಗಿರುವ ಗೋಹತ್ಯೆ ಕಾಯ್ದೆಗೆ 2010ರಲ್ಲಿ ಅಂದಿನ ಬಿಜೆಪಿ ಸರಕಾರ ತಿದ್ದುಪಡಿ ತಂದು ಕಠಿನ ನಿಯಮಗಳನ್ನು ರೂಪಿಸಿತ್ತು. ಗೋಹತ್ಯೆ ಮತ್ತು ಕಳ್ಳ ಸಾಗಣೆ ಮಾಡುವವರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿತ್ತು.
ಅಂದಿನ ತಿದ್ದುಪಡಿಯನ್ನು ರಾಜ್ಯಪಾಲರ ಮೂಲಕ ರಾಷ್ಟ್ರ ಪತಿಗೆ ಕಳುಹಿಸಲಾಗಿತ್ತು. ಆದರೆ ಒಪ್ಪಿಗೆ ದೊರೆತಿರಲಿಲ್ಲ. ಅನಂತರ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರ 1964ರ ಹಳೆಯ ಕಾಯ್ದೆಯನ್ನೇ ಮುಂದುವರಿಸುವ ತೀರ್ಮಾನ ತೆಗೆದುಕೊಂಡಿತ್ತು.

ಉತ್ತರಪ್ರದೇಶ ಮಾದರಿ
ರಾಜ್ಯ ಸರಕಾರವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲು ಉತ್ತರ ಪ್ರದೇಶ ಮತ್ತು ಗುಜರಾತ್‌ ಮಾದರಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಹಸು, ಎಮ್ಮೆ, ಎತ್ತು, ಕರುಗಳನ್ನು ಹತ್ಯೆ ಮಾಡದಂತೆ ತಿದ್ದುಪಡಿ ಕಾಯ್ದೆಯಲ್ಲಿ ನಿರ್ಬಂಧ ಹೇರಲು ನಿರ್ಧರಿಸಿದೆ. ಗೋಹತ್ಯೆ ಮತ್ತು ಅಕ್ರಮವಾಗಿ ಸಾಗಾಟ ಮಾಡುವುದನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸ ಲಾಗುತ್ತದೆ. ತಪ್ಪಿತಸ್ಥರಿಗೆ ಕನಿಷ್ಠ 10 ವರ್ಷ ಶಿಕ್ಷೆ, 5 ಲಕ್ಷ ರೂ.ವರೆಗೆ ದಂಡ ವಿಧಿಸುವುದನ್ನು ಕಾಯ್ದೆಯಲ್ಲಿ ಅಳವಡಿಸಲು ಮುಂದಾಗಿದೆ. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕಾಯ್ದೆಗಳ ಅಂಶಗಳು, ಅವುಗಳ ಯಶಸ್ವಿ ಅನುಷ್ಠಾನದ ಮಾಹಿತಿ ಪಡೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಕುರಿ, ಮೇಕೆ, ಹಂದಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ
ದನ ಮತ್ತು ಎಮ್ಮೆಗಳ ಮಾಂಸದ ಬದಲಿಗೆ ಕುರಿ, ಮೇಕೆ ಮಾಂಸದ ಉತ್ಪಾದನೆಗೆ ಆದ್ಯತೆ ನೀಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಕುರಿ, ಮೇಕೆ ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಬಗ್ಗೆ ಆಲೋಚನೆ ನಡೆಸಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next