ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೈಡ್ರಾಮಾ ಸೃಷ್ಟಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಿಂದ ಪಾದಯಾತ್ರೆ ಹೊರಟ ಕಾಂಗ್ರೆಸ್ ನಾಯಕರನ್ನು ಆನಂದ ರಾವ್ ವೃತ್ತದ ಬಳಿ ಪೊಲೀಸರು ತಡೆದರು. ಆದರೆ ಬ್ಯಾರಿಕೇಡ್ ಹಾರಿ ಮುಂದೆ ಹೋಗಲು ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದರು. ಖುದ್ದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಬ್ಯಾರಿಕೇಡ್ ಮೇಲೆ ಕೆಲ ಹೊತ್ತು ನಿಂತು ಹಂಗಾಮ ಸೃಷ್ಟಿಸಿದರು. ಹೀಗಾಗಿ ಅಂತಿಮವಾಗಿ ಪೊಲೀಸರು ಎಲ್ಲ ನಾಯಕರು ಹಾಗೂ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.
ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಈಶ್ವರಪ್ಪ ಬಂಧನ ಮಾಡುವವರೆಗೂ ನಮ್ಮ ಹೋರಾಟ ಇರುತ್ತದೆ. ಮುಂದಿನ ಐದು ದಿನಗಳ ಕಾಲ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ ಹೊತ್ತಿ ಉರಿಯುವಂತೆ ಮಾಡಿದ್ದ ವ್ಯಕ್ತಿಯನ್ನು ಸರ್ಕಾರ ರಕ್ಷಿಸುತ್ತಿದೆ: ಡಿಕೆಶಿ
ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.