Advertisement
ತೀವ್ರ ಜಿದ್ದಾಜಿದ್ದಿಯಾಗಿದ್ದ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ಸರಕಾರವನ್ನು ಎದುರು ಹಾಕಿಕೊಂಡಿದ್ದ ಸುಮಲತಾ ಗೆಲ್ಲುವ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಹಾಗೂ ಚಾಮರಾಜನಗರದಲ್ಲಿ ಧ್ರುವನಾರಾಯಣ್ ಸೋಲು ಕಾಣುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಖಭಂಗವಾಗಿದೆ. ಚಾಮರಾಜನಗರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಕಾಂಗ್ರೆಸ್ ಗೆಲುವಿಗೆ ತಡೆಯೊಡ್ಡಿದ್ದಾರೆ.
Related Articles
Advertisement
ತುಮಕೂರಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತಾದರೂ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ತುಮಕೂರು ಜೆಡಿಎಸ್ಗೆಬಿಟ್ಟುಕೊಡಲಾಗಿತ್ತು. ಅಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಸೋಲು ಅನುಭವಿಸಿದ್ದಾರೆ. ಇನ್ನು ಜೆಡಿಎಸ್ ಕಳೆದ ಬಾರಿ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದು ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಒಂದು ಸ್ಥಾನ ಜೆಡಿಎಸ್ ಕಳೆದುಕೊಂಡಿದೆ. ಬಿಜೆಪಿಯು ರಾಜ್ಯದಲ್ಲಿ 24 ಕ್ಷೇತ್ರಗಳನ್ನು ಗೆದ್ದಿದ್ದು, ಹೊಸ ಮುಖಗಳಾದ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಕೋಲಾರದಲ್ಲಿ ಮುನಿಸ್ವಾಮಿ, ಬಳ್ಳಾರಿಯಲ್ಲಿ ದೇವೇಂದ್ರಪ್ಪ, ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ, ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ ಅವರೂ ಜಯಗಳಿಸಿದ್ದಾರೆ.
ಜತೆಗೆ ಹಾಲಿ ಸಂಸದರಾದ ಅನಂತಕುಮಾರ್ ಹೆಗಡೆ, ಡಿ.ವಿ. ಸದಾನಂದ ಗೌಡ, ರಮೇಶ್ ಜಿಗಜಿಣಗಿ, ಶಿವಕುಮಾರ್ ಉದಾಸಿ, ಗದ್ದಿಗೌಡರ್, ಪ್ರತಾಪ ಸಿಂಹ, ನಳಿನ್ ಕುಮಾರ್, ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್, ಪ್ರಹ್ಲಾದ್ ಜೋಶಿ, ಬಿ.ವೈ. ರಾಘವೇಂದ್ರ, ಕರಡಿ ಸಂಗಣ್ಣ ಗೆಲುವು ಸಾಧಿಸಿದ್ದಾರೆ. ಹಿರಿಯರಾದ ಬಚ್ಚೇಗೌಡ, ಶ್ರೀನಿವಾಸ ಪ್ರಸಾದ್ ಸಹ ಸಂಸತ್ ಪ್ರವೇಶಿಸಿದ್ದಾರೆ. ಉಪ ಚುನಾವಣೆ: ಕೈಗೆ ಒಂದು ಗೆದ್ದ ಸಮಾಧಾನ
2 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 1 ಸ್ಥಾನ ಗೆದ್ದುಕೊಂಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದ ಕುಂದಗೋಳದಲ್ಲಿ ಕಾಂಗ್ರೆಸ್‌ನ ಕುಸುಮಾ ಶಿವಳ್ಳಿ ಗೆದ್ದಿದ್ದು, ಬಿಜೆಪಿಯ ಚಿಕ್ಕನಗೌಡ ಸೋತಿದ್ದಾರೆ. ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಉಸ್ತುವಾರಿ ವಹಿಸಿಕೊಂಡಿದ್ದ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುಭಾಷ್ ರಾಥೋಡ್ ಸೋಲು ಅನುಭವಿಸಿ ಬಿಜೆಪಿಯ ಅವಿನಾಶ್ ಯಾದವ್ ಜಯಗಳಿಸಿದ್ದಾರೆ.