Advertisement

ನಕಲಿ ಮತದಾನ ಆರೋಪ: ಮೂಡುಬಿದಿರೆ ಠಾಣೆಗೆ ಮುತ್ತಿಗೆ

12:07 AM May 11, 2023 | Team Udayavani |

ಮೂಡುಬಿದಿರೆ: ವಿದೇಶದಲ್ಲಿರುವವರ ವೋಟರ್‌ ಐಡಿಯ ಪ್ರತಿಯನ್ನು ಬಳಸಿದ ಝಾರ್ಖಂಡ್‌ ಮೂಲದ ಕಾರ್ಮಿಕನೋರ್ವನನ್ನು ಮತಗಟ್ಟೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ತೋಡಾರು ಗ್ರಾಮದ 87ನೇ ಮತಗಟ್ಟೆಯಲ್ಲಿ ಝಾರ್ಖಂಡ್‌ ಮೂಲದ ಪ್ರಕಾಶ್‌ ರಜಕ್‌ ಎಂಬ ನೆಲಹಾಸು (ಟೈಲ್ಸ್‌) ಜೋಡಿಸುವ ಕಾರ್ಮಿಕನೊಬ್ಬ ತಾವು ಕೆಲಸ ಮಾಡುವ ಮನೆಯವರ ವೋಟರ್‌ ಐಡಿಯನ್ನು ಬಳಸಿ ಮತದಾನ ನಡೆಸಲೆತ್ನಿಸಿದ ಎನ್ನಲಾಗಿದೆ. ಈ ಮನೆಯವರು ವಿದೇಶದಲ್ಲಿದ್ದಾರೆ. ಈ ಸಂದರ್ಭ ಜೆಡಿಎಸ್‌ ಪಕ್ಷದವರ ಅನುಮಾನದಿಂದಾಗಿ ಸಿಕ್ಕಿಹಾಕಿಕೊಂಡ ಎನ್ನಲಾಗಿದೆ.

ಆಗ ಎಚ್ಚೆತ್ತ ಬಿಜೆಪಿಯ ನೂರಾರು ಕಾರ್ಯಕರ್ತರು ಮೂಡುಬಿದಿರೆ ಠಾಣೆ ಎದುರು ಜಮಾಯಿಸಿ, ನಕಲಿ ಮತದಾನದ ಹಿಂದಿರುವ ಶಕ್ತಿಗಳನ್ನು ಬಂಧಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಸುನಿಲ್‌ ಆಳ್ವ ಅವರು ಮಾಧ್ಯಮಗಳಿಗೆ ಮಾತನಾಡಿ, “ಇದೊಂದೇ ಪ್ರಕರಣವಲ್ಲ, ವಾಲ್ಪಾಡಿ ಮತ್ತಿತರ ಕಡೆಗಳಲ್ಲೂ ವ್ಯಾಪಕವಾಗಿ ನಕಲಿ ಮತದಾನ ನಡೆದಿರುವ ಬಗ್ಗೆ ಕಾರ್ಯಕರ್ತರಿಂದ ದೂರು ಬಂದಿದೆ. ಊರಲ್ಲಿ ಇಲ್ಲದವರ ಚುನಾವಣ ಗುರುತಿನ ಚೀಟಿ ಈ ಕಾರ್ಮಿಕರಿಗೆ ಸಿಕ್ಕಿರುವುದಾದರೂ ಹೇಗೆ? ಇದನ್ನೆಲ್ಲ ಹೇಳಿ, ಮಾಡಿಸಿದವರಾರು? ಎಲ್ಲ ವ್ಯಕ್ತಿ, ಶಕ್ತಿಗಳ ಬಗ್ಗೆ ಆಮೂಲಾಗ್ರ ತನಿಖೆಯಾಗಬೇಕು ಎಂದು ಬಿಜೆಪಿ ವತಿಯಿಂದ ಪ್ರತ್ಯೇಕ ದೂರು ನೀಡಲಾಗುವುದು ಎಂದರು.

ಈ ವೋಟರ್‌ ಐಡಿಗಳನ್ನು ಕೊಂಚ ಮಸುಕು ಮಾಡಿಸಿ ಅದರಲ್ಲಿರುವ ಚಿತ್ರವನ್ನು ಹೋಲುವ ವ್ಯಕ್ತಿಗಳಿಂದ ಕ್ಷೇತ್ರಾದ್ಯಂತ ವ್ಯಾಪಕವಾಗಿ ನಕಲಿ ಮತದಾನ ಮಾಡಿಸಲಾಗಿದೆ. ಈ ಕುರಿತು ಪೂರ್ಣ ಮಾಹಿತಿ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿದರು. ಪುರಸಭೆ ಸದಸ್ಯ ರಾಜೇಶ್‌ ನಾೖಕ್‌, ಸಮಿತ್‌ರಾಜ್‌ ದರೆಗುಡ್ಡೆ ಸಹಿತ ಕಾರ್ಯಕರ್ತರಿದ್ದರು.
ಎಸ್‌ಐ ಸಿದ್ದಪ್ಪ ಅವರು “ಚುನಾವಣ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ತನಿಖೆ ಮಾಡಲಾಗುವುದು’ ಎಂದು ಭರವಸೆ ಇತ್ತ ಬಳಿಕ ಪ್ರತಿಭಟನಕಾರರು ವಾಪಸಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next