Advertisement

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

01:06 AM May 31, 2023 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸುವ ಕುರಿತು ಸರಕಾರ ಕಾರ್ಯ ತತ್ಪರವಾಗಿದೆ. ಯೋಜನೆ ಜಾರಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸಹೋ ದ್ಯೋಗಿ ಗಳ ಜತೆಗೆ ಬುಧವಾರ ಮಹತ್ವದ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರಕವಾಗಿ “ಗ್ಯಾರಂಟಿ ಇಲಾಖೆ’ಗಳ ಸಚಿವರು ಅಧಿಕಾರಿಗಳ ಸಭೆ ನಡೆಸಿದ್ದು, ಆರ್ಥಿಕ ಹೊರೆಯ ಬಗ್ಗೆ ವಿಶ್ಲೇಷಣೆ ಕೈಗೊಂಡಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಸಚಿವ ಸಂಪುಟದ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ. ಜೂ. 1ರಂದು ನಡೆಯುವ ಸಚಿವ ಸಂಪುಟ ಸಭೆ ಯಲ್ಲಿ ಗ್ಯಾರಂಟಿಗಳ ಜಾರಿ ಬಗ್ಗೆ ಘೋಷಣೆ ಮಾಡಲೇ  ಬೇಕಿರುವುದರಿಂದ ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಗ್ಯಾರಂಟಿ ಜಾರಿ ವಿಳಂಬ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ವರಿಷ್ಠರೂ ಸಲಹೆ ನೀಡಿದ್ದರಿಂದ ಆದಷ್ಟು ಬೇಗ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ.

ಗ್ಯಾರಂಟಿ ಜಾರಿಗೆ ಸಂಬಂಧಪಟ್ಟಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ, ಇಂಧನ ಸಚಿವ ಕೆ.ಜೆ. ಜಾರ್ಜ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಇಲಾಖೆಯ ಅಧಿಕಾರಿಗಳ ಜತೆಗೆ ಮಂಗಳವಾರ ಮಹತ್ವದ ಸಭೆ ನಡೆಸಿದ್ದು, ಇಲಾಖೆಯ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಹೆಚ್ಚುವರಿ ಅಕ್ಕಿಗೆ ಕೇಂದ್ರಕ್ಕೆ ಮನವಿ
ಅನ್ನಭಾಗ್ಯ ಯೋಜನೆ ಅಡಿ 10 ಕೆ.ಜಿ. ಅಕ್ಕಿ ನೀಡುವ ರಾಜ್ಯ ಸರಕಾರದ ಭರವಸೆ ಜಾರಿಗೆ ಸಂಬಂಧಪಟ್ಟಂತೆ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಜತೆಗೆ ಸಚಿವ ಕೆ.ಎಚ್‌. ಮುನಿಯಪ್ಪ ಸಭೆ ನಡೆಸಿದ್ದು, ಹೆಚ್ಚುವರಿ ಅಕ್ಕಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.

10 ಕೆ.ಜಿ. ಅಕ್ಕಿ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ?
ಸರಕಾರದ ಉನ್ನತ ಮೂಲಗಳ ಪ್ರಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸ ಲಾಗಿದೆ. ಇದಕ್ಕಾಗಿ ವಾರ್ಷಿಕ 8,914.32 ಕೋಟಿ ರೂ.ಗಳನ್ನು ಸರಕಾರ ವಿನಿ ಯೋಗಿಸ ಬೇಕಾಗುತ್ತದೆ. ಅಂತ್ಯೋದಯ ಹಾಗೂ ಬಿಪಿಎಲ್‌ ಸೇರಿ ದಂತೆ ಒಟ್ಟು 1,31,70,600 ಕಾರ್ಡ್‌ಗಳಿವೆ, 4,36,97,568 ಫ‌ಲಾನು ಭವಿ ಗಳಿದ್ದಾರೆ. ಈಗ 2,18,487 ಮೆಟ್ರಿಕ್‌ ಟನ್‌ ಅಕ್ಕಿ ವಿತರಣೆಯಾಗುತ್ತಿದೆ.
10 ಕೆ.ಜಿ. ಅಕ್ಕಿ ಯೋಜನೆ ಜಾರಿಯಾದರೆ ಈ ಪ್ರಮಾಣ ದ್ವಿಗುಣವಾಗುತ್ತದೆ.

Advertisement

ಎಲ್ಲ ಮಹಿಳೆಯರಿಗೂ ಉಚಿತ
ಸಾರಿಗೆ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುತ್ತೇವೆ ಎಂದು ಹಿಂದೆಯೇ ಹೇಳಿದ್ದೇವೆ. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಎಲ್ಲ ಮಹಿಳೆಯರಿಗೆ ಷರತ್ತಿಲ್ಲದೆ ಇದನ್ನು ಒದಗಿಸುತ್ತೇವೆ. ಪ್ರಣಾಳಿಕೆಯಲ್ಲಿ ಬಿಪಿಎಲ್‌, ಎಪಿಎಲ್‌ ಎಂದು ಹೇಳಿಲ್ಲ. ಸಿಎಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದರಿಂದ ಇಲಾಖೆಯ ದೈನಂದಿನ ಆದಾಯ 23 ಕೋಟಿ ರೂ. ಪೈಕಿ ಅರ್ಧದಷ್ಟು ಕಡಿಮೆಯಾಗಬಹುದು. ಸಾರಿಗೆ ಸಂಸ್ಥೆಗಳ ದೈನಂದಿನ ಡೀಸೆಲ್‌ ಬಿಲ್‌ಗೆ 15 ಕೋಟಿ ರೂ. ವೆಚ್ಚ ಮಾಡುತ್ತೇವೆ. ಉಚಿತ ಪ್ರಯಾಣದಿಂದ ಹೊರೆಯಾಗುವ ಮೊತ್ತವನ್ನು ಭರಿಸುವಂತೆ ಸರಕಾರದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.

ಅತ್ತೆಯೇ “ಗೃಹಲಕ್ಷ್ಮೀ’ ಅವರಿಗೇ 2 ಸಾವಿರ ರೂ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಮಂಗಳವಾರ ಬೆಳಗಾವಿಯಲ್ಲಿ ಮಾತನಾಡಿ, ಗ್ಯಾರಂಟಿ ಜಾರಿಯಲ್ಲಿ ಗೊಂದಲ ಇಲ್ಲ. ಯೋಜನೆಗಳ ಅನುಷ್ಠಾನ ಸಂಬಂಧ ಸಿಎಂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಬುಧವಾರದ ವೇಳೆಗೆ ಎಲ್ಲವೂ ಸ್ಪಷ್ಟವಾಗಲಿದೆ ಎಂದಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ನೆರವನ್ನು ಒಂದು ಮನೆಯಲ್ಲಿ ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಅತ್ತೆಗೆ ಪ್ರಾಧಾನ್ಯ ನೀಡಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅತ್ತೆಯೇ ಮನೆಯ ಯಜಮಾನಿ. ಹಾಗಾಗಿ ಈ ನೆರವು ಅತ್ತೆಗೆ ಸಿಗುತ್ತದೆ ಎಂದರು.

ಅಧಿಕಾರಿಗಳ ಸಭೆ ನಡೆಸಿದ ಜಾರ್ಜ್‌
ಇಂಧನ ಸಚಿವ ಕೆ.ಜೆ. ಜಾರ್ಜ್‌ ತಮ್ಮ ಇಲಾಖೆಯ ಅಧಿಕಾರಿಗಳ ಜತೆ ಮೊದಲ ಸಭೆ ನಡೆಸಿದರು. ಪ್ರತೀ ಕುಟುಂಬಕ್ಕೆ 200 ಯೂನಿಟ್‌ ಉಚಿತ ವಿದ್ಯುತ್‌ ಪೂರೈಸುವುದು ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಇದರ ಅನುಷ್ಠಾನ ಸಾಧಕ-ಬಾಧಕದ ಬಗ್ಗೆ ಮಾಹಿತಿ ಪಡೆದರು. ಇದರಿಂದ ಎಷ್ಟು ಆರ್ಥಿಕ ಹೊರೆ ಬೀಳಲಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next