Advertisement

Denotification Case: ಬಿಎಸ್‌ವೈ-ಎಚ್‌ಡಿಕೆ ಮೇಲೆ ಡಿನೋಟಿಫೈ ಅಸ್ತ್ರ

11:50 PM Sep 19, 2024 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಜಂಟಿ ಡಿನೋಟಿಫಿಕೇಷನ್‌ ಪ್ರಕರಣದ ಕುರಿತು ಕೂಡಲೇ ಲೋಕಾಯುಕ್ತದವರು ತಮ್ಮ ತನಿಖೆ ಪೂರೈಸಿ ವರದಿ ಸಲ್ಲಿಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಈ ತನಿಖಾ ವರದಿ ಆಧರಿಸಿ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಗಂಗೇನಹಳ್ಳಿಯ ಬಳಿ 1.11 ಎಕರೆ ಜಮೀನು ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್‌ ಗುಂಡೂರಾವ್‌, ಸಂತೋಷ್‌ ಲಾಡ್‌ ದಾಖಲೆ ಬಿಡುಗಡೆ ಮಾಡಿ ಕಿಡಿಕಾರಿದರು.

ಈ ಇಬ್ಬರು ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಎಷ್ಟು ಪಾಲು ಪಡೆದಿದ್ದಾರೆ ಎಂದು ನಾಡಿನ ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು. ಈ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದರು.

ಏನಿದು ಡಿ-ನೋಟಿಫಿಕೇಶನ್‌ ಪ್ರಕರಣ?
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಮಠದಹಳ್ಳಿ ವ್ಯಾಪ್ತಿಯ ಗಂಗೇನಹಳ್ಳಿಯ ಸರ್ವೇ 7 (1ಸಿ), 7 ಬಿ, 7 ಸಿ, ನಂಬರ್‌ಗಳ ಭೂಮಿಯನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆಂದು 1976 ರಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಸ್ವಾಧೀನ ಮಾಡಿಕೊಂಡಿರುತ್ತಾರೆ. 1978ಕ್ಕೆ ಸಂಪೂರ್ಣ ಭೂಸ್ವಾಧೀನ ಮುಗಿದು ಹೋಗಿರುತ್ತದೆ. ಈ ಭೂಮಿಗೆ ಸಂಬಂದವೇ ಇಲ್ಲದ ಜಮೀನು ಮೂಲ ಮಾಲಕರಿಗೂ ಸಂಬಂಧ ಪಡದ ದಾರಿಯಲ್ಲಿ ಹೋಗುವ ದಾಸಯ್ಯ ರಾಜಶೇಖರಯ್ಯ ಎನ್ನುವ ವ್ಯಕ್ತಿ ಡಿನೋಟಿಫಿಕೇಷನ್‌ ಮಾಡಿ ಎಂದು 2007ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅರ್ಜಿ ನೀಡುತ್ತಾನೆ. ಈ ರಾಜಶೇಖರಯ್ಯ ಎನ್ನುವ ವ್ಯಕ್ತಿ ಯಾರು ಎಂಬುದೇ ಇದುವರೆಗೂ ಯಾರಿಗೂ ಗೊತ್ತಿಲ್ಲ ಎಂದು ಆರೋಪಿಸಿದರು.

ಡಿನೋಟಿಫಿಕೇಷನ್‌ ಮಾಡಿ ಎಂದು ಬಂದಿದ್ದ ಅರ್ಜಿಯನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಕ್ರಮಕ್ಕೆ ಮುಂದಾಗುತ್ತಾರೆ. ಎಲ್ಲ ಅಭಿಮಾನಿಗಳು ಇದು 30 ವರ್ಷದ ಹಿಂದೆ ನಡೆದ ಪ್ರಕರಣ ಎಂದರೂ ಮತ್ತೂಮ್ಮೆ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ಭೂಸ್ವಾಧೀನ ಆಗಿರುವ ಭೂಮಿಯ ನಿಜವಾದ ಮಾಲಕರಾದ 21 ಜನರ ಜತೆಗೆ ಕುಮಾರಸ್ವಾಮಿ ಅವರ ಅತ್ತೆ ಜಿಪಿಎ ಮಾಡಿಕೊಂಡಿದ್ದಾರೆ. ಆನಂತರ ಸಮ್ಮಿಶ್ರ ಸರಕಾರ ಬಿದ್ದು ಹೋದ ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಅನಂತರ ಈ ಫೈಲ್‌ ಅನ್ನು ಪುಟ್‌ಅಪ್‌ ಮಾಡುತ್ತಾರೆ ಎಂದು ವಿವರಿಸಿದರು.

Advertisement

ಬಾಮೈದನ ಹೆಸರಿಗೆ ರಿಜಿಸ್ಟರ್‌
ಅಂದಿನ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಜ್ಯೋತಿ ರಾಮಲಿಂಗಂ ಅವರು ಈ ಪ್ರಕರಣ ಡಿ ನೋಟಿಫಿಕೇಶನ್‌ಗೆ ಅರ್ಹವಲ್ಲ ಎಂದು ಷರಾ ಬರೆಯುತ್ತಾರೆ. ಅಧಿಕಾರಿಗಳ ಎಲ್ಲ ಸೂಚನೆಗಳನ್ನು ಗಾಳಿಗೆ ತೂರಿದ ಯಡಿಯೂರಪ್ಪ ಅವರು ಈ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು 2009ರಲ್ಲಿ ತಮ್ಮ ಕೈಯಾರೇ ಬರೆಯುತ್ತಾರೆ. ಡಿನೋಟಿಫಿಕೇಷನ್‌ ಆದ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ರಿಜಿಸ್ಟರ್‌ ಆಗುತ್ತದೆ. ಇದೊಂದು ವ್ಯವಸ್ಥಿತವಾದ ದರೋಡೆ. ಸತ್ತವರಿಂದ ಕುಮಾರಸ್ವಾಮಿ ಅವರ ಅತ್ತೆಯ ಹೆಸರಿಗೆ ಜಿಪಿಎ ಆಗುತ್ತದೆ. ಆನಂತರ ಬಾಮೈದನ ಹೆಸರಿಗೆ ರಿಜಿಸ್ಟರ್‌ ಆಗುತ್ತದೆ. ಲೋಕಾಯುಕ್ತ ಈ ಪ್ರಕರಣದ ತನಿಖೆ ನಡೆಸುತ್ತದೆ. ಈ ಪ್ರಕರಣವನ್ನು ವಜಾ ಮಾಡಬೇಕೆಂದು ಯಡಿಯೂರಪ್ಪನವರು ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ.

ಹೈಕೋರ್ಟ್‌ ಯಡಿಯೂರಪ್ಪನವರ ಅರ್ಜಿ ವಜಾ ಮಾಡಿ ಅವರಿಗೆ 25 ಸಾವಿರ ರೂ. ದಂಡ ಹಾಕಿದೆ ಎಂದು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next