Advertisement

ಯಾರಿಗೆ ಮುಳ್ಳಾಗಬಹುದು ಮೀಸಲು ಬೇಡಿಕೆ?

11:56 PM Mar 12, 2023 | Team Udayavani |

ಬೆಂಗಳೂರು: ರಾಜ್ಯದ ಪ್ರಬಲ ಜನಸಮುದಾಯಗಳ ಮೀಸಲು ಬೇಡಿಕೆ ವಿಚಾರ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಸಂಕಟ ಎದುರಾಗುವಂತೆ ಮಾಡಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಈ ಹಿಂದೆ ಬಿಜೆಪಿ ಸಾಗಿದ ಹಳಿಯಲ್ಲೇ ಈ ವಿಚಾರವನ್ನು ಮುನ್ನಡೆಸಿದ್ದರಿಂದ “ಮೀಸಲು ವ್ಯಾಜ್ಯ’ ಈ ಚುನಾವಣೆಯಲ್ಲಿ ಯಾರ ಪರ ಮತವಾಗಿ ಪರಿವರ್ತನೆಯಾಗಬಹುದೆಂಬುದು ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ.

Advertisement

ಪಂಚಮಸಾಲಿ 2ಎ ಹೋರಾಟ, ಒಕ್ಕಲಿಗರ ಮೀಸಲು ಪ್ರಮಾಣ ಹೆಚ್ಚಳ ಬೇಡಿಕೆ, ನ್ಯಾ. ಸದಾಶಿವ ಆಯೋಗದ ಒಳಮೀಸಲು ಜಾರಿ, ಬಲಿಜ, ಮರಾಠರ 2ಎ ಬೇಡಿಕೆ ಹಾಗೂ ಎಸ್‌ಟಿಗೆ ಸೇರಿಸಬೇಕೆಂಬ ಕುರುಬ ಸಮುದಾಯದ ಹಕ್ಕೊತ್ತಾಯ ಪ್ರಸ್ತುತ ಚುನಾವಣಾ ಕಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಬಲಿಜ ಸಮುದಾಯ ಸೇರಿದಂತೆ ಇನ್ನಿತರ ಸಣ್ಣ ಸಣ್ಣ ಸಮುದಾಯಗಳೂ ಮೀಸಲು ಹೆಚ್ಚಳದ ಬೇಡಿಕೆ ಮುಂದಿಟ್ಟಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳೂ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಾಗಿದೆ. ತುಟಿ ಮೀರಿ ಆಡುವ ಮಾತುಗಳು ದುಬಾರಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಚೂಣಿ ನಾಯಕರು ಈ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೌನಕ್ಕೆ ಜಾರಿದ್ದಾರೆ.

ಉಪಸಮಿತಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೀಸಲು ಪ್ರಮಾಣವನ್ನು ಒಟ್ಟಾರೆಯಾಗಿ ಶೇ.7.5ರಷ್ಟು ಹೆಚ್ಚಳ (ಎಸ್‌ಸಿಗೆ ಶೇ.15ರಿಂದ 17, ಎಸ್‌ಟಿಗೆ ಶೇ. 3ರಿಂದ 7) ಮಾಡಿದ್ದು ಮಾತ್ರವಲ್ಲ, ಅದನ್ನು 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಕಳುಹಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದು, ಅದನ್ನು ಬಜೆಟ್‌ ಭಾಷಣದಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದ್ದಾರೆ. ಹೀಗಾಗಿ ವಿಚಾರದಲ್ಲಿ ರಾಜ್ಯ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ ಎಂದೇ ಹೇಳಬಹುದು.

ಆದರೆ ಇದರ ಮುಂದುವರಿದ ಭಾಗವಾಗಿರುವ ಸದಾಶಿವ ಆಯೋಗದ ವರದಿ ಆಧರಿಸಿ ದಲಿತ ಸಮುದಾಯ ಕೇಳುತ್ತಿರುವ ಒಳಮೀಸಲು ಬೇಡಿಕೆ ಇತ್ಯರ್ಥ ಮಾತ್ರ ಇನ್ನೂ ಕಬ್ಬಿಣದ ಕಡಲೆಯಾಗಿಯೇ ಇದೆ. ಈ ವಿಚಾರವನ್ನು ಕಾಂಗ್ರೆಸ್‌ ಬಹು ಎಚ್ಚರಿಕೆಯಿಂದ ಪರಿಗಣಿಸುತ್ತಿದೆ. ಏಕೆಂದರೆ 2008ರಲ್ಲಿ ಪ್ರಾರಂಭವಾದ ಒಳಮೀಸಲು ಬೇಡಿಕೆ 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರೆಯಲಾಗದ ಏಟು ನೀಡಿದೆ. 2018ರಲ್ಲಿ ಒಳಮೀಸಲು ಹೋರಾಟವನ್ನು ಪರೋಕ್ಷವಾಗಿ ಮುನ್ನಡೆಸಿದ್ದ ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಮೀಸಲು ಜಾರಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ ಅದು ಇನ್ನೂ ಜಾರಿಯಾಗದೇ ಇರುವುದು ಒಳಮೀಸಲು ಆಕಾಂಕ್ಷಿಗಳಾದ ಕೆಲ ದಲಿತ ಸಮುದಾಯಗಳಲ್ಲಿ ಬೇಸರ ಮೂಡಿಸಿದೆ.

ಸರ್ಕಾರ ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಪಟ್ಟಂತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧು­ಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಸಂಪುಟ ಉಪಸಮಿತಿ ರಚನೆ ಮಾಡಿದ್ದು, ವರದಿ ನಿರೀಕ್ಷೆ­ಯ­ಲ್ಲಿದೆ. ಆಯೋಗದ ವರದಿಯಲ್ಲಿ ಉಲ್ಲೇಖ­ವಾದ ಅಂಕಿ-ಸಂಖ್ಯೆಗಳು ಹಾಗೂ ಜನಗಣತಿ ವರದಿಯ ಅಂಶಗಳಿಗೂ ಹೊಂದಾಣಿಕೆಯಾಗದೇ ಇರುವುದರಿಂದ ಇನ್ನೊಂದಿಷ್ಟು ಅಧ್ಯಯನದ ಅಗತ್ಯವಿದೆ ಎಂದು ಸಮಿತಿ ಈಗಾಗಲೇ ಸಂಪುಟಕ್ಕೆ ಮಾಹಿತಿ ನೀಡಿದ್ದು, ಈ ತಿಂಗಳಾಂತ್ಯಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತದೆ.

Advertisement

ಕಗ್ಗಂಟಾದ ಪಂಚಮಸಾಲಿ: ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಪಂಚಮಸಾಲಿ 2ಎ ಮೀಸಲು ಹೋರಾಟ ಬಹುಚರ್ಚೆಯ ವಿಚಾರ. ಈ ಚುನಾವಣೆಯಲ್ಲಿ ಫ‌ಲಿತಾಂಶ ಬದಲಾಯಿಸುವ ಸಾಮರ್ಥ್ಯ ಇರುವ ಹೋರಾಟ ಇದೇ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸುವುದಕ್ಕೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಧ್ಯಂತರ ವರದಿಯನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. ಪಂಚಮಸಾಲಿಗಳಿಗೆ ಹಾಗೂ ಒಕ್ಕಲಿಗರಿಗೆ ಆಯೋಗ ಪ್ರತ್ಯೇಕ ಪ್ರವರ್ಗ (2ಸಿ ಹಾಗೂ 2ಡಿ) ಸೃಷ್ಟಿ ಮಾಡಿದೆಯಾದರೂ ಮೀಸಲು ನಿಗದಿ ಪ್ರಮಾಣದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಸಮುದಾಯದ ಆಕ್ಷೇಪವಾಗಿದೆ. ಈ ವಿಚಾರದಲ್ಲಿ ಸ್ಪಷ್ಟತೆ ನೀಡುವ ಹೋರಾಟದ ಮುಂಚೂಣಿಯಲ್ಲಿರುವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಈಗಾಗಲೇ ಆಗ್ರಹಿಸಿದ್ದಾರೆ. ಆದರೆ ಹೋರಾಟಕ್ಕೆ ರಾಜಕೀಯ ಶಕ್ತಿ ನೀಡಿದ್ದ ಬಿಜೆಪಿ ಶಾಸಕರೇ ಆದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಸಚಿವ ಮುರುಗೇಶ್‌ ನಿರಾಣಿ, ಸಿ.ಸಿ.ಪಾಟೀಲ್‌ ಮೊದಲಾದವರು ತಟಸ್ಥರಾಗು­ತ್ತಿರುವುದು ಹೋರಾಟದ ಮೊನಚನ್ನು ತುಸು ಕಡಿಮೆ ಮಾಡಿದೆ. ಕಾಂಗ್ರೆಸ್‌ನ ಒಂದು ವರ್ಗ ಪಂಚಮಸಾಲಿ ಮೀಸಲು ಹೋರಾಟವನ್ನು ಬಲವಾಗಿ ವಿರೋಧಿಸುತ್ತಿದೆ. ಹೀಗಾಗಿ ಪಂಚಮಸಾಲಿ ಸಮುದಾಯ ಈಗ ಗೊಂದಲಕ್ಕೆ ಸಿಲುಕಿದೆ. ಅವರ ರಾಜಕೀಯ ನಿಲುವು ಕೂಡಾ ಹೊಯ್ದಾಟಕ್ಕೆ ಒಳಗಾಗಿದೆ ಎಂದು ವ್ಯಾಖ್ಯಾನಿಸಬಹುದು.

ಪ್ರಖರವಲ್ಲ: ಇದರ ಜತೆಗೆ ಇಡಬ್ಲ್ಯುಎಸ್‌ನಲ್ಲಿ ಒಕ್ಕಲಿಗರಿಗೂ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದೆ. ಮೀಸಲು ಪ್ರಮಾಣ ಹೆಚ್ಚಳಕ್ಕೂ ಅದು ಒತ್ತಾಯಿಸಿದೆ. ಹಿಂದುಳಿದ ವರ್ಗಗಳ ಆಯೋಗ ಒಕ್ಕಲಿಗರಿಗೂ ಪ್ರತ್ಯೇಕ ಪ್ರವರ್ಗ ರಚನೆ ಮಾಡಿದೆ. ಆದರೆ ಒಕ್ಕಲಿಗರ ಮೀಸಲು ಹೋರಾಟ ಉಳಿದ ಸಮುದಾಯದಷ್ಟು ಪ್ರಖರವಾಗಿಲ್ಲದೇ ಇರುವುದರಿಂದ ಈ ವಿಚಾರವನ್ನು ತಕ್ಕಮಟ್ಟಿಗೆ ಬಿಜೆಪಿ ನಿಭಾಯಿಸಿದೆ ಎಂದೇ ಹೇಳಬಹುದು. ಈ ಮಧ್ಯೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆಯೂ ಪ್ರಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಹೋರಾಟಗಳು ನಡೆದಿವೆ. ಚುನಾವಣೆಯಲ್ಲಿ ಈ ವಿಷಯವನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಜ್ಜಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next