ಪಣಜಿ: ಗೋವಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಮೂರು ಮೀನುಗಾರಿಕಾ ಬೋಟ್ ಗಳನ್ನು ಗೋವಾದ ಮೀನುಗಾರಿಕಾ ಇಲಾಖೆ ಸೋಮವಾರ ವಶಪಡಿಸಿಕೊಂಡಿದೆ. ಈ ಎಲ್ಲಾ ಮೂರು ಟ್ರಾಲರ್‍ಗಳನ್ನು ವಶಪಡಿಸಿಕೊಂಡು ಪಣಜಿ ಜೆಟ್ಟಿಗೆ ತರಲಾಗಿದೆ ಎಂದು ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ.
ಈ ಬೋಟುಗಳು ಮೂಲತಃ ಮಲ್ಪೆ (ಕರ್ನಾಟಕ)ದವರು. ಅವರು ಹಿಡಿಯುವ ಎಲ್ಲಾ ಮೀನುಗಳನ್ನು ಹರಾಜು ಮಾಡಲಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಸಚಿವ ಹರ್ಣಕರ್ ಪಣಜಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮ ಎಲ್ ಇಡಿ ಮೀನುಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದ ನಂತರ ಮೀನುಗಾರಿಕೆ ಇಲಾಖೆ ತೀವ್ರ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಮೀನುಗಾರರ ಖಾತೆ ಸಾಕಷ್ಟು ಕ್ರಿಯಾಶೀಲವಾಗಿದ್ದು, ಅಕ್ರಮ ಮೀನುಗಾರಿಕೆ ತಡೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಏತನ್ಮಧ್ಯೆ, ಎಲ್ಲಾ ಮೀನುಗಾರಿಕಾ ಜೆಟ್ಟಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಸಚಿವ ನೀಲಕಂಠ ಹರ್ಣಕರ್ ಕೆಲವು ದಿನಗಳ ಹಿಂದೆ ತಿಳಿಸಿದ್ದರು.
ರಾಜ್ಯದಲ್ಲಿ ಸುಸ್ಥಿರ ಮೀನುಗಾರಿಕೆಯನ್ನು ಉತ್ತೇಜಿಸುವ ಅವಶ್ಯಕತೆಯಿದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಎಲ್‍ಇಡಿ ಮೀನುಗಾರಿಕೆಯನ್ನು ನಿಲ್ಲಿಸಲಾಗುವುದು. ಇದಕ್ಕೆ ಸಿಸಿಟಿವಿ ಕ್ಯಾಮೆರಾಗಳು ಪ್ರಮುಖವಾಗಿದ್ದು, ವಾಸ್ಕೋದ ಖಾರಿವಾಡ ಜೆಟ್ಟಿಯಲ್ಲಿ ಕಾಮಗಾರಿ ಆರಂಭವಾಗಿದೆ. ರಾಜ್ಯದ ಇತರೆ ಜೆಟ್ಟಿಗಳ ಕಾಮಗಾರಿಯೂ ಶೀಘ್ರದಲ್ಲೇ ಆರಂಭವಾಗಲಿದೆ. ಜೆಟ್ಟಿಯಲ್ಲಿ ಎಲ್‍ಇಡಿ ಮೀನುಗಾರಿಕೆ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬಂದರೆ, ಆ ಜೆಟ್ಟಿಯಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ನೀಲಕಂಠ ಹಳರ್ಣಕರ್ ಹೇಳಿದರು.
ಇದನ್ನೂ ಓದಿ : ಮೊರ್ಬಿ ಸೇತುವೆ ದುರಂತ- ಜಾಣತನ ಪ್ರದರ್ಶಿಸಬೇಡಿ;ಅಧಿಕಾರಿಗಳಿಗೆ ಗುಜರಾತ್ ಹೈಕೋರ್ಟ್ ತರಾಟೆ