ಚಿತ್ರದುರ್ಗ: ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆ(ಕೆಎಚ್‌ಎಸ್‌ಡಿಪಿ)ಯ ಟೆಂಡರ್ ಕೊಡಿಸದ ಕಾರಣಕ್ಕೆ ಕಮಿಷನ್ ಆರೋಪ ಮಾಡಿದ್ದಾರೆ. ಈ ಕುರಿತು ಎರಡು ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದು ಶಾಸಕ ಜಿ.ಎಚ್. ತಿಪ್ಪಾ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಎಚ್‌ಎಸ್‌ಡಿಪಿ ಟೆಂಡರ್ ಕೊಡಿಸದ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಕಮಿಷನ್ ಆರೋಪ ಮಾಡಿದ್ದಾರೆ. ಅಷ್ಟು ಕೊಟ್ಟಿದ್ದೇನೆ, ಇಷ್ಟು ಕೊಟ್ಟಿದ್ದೇನೆ ಅಂತ ಹೇಳಿದ್ದಾರೆ. ಆದರೆ ಯಾರಿಗೆ ಕೊಟ್ಟಿದ್ದಾರೆ. ಅಂತ ಗೊತ್ತಿಲ್ಲ. ಮಂಜುನಾಥ್ ಸ್ವಭಾವವೇ ಹೆದರಿಸಿ ಕೆಲಸ ಮಾಡಿಸುವುದಾಗಿದೆ.
ಈ ಹಿಂದೆ ಲೋಕೋಪಯೋಗಿ ಸಚಿವರ ಎದುರೇ ನನ್ನ ವಿರುದ್ಧ ಆರೋಪ ಮಾಡಿದ್ದರು. ಆಗ ಅವರ ಭಾಷಣವನ್ನು ಸಚಿವರೇ ಅರ್ಧಕ್ಕೆ ನಿಲ್ಲಿಸಿದ್ದರು. ಯಾವುದೇ ಕಾಮಗಾರಿ ವಿಚಾರದಲ್ಲಿ ಮಂಜುನಾಥ್ ಹೇಳುವುದೇ ಅಂತಿಮವಾಗಿತ್ತು. ಅಧಿಕಾರಿಗಳಿಗೆ ನಾನು ಜಿಲ್ಲಾಧ್ಯಕ್ಷ ಅಂತ ಬೆದರಿಕೆ ಹಾಕುವುದೂ ಮಾಮೂಲಿಯಾಗಿತ್ತು. ಸಣ್ಣಪುಟ್ಟ ಗುತ್ತಿಗೆದಾರರು ಕೆಲಸ ಕೇಳಿದಾಗ ತಾರತಮ್ಯ ಮಾಡುವ ಜತೆ ನೀವು ಯಾರ ಬೆಂಬಲಿಗರು, ಯಾವ ಪಕ್ಷ ಅಂತ ಕೇಳುತ್ತಿದ್ದ. ಕಾಮಗಾರಿಗಳ ವಿಚಾರದಲ್ಲಿ ಮೊದಲಿನಿಂದಲೂ ನಮ್ಮಿಬ್ಬರ ನಡುವೆ ದ್ವೇಷವಿದೆ. ಚಿತ್ರದುರ್ಗದ ಉಚ್ಚಂಗಿ ಯಲ್ಲಮ್ಮ ದೇಗುಲ ರಸ್ತೆ ಕಾಮಗಾರಿ ಕಳಪೆಯಾಗಿತ್ತು. ಅದನ್ನು ಈಗ ಆರೋಪಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತೇನೆ ಎಂದರು.