Advertisement
ಯುಬಿಸಿಟಿಯ “ಫರ್ಜಿ ಕೆಫೆ’ಯಲ್ಲಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ವಿದ್ವತ್ ಮೇಲೆ ಹಲ್ಲೆ ನಡೆದಿದೆ. ಈ ಘಟನೆ ಸಂಬಂಧ ವಿದ್ವತ್ ಸ್ನೇಹಿತ ಪ್ರವೀಣ್ ವೆಂಕಟಾಚಲಯ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಕಲಂ 341, 504, 143 ಸೇರಿದಂತೆ ಇನ್ನಿತರೆ ಕಲಂಗಳ ಅಡಿಯಲ್ಲಿ ಮೊಹಮದ್ ನಲಪಾಡ್ ಹ್ಯಾರಿಸ್ ಹಾಗೂ ಇನ್ನಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಲಪಾಡ್ ಪ್ರಕರಣದ ಮೊದಲನೇ ಆರೋಪಿಯನ್ನಾಗಿ ಪರಿಗಣಿಸಲಾಗಿದ್ದು, ಹಲ್ಲೆ ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಆತ ತಲೆ ಮರೆಸಿಕೊಂಡಿದ್ದಾನೆ.
ಪೀಣ್ಯಾ ಕೈಗಾರಿಕಾ ವಲಯದಲ್ಲಿ ಸ್ವಂತ ಉದ್ದಿಮೆ ಹೊಂದಿರುವ ಲೋಕನಾಥ್ ಪುತ್ರ ವಿದ್ವತ್ ವಿದೇಶದಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ್ದು, ಇತ್ತೀಚೆಗೆ ನಗರಕ್ಕೆ ವಾಪಾಸ್ ಆಗಿದ್ದರು. ಶನಿವಾರ ರಾತ್ರಿ 10ರ ಸುಮಾರಿಗೆ ಯುಬಿ ಸಿಟಿಯ “ಫರ್ಜಿ ಕೆಫೆ’ಗೆ ಸ್ನೇಹಿತರ ಜೊತೆ ಊಟಕ್ಕೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ನಲಪಾಡ್ ಹ್ಯಾರಿಸ್ ಕೂಡ ಬೆಂಬಲಿಗರ ಜೊತೆ ಆಗಮಿಸಿದ್ದ. ಅಕ್ಕ-ಪಕ್ಕದ ಟೇಬಲ್‌ಗಳಲ್ಲಿ ಕುಳಿತುಕೊಂಡಿದ್ದರು.
Related Articles
Advertisement
ಬಿಜೆಪಿ- ಆಪ್ ಪ್ರತಿಭಟನೆ :ಶಾಸಕರ ಪುತ್ರನ ಈ ಗೂಂಡಾಗಿರಿ ಪ್ರಕರಣ ಭಾನುವಾರ ಮಧ್ಯಾಹ್ನದ ವೇಳೆ ತೀವ್ರ ಸ್ವರೂಪ ಪಡೆದುಕೊಂಡಿತು. ತಲೆಮರೆಸಿಕೊಂಡಿರುವ ನಲಪಾಡ್ ಬಂಧನಕ್ಕೆ ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು ಮಲ್ಯ ಆಸ್ಪತ್ರೆ ಮುಂಭಾಗ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಪೊಲೀಸರು ಸೂಕ್ತ ತನಿಖೆ ನಡೆಸದೇ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಹ್ಯಾರಿಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರನ್ನು ಪೊಲೀಸರು ಸಮಾಧಾನಪಡಿಸಲು ಹರಸಾಹಸ ಪಡುವಂತಾಯಿತು. ಕೊನೆಗೆ ಕೂಡಲೇ ಆರೋಪಿ ನಲಪಾಡ್ ಬಂಧಿಸುವಂತೆ ಆಗ್ರಹಿಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಇದಲ್ಲದೇ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಕಾರ್ಯಕರ್ತರು ಶಾಂತಿನಗರದಲ್ಲಿರುವ ಶಾಸಕ ಹ್ಯಾರಿಸ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಗೂಂಡಾ ಹ್ಯಾರಿಸ್, ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಹ್ಯಾರಿಸ್ ಬೆಂಬಲಿಗರು ಹಾಗೂ ಆಪ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆ ತಿಳಿಗೊಳಿಸಿದರು. ಆಸ್ಪತ್ರೆ ಬಳಿ ಬಂದು ಧಮ್ಕಿ!
ಮಾರಾಣಾಂತಿಕ ಹಲ್ಲೆಗೊಳಗಾದ ವಿದ್ವತ್‌ರನ್ನು ಕೂಡಲೇ ಆತನ ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ವಿದ್ವತ್ ಸಹೋದರ ಸಾತ್ವಿಕ್ ಹಾಗೂ ತಂದೆ ಆಸ್ಪತ್ರೆ ಬಳಿಗೆ ಬಂದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿದ್ವತ್‌ಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಷ್ಟಾದ ಬಳಿಕವೂ 10-15 ನಿಮಿಷಗಳ ಅಂತರದಲ್ಲಿಯೇ ಮಲ್ಯ ಆಸ್ಪತ್ರೆ ಬಳಿ ಬೆಂಬಲಿಗರ ಜೊತೆ ಬಂದ ನಲಪಾಡ್, ವಿದ್ವತ್ ಸಹೋದರನ ಬಳಿ ತೆರಳಿ “ನಿನ್ನ ತಮ್ಮ ನಮಗೆ ಅವಾಜ್ ಹಾಕ್ತಾನೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಧಮಕಿ ಹಾಕಿ ವಾಪಾಸ್ ಬಂದಿದ್ದಾನೆ. ಗೂಂಡಾಗಿರಿ ಇದೇ ಮೊದಲಲ್ಲ ?
ಶಾಸಕರ ಪುತ್ರ ನಲಪಾಡ್ ವಿರುದ್ಧ ಈ ಹಿಂದೆ 2016ರಲ್ಲಿ ಶಾಂತಿನನಗರದ ಪೆಬಲ್ ಬೇ ಪಬ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಹಲ್ಲೆ ನಡೆಸಿದ್ದು ಹಾಗೂ ಬೌರಿಂಗ್ ಆಸ್ಪತ್ರೆಯ ಸೆಕ್ಯೂರಿಟಿಯೊಬ್ಬರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪಗಳು ಕೇಳಿ ಬಂದಿದ್ದವು.