ನವದೆಹಲಿ: ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿರುವ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಬುಧವಾರ (ಮಾರ್ಚ್ 29) ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.
ಇದನ್ನೂ ಓದಿ:ಮಂಗಳೂರು: ಇಬ್ಬರು ಬೈಕ್ ಕಳ್ಳರ ಬಂಧನ; ಕಳವುಗೈದ ಬೈಕ್ ನಲ್ಲಿ ತಿರುಗಾಡಿ ಸಿಕ್ಕಿಬಿದ್ದರು
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 10ರಂದು ಮತದಾನ , ಮೇ 13ರಂದು ಮತಎಣಿಕೆ ನಡೆಯಲಿದೆ.
ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಏ.21 ನಾಮಪತ್ರ ಪರಿಶೀಲನೆಗೆ ಕೊನೆ ದಿನ. ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ.
Related Articles
ಕರ್ನಾಟಕದಲ್ಲಿ ಈ ಬಾರಿ ಒಟ್ಟು 5.22 ಕೋಟಿ ಮತದಾರರು:
ಕರ್ನಾಟಕದಲ್ಲಿ ಈ ಬಾರಿ ಒಟ್ಟು 5.22 ಕೋಟಿ ಮತದಾರರಿದ್ದಾರೆ. ಇದರಲ್ಲಿ 2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ ಮತದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆ ಸ್ಥಾಪಿಸಲಾಗುವುದು. ನಗರಪ್ರದೇಶದಲ್ಲಿ 24,063 ಮತಗಟ್ಟೆ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಒಂದೊಂದು ಮತಗಟ್ಟೆಯಲ್ಲಿ 833 ಮತದಾರರು ಮತ ಚಲಾಯಿಸಬಹುದಾಗಿದೆ. 80 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗುವುದು.
ಕಳೆದ ಬಾರಿ ಬೆಂಗಳೂರಿನಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಮತದಾನ ಮಾಡಲು ಜಾಗೃತಿ ಮೂಡಿಸುವ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ಜೇನುಕುರುಬ, ಕಾಡುಕುರುಬ ಮತದಾರರಿಗೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ 224 ಸದಸ್ಯಬಲದ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 104 ಸ್ಥಾನ ಪಡೆದಿದ್ದು, ಕಾಂಗ್ರೆಸ್ 80 ಹಾಗೂ ಜೆಡಿಎಸ್ 37 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಪಕ್ಷೇತರ ಒಂದು ಸ್ಥಾನ ಹಾಗೂ ಬಹುಜನ ಸಮಾಜ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.
ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಪರಿಣಾಮ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಏರಿತ್ತು. ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಆದರೆ ಎರಡು ಪಕ್ಷಗಳ ನಡುವಿನ ಒಳಜಗಳದಿಂದಾಗಿ ಮೈತ್ರಿ ಸರ್ಕಾರ ಪತನಗೊಂಡಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಬಂಡಾಯ ಶಾಸಕರು ಬಿಜೆಪಿ ಜತೆ ಕೈಗೂಡಿಸಿದ್ದು, 2019ರ ಜುಲೈನಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಬಂಡಾಯ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ರಾಜಕೀಯ ಬೆಳವಣಿಗೆಯಲ್ಲಿ 2021ರ ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿತ್ತು.
ಪ್ರಸ್ತುತ ಬಿಜೆಪಿ 121 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 70, ಜೆಡಿಎಸ್ 30 ಶಾಸಕರ ಬಲ ಹೊಂದಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದರೆ, ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.