ಮಂಗಳೂರು: ಮಂಗಳೂರು ಚಲೋ ಘೋಷಿಸಿದಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ನಡುಕ ಶುರುಕವಾಗಿದೆ. ಬಿಜೆಪಿ ಕಾರ್ಯಕರ್ತರು ಚೂರಿ, ಬಂದೂಕು ಇಟ್ಕೊಂಡಿದ್ರಾ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ನಮ್ಮ ಹಕ್ಕು. ಆದರೆ ರಾಜ್ಯ ಸರ್ಕಾರ ಬಿಜೆಪಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿ ಬಿಜೆಪಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರಾಜ್ಯ ಸರ್ಕಾರ ಕೊಲೆಗಡುಕರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.
ಕಳೆದ 70 ವರ್ಷಗಳಲ್ಲಿ ದೇಶದಲ್ಲಿ ಲಕ್ಷಾಂತರ ಹೋರಾಟಗಳು ನಡೆದಿವೆ. ಆದರೆ ಶರತ್ ಮಡಿವಾಳ, ಕುಟ್ಟಪ್ಪ ಹಂತಕರನ್ನು ಬಂಧಿಸಿ ಎಂದು ಹೋರಾಟ ಮಾಡುವವ ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ಸರ್ಕಾರ ಬಂಧಿಸುತ್ತಿದೆ. ಆರೋಪಿಗಳನ್ನು ಬಂಧಿಸುವುದು ಬಿಟ್ಟು, ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ದೂರಿದರು.
ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಜ್ಯೋತಿ ಸರ್ಕಲ್ ನಲ್ಲಿಯೇ ಪ್ರತಿಭಟನಾ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.