ಬೆಂಗಳೂರು: ದೇಶದ ಎಲ್ಲ ರಾಜ್ಯಗಳ ಪೊಲೀಸರಿಗೆ ಅನ್ವಯವಾಗುವಂತೆ ಕೇಂದ್ರ ಸರಕಾರ ಶಿಫಾರಸು ಮಾಡಿದ್ದ “ಒನ್ ನೇಶನ್, ಒನ್ ಯುನಿಫಾರ್ಮ್’ ವ್ಯವಸ್ಥೆಯ ಜಾರಿಗೆ ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಈ ಸಂಬಂಧ ಒಳಾಡಳಿತ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಪ್ಪಿಗೆ ಸೂಚಿಸಿದ್ದಾರೆ. ದೇಶದ ಪೊಲೀಸ್ ವ್ಯವಸ್ಥೆ ಏಕರೂಪವಾಗಿರಬೇಕೆಂದು ಪ್ರಧಾನಿ ಮೋದಿ ಇತ್ತೀಚೆಗೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು.
ಹೊಸ ಸಮವಸ್ತ್ರ ಹೇಗೆ ಇರಲಿದೆ?
ಈ ಪ್ರಸ್ತಾಪ ಅಂಗೀಕರಿಸಿದರೆ ಕಾನೂನು-ಸುವ್ಯವಸ್ಥೆಯ ಪೊಲೀಸರು ಖಾಕಿ ಸಮವಸ್ತ್ರ, ಖಾಕಿ ಟೋಪಿ, ಕಪ್ಪು ಬಣ್ಣದ ಶೂ, ಪೊಲೀಸ್ ಧ್ವಜ ಇರುವ ಕಪ್ಪು ಬಣ್ಣದ ಬೆಲ್ಟ್ ಧರಿಸಬೇಕಾಗುತ್ತದೆ. ಮಹಿಳಾ ಪೊಲೀಸರು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಖಾಕಿ ಸೀರೆಯನ್ನು ಧರಿಸುವುದಕ್ಕೆ ಅವಕಾಶವಿದೆ. ಸಂಚಾರ ಪೊಲೀಸರು ಬಿಳಿ ಶರ್ಟ್ ಹಾಗೂ ಖಾಕಿ ಪ್ಯಾಂಟ್, ಬಿಳಿ ಬಣ್ಣದ ಟೋಪಿ ಧರಿಸಬೇಕಾಗುತ್ತದೆ. ಎಎಸ್‌ಐ ದರ್ಜೆ ಸಿಬಂದಿ ಖಾಕಿ ಸಮವಸ್ತ್ರದ ಜತೆಗೆ ಪೀಕ್ ಕ್ಯಾಪ್, ಪಿಎಸ್‌ಐಗಳಿಗೂ ಇದೇ ಮಾದರಿ ಸಮವಸ್ತ್ರ ಇರುತ್ತದೆ.