Advertisement

ಸಂಪುಟ ಸರ್ಕಸ್‌: ದಿಲ್ಲಿ ನಡೆ ನಿಗೂಢ; ಮೂವರನ್ನು ಕೈ ಬಿಡಲು ಬಿಎಸ್‌ವೈ ಚಿಂತನೆ

12:49 AM Sep 29, 2020 | mahesh |

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಅಂತ್ಯವಾಗಿದ್ದು, ಇದರ ಬೆನ್ನಲ್ಲೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬೇಡಿಕೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಸಿಎಂ ಯಡಿಯೂರಪ್ಪ ಅವರು ಇನ್ನು ಮೂರು ದಿನಗಳಲ್ಲಿ ದಿಲ್ಲಿಗೆ ಹೋಗಿ ಬರುತ್ತೇನೆ ಎಂದಿರುವುದು ಸಂಪುಟ ಆಕಾಂಕ್ಷಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಎಲ್ಲವೂ ಅಂದುಕೊಂಡಂತಾದರೆ ಅ.5 ರೊಳಗೆ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.

Advertisement

ಮೂಲಗಳ ಪ್ರಕಾರ ಈ ಬಾರಿ ವಿಸ್ತರಣೆಗಿಂತ ಪುನಾರಚನೆಯೇ ಆಗುವ ಸಾಧ್ಯತೆ ಹೆಚ್ಚು. ಸಂಪುಟದಿಂದ ಮೂವರನ್ನು ಕೈಬಿಡಲು ಬಿಎಸ್‌ವೈ ಚಿಂತನೆ ನಡೆಸಿದ್ದಾರೆ. ಜತೆಗೆ ಹೊಸದಾಗಿ 8 ಮಂದಿಯನ್ನು ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಂಪುಟ ಸೇರಲು ಎಸ್‌. ಅಂಗಾರ, ಸುನಿಲ್‌ಕುಮಾರ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅರವಿಂದ ಲಿಂಬಾವಳಿ, ಉಮೇಶ್‌ ಕತ್ತಿ, ಬಸನಗೌಡ ಪಾಟೀಲ್‌ ಯತ್ನಾಳ್‌, ತಿಪ್ಪಾರೆಡ್ಡಿ ತುದಿಗಾಲಲ್ಲಿ ನಿಂತಿದ್ದಾರೆ.

ವರಿಷ್ಠರ ತೀರ್ಮಾನವೇನು?
ಸಂಪುಟದಿಂದ ಹೊರ ಹೋಗುವವರು ಮತ್ತು ಒಳಬರುವವರ ಬಗ್ಗೆ ಅಂತಿಮವಾಗುವುದು ಸಿಎಂ ಅವರ ದಿಲ್ಲಿ ಭೇಟಿ ಅನಂತರವೇ. ಸಿ.ಟಿ. ರವಿ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಅವರಿಂದ ತೆರವಾಗುವ ಸಚಿವ ಸ್ಥಾನವನ್ನು ಅದೇ ಸಮುದಾಯದವರಿಗೆ ಕೊಡಬೇಕು ಎಂದು ಆಕಾಂಕ್ಷಿಗಳು ಪಟ್ಟು ಹಿಡಿಯುವ ಸಾಧ್ಯತೆಯಿದೆ. ಜತೆಗೆ ಚಿಕ್ಕಮಗಳೂರು ಅಥವಾ ನೆರೆಯ ಜಿಲ್ಲೆಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಯೂ ಬರಬಹುದು.

ಬಿಎಸ್‌ವೈ ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ದಿಲ್ಲಿಗೆ ತೆರಳಿ ಸಂಪುಟ ವಿಸ್ತರಣೆ ಯಾ ಪುನಾರಚನೆ ಸಂಬಂಧ ವರಿಷ್ಠರನ್ನು ಭೇಟಿ ಮಾಡಿದ್ದರು. ಆದರೆ ಅಧಿವೇಶನದಲ್ಲಿ ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಿದ್ದುದರಿಂದ ಸಮಸ್ಯೆಯಾಗಬಹುದು ಎಂದು ವರಿಷ್ಠರು ಒಪ್ಪಿಗೆ ನೀಡಿರಲಿಲ್ಲ. ಅವಿಶ್ವಾಸ ನಿರ್ಣಯದ ಬಗ್ಗೆಯೂ ಬಿಜೆಪಿ ವರಿಷ್ಠರಿಗೆ ಸುಳಿವು ದೊರೆತಿತ್ತು ಎನ್ನಲಾಗುತ್ತಿದೆ.

ಸಿ.ಟಿ. ರವಿ ರಾಜೀನಾಮೆ?
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಡ್ತಿ ಹೊಂದಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ತೆರವಾಗುವ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ.

Advertisement

ಸದ್ಯ ಆರು ಸ್ಥಾನ ಖಾಲಿ
ಈಗ 6 ಸಚಿವ ಸ್ಥಾನಗಳು ಖಾಲಿ ಇವೆ. ಬಿಎಸ್‌ವೈ ಚಿಂತನೆಯಂತೆ ಮೂವರನ್ನು ಕೈಬಿಟ್ಟರೆ ಖಾಲಿ ಸ್ಥಾನಗಳ ಸಂಖ್ಯೆ 9ಕ್ಕೆ ಏರಲಿದೆ. ಸಿ.ಟಿ. ರವಿ ರಾಜೀನಾಮೆ ಕೊಟ್ಟರೆ ಹತ್ತಕ್ಕೇರಲಿದೆ. ಎಂ.ಟಿ.ಬಿ. ನಾಗರಾಜ್‌, ಆರ್‌. ಶಂಕರ್‌ ಸಂಪುಟ ಸೇರುವುದು ಖಚಿತ. ಇತ್ತೀಚೆಗೆ ಶಾಸಕರ ಸಭೆಯಲ್ಲೂ ಈ ಇಬ್ಬರು ಸಂಪುಟ ಸೇರುವ ಬಗ್ಗೆ ಬಿಎಸ್‌ವೈ ಹೇಳಿದ್ದು, ಇವರಿಬ್ಬರನ್ನು ಸೇರಿಸಿಕೊಳ್ಳಲು ವರಿಷ್ಠರಿಂದಲೂ ಆಕ್ಷೇಪ ಇದ್ದ ಹಾಗಿಲ್ಲ.

ಮೂರು ದಿನಗಳಲ್ಲಿ ದಿಲ್ಲಿಗೆ ಹೋಗಿ ಬಂದ ಅನಂತರ ಸಂಪುಟ ವಿಸ್ತರಣೆಗೆ ಮುಂದಾಗುತ್ತೇನೆ.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next